For Quick Alerts
  ALLOW NOTIFICATIONS  
  For Daily Alerts

  ಹಂಸಗೀತೆ, ಆದಿಶಂಕರ, ಮಧ್ವಾಚಾರ್ಯ, ಭಗವದ್ಗೀತೆ ಕನ್ನಡ-ಸಂಸ್ಕೃತ ಚಿತ್ರಗಳ ಮೂಲಕ ರಾಷ್ಟ್ರೀಯ ಖ್ಯಾತಿ ಗಿಟ್ಟಿಸಿಕೊಂಡ ಅಯ್ಯರ್‌ ಸದ್ಯಕ್ಕೆ ಏನು ಮಾಡುತ್ತಿದ್ದಾರೆ ?

  By Staff
  |

  *ಪಾವನಿ

  ಕನ್ನಡ ಚಿತ್ರರಂಗದ ಭೀಷ್ಮ ಎಂದು ಪ್ರಸಿದ್ಧರಾಗಿರುವ ಹಿರಿಯ ನಿರ್ದೇಶಕ, ನಟ ಜಿ. ವಿ. ಅಯ್ಯರ್‌ ಭಾಷಣಕ್ಕೆ ಎದ್ದು ನಿಂತರೆಂದರೆ ಅಲ್ಲಿ ಭೋರ್ಗರೆವುದು ವಾಗ್ಝರಿ!

  ಅಯ್ಯರ್‌ ಅವರ ಸಿನಿಮಾಗಳಂತೆಯೇ ಆಳ ಹರವು ಉಳ್ಳ ಅವರ ಭಾಷಣವನ್ನು ಅರಗಿಸಿಕೊಳ್ಳುವುದಕ್ಕೆ ಸಮಯ ಬೇಕು. ಕುಂಬಳಗೋಡಿನಲ್ಲಿರುವ ಭಾರದ್ವಾಜ ಆಶ್ರಮದಲ್ಲಿ ಬರಿಗಾಲಲ್ಲಿ ಓಡಾಡುವ ಅಯ್ಯರ್‌ರನ್ನು ಮಾತಾಡಿಸಿದರೆ ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತು ಶುರು ಮಾಡುತ್ತಾರೆ.

  ಹೇಗೆ ಬಂದಿರಿ ಚಿತ್ರೋದ್ಯಮಕ್ಕೆ ಎಂದು ಪ್ರಶ್ನಿಸಿದರೆ- ‘ರಂಗಭೂಮಿಯ ಮೂಲಕ’ ಎನ್ನುತ್ತಾರೆ ಅಯ್ಯರ್‌. ಗುಬ್ಬಿ ವೀರಣ್ಣರ ಜೊತೆಗೆ ಪಳಗಿದ ಅಯ್ಯರ್‌, ‘ರಾಧಾ ರಮಣ’ ಚಿತ್ರಕ್ಕೋಸ್ಕರ ಗುಬ್ಬಿ ಟೀಂ ಬಿಟ್ಟರು. ‘ರಾಧಾ ರಮಣ’ ಚಿತ್ರಕ್ಕೆ ಹಾಡು, ಬರೆದು ನಟಿಸಿದ್ದ ಅಯ್ಯರ್‌- ತಮ್ಮ ಮೊದಲ ಚಿತ್ರ ‘ರಣಧೀರ ಕಂಠೀರವ ’ ಚಿತ್ರವನ್ನು ನೆನಪಿಸಿಕೊಂಡು ಖುಷಿಪಡುತ್ತಾರೆ.

  ಮೈಸೂರು ಅರಸನೊಬ್ಬ ಮಲ್ಲಿಗೆ ಎಂಬ ಹುಡುಗಿಯನ್ನು ಪ್ರೀತಿಸಿ ರಾಜ ಮನೆತನಕ್ಕೆ ಮುಜುಗರ ಉಂಟುಮಾಡಿದ ಕಥೆಯೇ ‘ರಣಧೀರ ಕಂಠೀರವ’. ರಾಜ್‌ಕುಮಾರ್‌, ನರಸಿಂಹರಾಜು ಮುಂತಾದ ಗೆಳೆಯರ ಜೊತೆ ಸೇರಿ ಈ ಸಿನಿಮಾವನ್ನು ಅಯ್ಯರ್‌ ನಿರ್ಮಿಸಿದ್ದರು. ಆರ್ಥಿಕವಾಗಿ ಚಿತ್ರ ಲಾಭದಾಯಕ ಅನ್ನಿಸದಿದ್ದರೂ ಆ ಅನುಭವ ಚೆನ್ನಾಗಿತ್ತು ಎಂದು ಅಯ್ಯರ್‌ ನೆನಪುಗಳ ಚಪ್ಪರಿಸುತ್ತಾರೆ.

