»   » ‘ತ್ರಿಬ್ಬಲ್‌ ಪಿ’ ಹ್ಯಾಂಗೋವರ್‌ನಲ್ಲಿ ಅನಂತನಾಗ್‌

‘ತ್ರಿಬ್ಬಲ್‌ ಪಿ’ ಹ್ಯಾಂಗೋವರ್‌ನಲ್ಲಿ ಅನಂತನಾಗ್‌

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಐದು ವರ್ಷ ವಯಸ್ಸು ತಗ್ಗಿಸಿಕೊಂಡ ಹುಮ್ಮಸ್ಸು ಅನಂತ ನಾಗ್‌ ಮೊಗದಲ್ಲಿತ್ತು. ‘ಪ್ರೀತಿ ಪ್ರೇಮ ಪ್ರಣಯ’ (ತ್ರಿಬ್ಬಲ್‌ ಪಿ) ದಾಟದ ನಟನೆ ಕೊಟ್ಟಿರುವ ಮುದದ ಗುದ್ದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿತ್ತು. ಅನಂತ್‌ ಈಗ ಪೂರಾ ಬ್ಯುಸಿ. ತ್ರಿಬ್ಬಲ್‌ ಪಿ ಅಲ್ಲದೆ ಲಂಕೇಶ್‌ ಪತ್ರಿಕೆ, ಮೌನಿ ಕನ್ನಡ ಚಿತ್ರಗಳು ಕೈಯಲ್ಲಿವೆ. ಮರಾಠಿ ಹಾಗೂ ಹಿಂದಿ ನಾಟಕ ಆಧರಿಸಿದ 6ನೇ ಶತಮಾನದ ಪೀರಿಯಡ್‌ ಚಿತ್ರ ಕ್ಯೂನಲ್ಲಿದೆ. ಇದು ಅಮೂಲ್‌ ಪಾಲೇಕರ್‌ ಚಿತ್ರ ಅನ್ನುವುದು ಹಾಗೂ ಅವರು ಅನಂತ್‌ ಅವರನ್ನು ಹುಡುಕಿಕೊಂಡು ಬಂದಿರುವುದು ಅನಂತರೊಳಗಿನ ನಟನ ಅಗ್ಗಳಿಕೆ. ಅನಂತ್‌ ಜೊತೆ ಸೋನಾಲಿ ಬೇಂದ್ರೆ ನಟಿಸಲಿರುವುದು ಬಯಸದೇ ಬಂದಿರುವ ಭಾಗ್ಯ. ಅಮೂಲ್‌ ಗುರಿ ಅವಾರ್ಡಿನತ್ತ ಇದ್ದೇ ಇರುತ್ತದೆ ಅನ್ನುವುದು ಅನಂತ್‌ಗೆ ಸಂದಿರುವ ಬೋನಸ್ಸು.

ಒಟ್ಟಿನಲ್ಲಿ ಅನಂತ್‌ ಈಗ ಆನಂದ ತುಂದಿಲರಾಗಿದ್ದಾರೆ. ಬೆಂಗಳೂರಿನ ಓಬೆರಾಯ್‌ ಹೊಟೇಲಿನ ಸಂತೋಷ ಕೂಟದಲ್ಲಿ ಅವರ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಅವರೇ ಮಾತಾಡುತ್ತಾರೆ ಕೇಳಿ...

