For Quick Alerts
  ALLOW NOTIFICATIONS  
  For Daily Alerts

  ನಿವೃತ್ತಿ ಘೋಷಿಸಿದ್ದ ಸ್ಪರ್ಶ ರೇಖಾ ಮತ್ತೆ ಬಣ್ಣ ಹಚ್ಚಲು ರೆಡಿ

  By Super
  |

  ಸ್ಪರ್ಶ ರೇಖಾ ತಮ್ಮ ನಿಲುವು ಬದಲಿಸಿದ್ದಾರೆ. ಸ್ವಯಂ ನಿವೃತ್ತಿಯ ನಿರ್ಧಾರವನ್ನು ವಾಪಸ್ಸು ಪಡೆದಿದ್ದಾರೆ. ಆದರೆ, ಇನ್ನು ಮುಂದೆ ಅವರು ಅಭಿನಯಿಸುವುದು ಒಳ್ಳೆಯ ಪಾತ್ರಗಳನ್ನು ಮಾತ್ರ. ಎಂದಿನ ಅವರ ಮಂತ್ರ- ಓದಿಗೇ ಪ್ರಾಶಸ್ತ್ಯ.

  ರೇಖಾ ತಮ್ಮ ಪಟ್ಟು ಸಡಿಲಿಸಲು ಅಭಿಮಾನಿಗಳ ಒತ್ತಾಯವೇ ಕಾರಣ. ಸಿನಿಮಾಗೆ ಟಾಟಾ ಹೇಳಿದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಂಡ ಅಭಿಮಾನಿಗಳು- ಬೇಡ, ನೀವು ಆ್ಯಕ್ಟ್‌ ಮಾಡಲೇಬೇಕು ಅಂತ ಪತ್ರಿಸಿ, ಫೋನಾಯಿಸಿ ರೇಖಾ ಅವರಿಗೆ ಬಲವಂತ ಮಾಡಿದ್ದಾರೆ. ಅಭಿಮಾನಿಗಳ ಮಾತಿಗೆ ಬೆಲೆ ಕೊಡಲೇಬೇಕಲ್ಲವೇ ಎಂದು ನಗುತ್ತಾರೆ ರೇಖಾ.

  ಸಿನಿಮಾ ಯಾವತ್ತೂ ನನಗೆ ಒಂದು ಹವ್ಯಾಸ ಅಷ್ಟೆ. ಅದು ವೃತ್ತಿಯಲ್ಲ. ಬಿಬಿಎಂ ಓದಿಗೆ ನನ್ನ ಸದ್ಯದ ಹೆಚ್ಚಿನ ಗಮನ. ಪರೀಕ್ಷೆಗಾಗಿ ಓದುತ್ತಿದ್ದೇನೆ. ಅದು ಮುಗಿದ ನಂತರ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸುವ ಮನಸ್ಸು ಮಾಡುತ್ತೇನೆ. ಅದೂ ಕತೆ ಚೆನ್ನಾಗಿರಬೇಕು, ನನ್ನ ಪಾತ್ರಕ್ಕೆ ತೂಕ ಇರಬೇಕು; ಹಾಗಿದ್ದರೆ ಮಾತ್ರ.

  ಐಪಿಎಸ್‌ ಅಧಿಕಾರಿ ಆಗುವ ಕನಸು ಕಾಣುತ್ತಿರುವ ರೇಖಾ ಸಿನಿಮಾಗೆ ಬಂದದ್ದು ಆಕಸ್ಮಿಕ. ಮಾಡೆಲಿಂಗ್‌ ಮಾಡುವುದು ಈಕೆಯ ಹಾಬಿ. ಮಹಾರಾಣಿ ಕಾಲೇಜಿನ ಓದಿನ ನಡುವೆ ಕ್ರೀಡೆಗಳಲ್ಲಿ ಮಿಂಚುತ್ತಿದ್ದ ರೇಖಾ ಅವರ ಎತ್ತರ, ಮುಖಭಾವ ಕಂಡು ದೇಸಾಯಿ ಸ್ಪರ್ಶ ಚಿತ್ರಕ್ಕೆ ಆರಿಸಿದರು. ನಂತರ ಬಾನಲ್ಲು ನೀನೆ ಭುವಿಯಲ್ಲು ನೀನೆ, ಪರ್ವ ಹಾಗೂ ಮೆಜೆಸ್ಟಿಕ್‌ ಚಿತ್ರಗಳಲ್ಲಿ ಅವಕಾಶ. ಈ ಎಲ್ಲಾ ಚಿತ್ರಗಳೂ ರೇಖಾಗೆ ಹೆಸರು ತಂದುಕೊಟ್ಟವು. ಬಾನಲ್ಲು ನೀನೆ... ಬಿಟ್ಟು ಮಿಕ್ಕ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲೂ ಪರವಾಗಿಲ್ಲ ಅನಿಸಿಕೊಂಡಿವೆ.

  ರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡೆಗಳಲ್ಲೂ ಭಾಗವಹಿಸಿರುವ ರೇಖಾ ಹೇಳುವಂತೆ- ಒಬ್ಬ ವ್ಯಕ್ತಿಗೆ ಜೀವನದ ಬಹುಮುಖ ಕ್ಷೇತ್ರಗಳ ಪರಿಚಯವಿರಬೇಕು. ಹಾಗಂತ ಗುರಿ ಬದಲಿಸಬಾರದು. ಅಂಥಾ ಒಂದು ಅನುಭವ ನನಗೆ ಸಿನಿಮಾ ಕ್ಷೇತ್ರದಲ್ಲೂ ಸಿಗುವುದಾದರೆ ಯಾಕೆ ಬೇಡ, ಹೇಳಿ? ಆದರೆ ದುಡ್ಡು ಮಾಡುವುದು ನನ್ನ ಇರಾದೆಯಲ್ಲ. ಈ ಕಾರಣಕ್ಕೇ ನಾನು ಬಂದ ಸಿನಿಮಾ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ.

  ರೇಖಾ ಅವರೊಟ್ಟಿಗೆ ಮಾತಿಗೆ ಕೂತರೆ ಅರ್ಧ ತಾಸಿನ ನಂತರ ಅದು ಪರಿಸರ ಪ್ರೇಮದ ಸ್ವರೂಪ ಪಡೆದುಕೊಳ್ಳುತ್ತದೆ. ಯಾಕೆಂದರೆ, ರೇಖಾ ಪರಿಸರ ರಕ್ಷಿಸಿ ಎಂದು ಮನವಿ ಮಾಡುವ ಸುರೇಶ್‌ ಹೆಬ್ಳೀಕರ್‌ ಅಂಥವರ ಸಾಲಿಗೂ ಸೇರಿದ್ದಾರೆ. ಅವರ ಪರಿಸರ ಕಾಳಜಿ ಹೀಗಿದೆ- ಸಾಮಾನ್ಯ ಜನರಲ್ಲಿ ಅಷ್ಟೇ ಅಲ್ಲ, ಸಿನಿಮಾ ಸೆಟ್‌ಗಳಲ್ಲೂ ಪರಿಸರದ ಬಗ್ಗೆ ಕಾಳಜಿಯಿಲ್ಲ. ಗಲೀಜು ಜನ. ಸಿನಿಮಾ ಸೆಟ್‌ಗಳಲ್ಲಿ ಕೆಲಸ ಮಾಡುವಾಗ ಅಲ್ಲಿ- ಇಲ್ಲಿ ಬಿಸುಟ ಪ್ಲಾಸ್ಟಿಕ್‌ ಲೋಟಗಳನ್ನು ನಾನೇ ಎತ್ತಿಕೊಂಡು ಕಸದ ಬುಟ್ಟಿಗೆ ಹಾಕಿದ್ದೇನೆ. ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿಮಾ ಯೂನಿಟ್‌ಗಳನ್ನು ಪರಿಸರ ಮಿತ್ರರನ್ನಾಗಿಸಲು, ಅಲ್ಲಿ ಕೆಲಸ ಮಾಡುವವರಿಗೆ ಸೂಕ್ತ ಶಿಕ್ಷಣ ಕೊಡಬೇಕು !

  English summary
  Rekhas dilemma- films or studies?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X