  ನಿರ್ದೇಶಕರಾಗಿ ಅಯ್ಯರ್‌ :

  ನಿರ್ದೇಶನ ಎಂದರೆ ಪಾತ್ರವೊಂದಕ್ಕೆ ಜೀವ ತುಂಬುವುದು. ರಾಜ್‌ಕುಮಾರ್‌ ಅವರ ಚಿತ್ರವನ್ನೂ ನಿರ್ದೇಶಿಸಿದ್ದೇನೆ. ಅವರ ಚಿತ್ರ ನಿರ್ದೇಶನವೇನೂ ವಿಭಿನ್ನ ಎನಿಸಲಿಲ್ಲ. ನಿರ್ದೇಶಕ ಸಾಮಾನ್ಯವಾಗಿ ಎಲ್ಲ ಕಡೆಯೂ ಸಮಸ್ಯೆ ಎದುರಿಸುತ್ತಾನೆ. ಲೈಟ್‌ಬಾಯ್‌ಯಿಂದ ಹಿಡಿದು, ಮೇಕ್‌ ಅಪ್‌, ಸಂಗೀತ.. ಹೀಗೆ. ಪ್ರತಿ ನಿಮಿಷವೂ ಅದು ಸರಿಯಿಲ್ಲ ಇದು ಸರಿಯಾಗಿಲ್ಲ ಅಂತ ನಿರ್ದೇಶಕ ರೇಗುವುದು ಸಹಜ.

  ನಾನು ಪ್ರಶಸ್ತಿಗಳ ಹಂಗಿಲ್ಲದೇ ಕೆಲಸ ಮಾಡಿದವನು. ನನಗೆ ಇತರರಂತೆ ಪ್ರಚಾರವಾಗಲೀ, ಪ್ರಶಸ್ತಿಯಾಗಲೀ ಬೇಕಿಲ್ಲ . ನಾನು ನಿರ್ದೇಶಿಸಿದ ಸಿನಿಮಾ ನೋಡಿದವರು, ‘ವಾಹ್‌, ಇದು ಅಯ್ಯರ್‌ ಅವರ ಶಾಟ್‌’ ಅಂತ ಮೆಚ್ಚಬೇಕು. ಅದೇ ನನಗೆ ಸಿಗುವ ದೊಡ್ಡ ಖುಷಿ. ಅವ್ಯಕ್ತವನ್ನು ಚಿತ್ರಿಸಿ ಅದಕ್ಕೆ ಅರ್ಥ ಕೊಡಬೇಕು. ಹಂಸಗೀತೆ ಚಿತ್ರದ ಮೂಲಕ ನಾನು ಸಿನೆಮಾದ ಆಯಾಮವನ್ನೇ ಬದಲಿಸಿದೆ. ನನ್ನ ಈ ತಂತ್ರವನ್ನು ಜಗತ್ತೇ ಪ್ರಶಂಸಿದೆ. ಕ್ಯಾನ್‌ ಚಿತ್ರೋತ್ಸವದಲ್ಲಿ ಎಲ್ಲರೂ ನನ್ನ ತಂತ್ರವನ್ನು ಪ್ರಶಂಸಿದರು’ ಎಂದು ಅಯ್ಯರ್‌ ಹಂಸಗೀತೆ ಗುಂಗಿಗೆ ಜಾರುತ್ತಾರೆ.

  ಕಿರುತೆರೆಗೆ ಬಾಣನ ಕಾದಂಬರಿ

  ದೂರದರ್ಶನದ ರಾಷ್ಟ್ರೀಯ ಜಾಲಕ್ಕಾಗಿ ‘ಕಾದಂಬರಿ’ ಎಂಬ ಸಂಸ್ಕೃತ ಸೀರಿಯಲ್‌ ನಿರ್ಮಾಣದ ಸಿದ್ಧತೆಯಲ್ಲಿ ಪ್ರಸ್ತುತ ಅಯ್ಯರ್‌ ತೊಡಗಿಕೊಂಡಿದ್ದಾರೆ. ಐದನೇ ಶತಮಾನದ, ಬಾಣ ಭಟ್ಟನ ‘ಕಾದಂಬರಿ’ ಕಥೆಯನ್ನಾಧರಿಸಿದ ಈ ಧಾರಾವಾಹಿಯನ್ನು ನಿರ್ದೇಶಿಸಬೇಕಿರುವ ಅಯ್ಯರ್‌ ಅವರಿಗೆ ಇಳಿವಯಸ್ಸಲ್ಲೂ ಉತ್ಸಾಹ ಮಂಕಾಗಿಲ್ಲ . ನನಗೆ 87 ವರ್ಷ ವಯಸ್ಸು. ನನ್ನ ಕೊನೆಯುಸಿರಿರುವ ತನಕ ನಾನು ದುಡಿಯುತ್ತಲೇ ಇರಬೇಕು ಎನ್ನುತ್ತಾರೆ ಅಯ್ಯರ್‌.

  ಅಯ್ಯರ್‌ ಕೈ ಗಡ್ಡದ ಮೇಲೆ. ಕಣ್ಣಲ್ಲಿ ತೇಜಸ್ಸು ಚೆಲ್ಲುವ ಬೆಳಕು.

  Post your views

  ಪೂರಕ ಓದಿಗೆ-
  ಜಿ.ವಿ. ಅಯ್ಯರ್‌ ಎಂಬ ಆಧುನಿಕ ಋಷಿಯ ಭಾಗವತ!

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X