‘ಹದಿನಾರು ವರ್ಷಗಳ ಹಿಂದೆ ಲಂಕೇಶ್‌ ಜೊತೆ ಅನುರೂಪ ಅನ್ನುವ ಸಿನಿಮಾ ಕೆಲಸದಲ್ಲಿ ತೊಡಗಿದ್ದೆ. ಆಗ ಕವಿತಾ 5ನೇ ಕ್ಲಾಸಿನ ಹುಡುಗಿ. ನನ್ನ ಕೈ ಹಿಡಿದುಕೊಂಡು ಅವಳು ನಡೆದುಕೊಂಡು ಬಂದಿದ್ದು ಇನ್ನೂ ನೆನಪಿದೆ. ಇವತ್ತು ನನ್ನನ್ನು ಡೈರೆಕ್ಟ್‌ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ. ಕನ್ನಡ ಸಿನಿಮಾದಲ್ಲಿ ಬೋಲ್ಡ್‌ ಥೀಮ್‌ ಹಾಕುವ ತಾಕತ್ತು ಅವಳಿಗೆ ಇದೆ. ಆಕೆಗೆ ಸ್ಪಷ್ಟವಾದ ಸಿದ್ಧಾಂತಗಳಿವೆ. ಹಿಂದಿ ಮತ್ತು ಇಂಗ್ಲಿಷ್‌ ಚಿತ್ರಗಳನ್ನೂ ಮಾಡುವುದು ಆಕೆಯ ಕನಸು. ಅದು ನನಸಾಗಲಿ ಅಂತ ಹಾರೈಸುತ್ತೇನೆ.

‘ಪ್ರೀತಿ ಪ್ರೇಮ ಪ್ರಣಯ’ದಲ್ಲಿ ನನ್ನದು ಹಾಗೂ ಭಾರತಿ ಅವರದ್ದು ವಿಧುರ ಹಾಗೂ ವಿಧವೆಯ ಪಾತ್ರ. ಇಬ್ಬರೂ ಗೆಳೆಯರಾಗುತ್ತೇವೆ. ನರೆಗೂದಲಿನ ನಾನು ಆಕೆಯ ಕಪ್ಪು ಕೂದಲು ನೋಡಿ ಡೈ ಹಾಕೋಕೆ ಶುರುಮಾಡುತ್ತೇನೆ. ತಮಾಷೆಯ ಧಾಟಿಯ ಈ ಚಿತ್ರದಲ್ಲಿ ಪಂಚ್‌ ಇದೆ. ಸುಧಾರಾಣಿ ಜೊತೆ ಈಗಾಗಲೇ ಒಂದು ಕಾಮಿಡಿ ಚಿತ್ರ ಮಾಡಿದ್ದೆ. ಈ ಚಿತ್ರದಲ್ಲಿ ಆಕೆ ನನ್ನ ಸೊಸೆ ಪಾತ್ರ ಮಾಡಿದ್ದಾಳೆ....’ ಅನಂತ್‌ ಪಾರ್ಟಿಯ ಭರಾಟೆಯಲ್ಲಿ ಮಾತನ್ನು ನಿಲ್ಲಿಸಲೇಬೇಕಾಯಿತು.

ಆಮೇಲೆ ಮಾತಿಗೆ ನಿಂತಿದ್ದು ಕವಿತಾ ಲಂಕೇಶ್‌. ಹೈ ಕ್ಯಾಲಿಬರ್‌ನ ನಟ- ನಟಿಯರ ಜೊತೆ ಕೆಲಸ ಮಾಡಿದ ಅನುಭವ ಸೊಗಸಾಗಿತ್ತು. ಅದರಲ್ಲೂ ಅನಂತ ನಾಗ್‌ ಅದ್ಭುತ ನಟ. ಈ ಸಿನಿಮಾಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಸಿಗುತ್ತೆ ಅಂತ ನಾನು ಈಗಲೇ ಕನಸು ಕಾಣುತ್ತಿದ್ದೇನೆ. ಈ ಸಿನಿಮಾ ಮುಗಿದ ಮೇಲೆ ನಾನೊಂದು ಆಸ್ಟ್ರೇಲಿಯನ್‌ ಸಿನಿಮಾ ಮಾಡಲಿದ್ದೇನೆ ಎಂದು ಕವಿತಾ ಸಂಕ್ಷಿಪ್ತ ಮಾತು ಮುಗಿಸಿದರು.

ಪ್ರೀತಿ ಪ್ರೇಮ ಪ್ರಣಯದ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿದ ತೃಪ್ತ ಭಾವನೆಯಲ್ಲಿ ನಗುತ್ತಿತ್ತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada