»   » ನಾಲ್ಕು ವರ್ಷದ ನಂತರ ದುರ್ಗಿ ಬಂದ್ಲು ದುರ್ಗಿ

ನಾಲ್ಕು ವರ್ಷದ ನಂತರ ದುರ್ಗಿ ಬಂದ್ಲು ದುರ್ಗಿ

Posted By: Staff
Subscribe to Filmibeat Kannada

ಮಾಲಾಶ್ರೀ ಈಗ ಇನ್ನಷ್ಟು ದುಂಡಗಾಗಿದ್ದಾರೆ. ಆದರೆ ಮಾತು ಹಾಗೂ ನಟನೆಯಲ್ಲಿ ಅದೇ ಆತ್ಮ ವಿಶ್ವಾಸ ; ಬೇಕಿದ್ದರೆ ಏಪ್ರಿಲ್‌ 30ರ ಶುಕ್ರವಾರ ಬಿಡುಗಡೆಯಾಗುತ್ತಿರುವ 'ದುರ್ಗಿ" ಚಿತ್ರವನ್ನು ನೋಡಿ. ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಮಾಲಾಶ್ರೀ ಚಿತ್ರವಿದು.

'ದುರ್ಗಿ" ಚಿತ್ರ ಸಂಪೂರ್ಣವಾಗಿ ಮಾಲಾಶ್ರೀ ಮಯ. ಈ ಚಿತ್ರದಲ್ಲಿ ಆಕೆಯದು ರೆಬಲ್‌ ನಾಯಕಿಯ ಪಾತ್ರ. ಇಂಥದ್ದೊಂದು ಚಿತ್ರ ಈವರೆಗೆ ಕನ್ನಡ ಚಿತ್ರರಂಗ ಕಂಡದ್ದೇ ಇಲ್ಲ ಎನ್ನುತ್ತಾರೆ ಮಾಲಾಶ್ರೀ ಪತಿ ಹಾಗೂ ಚಿತ್ರದ ನಿರ್ಮಾಪಕ ರಾಮು. 'ಮಲ್ಲ" ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ರಾಮು, ಈ ಯಶಸ್ಸನ್ನು'ದುರ್ಗಿ"ಯ ಮೂಲಕ ಮುಂದುವರೆಯುವ ಆಶಾವಾದದಲ್ಲಿದ್ದಾರೆ.

ರಾಮು ಅವರ ಆಶಾವಾದಕ್ಕೆ ಕಾರಣಗಳೂ ಇವೆ. ಅವುಗಳನ್ನು ಈ ರೀತಿ ಹೇಳಬಹುದು :

ನಾಲ್ಕು ವರ್ಷಗಳ ನಂತರ ಮಾಲಾಶ್ರೀ ಅವರ ಮರು ಪ್ರವೇಶದ ಚಿತ್ರವಾದ್ದರಿಂದ ಪ್ರೇಕ್ಷಕರಲ್ಲಿ ನಿರೀಕ್ಷೆಗಳು ಇದ್ದೇ ಇರುತ್ತವೆ. ಈ ನಿರೀಕ್ಷೆ ಚಿತ್ರಕ್ಕೆ ಅನುಕೂಲಕರವಾಗಬಹುದು. ಮಾಲಾಶ್ರೀ ಈಗ ಹೇಗಿದ್ದಾರೆ ನೋಡೋಣ ಎಂದು ಮಹಿಳೆಯರೂ ಚಿತ್ರಮಂದಿರ ತುಂಬಬಹುದು. ಇನ್ನು , ಪ್ರೇಕ್ಷಕರ ನಿರೀಕ್ಷೆ ಸುಳ್ಳಾಗದಿರುವಂತೆ ಚಿತ್ರ ನಿರ್ಮಾಣದ ಪ್ರತಿ ಹಂತದಲ್ಲೂ ಕಾಳಜಿ ವಹಿಸಲಾಗಿದೆ. ಇದು ನನ್ನ ಟೇಸ್ಟ್‌ಗೆ ತಕ್ಕಂಥ ಚಿತ್ರ ಎನ್ನುತ್ತಾರೆ ರಾಮು.

ಮಾಲಾಶ್ರೀಗೆ ಕೂಡ ದುರ್ಗಿ ಗೆಲ್ಲುವ ಕುರಿತು ಅನುಮಾನಗಳಿಲ್ಲ . ಮೊನ್ನೆ ತಮ್ಮ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವರನಟ ರಾಜ್‌ಕುಮಾರ್‌ 'ದುರ್ಗಿ"ಯ ಬಗ್ಗೆ ವಿಚಾರಿಸಿದ್ದನ್ನು ಮಾಲಾಶ್ರೀ ನೆನೆಯುತ್ತಾರೆ. ರಾಜ್‌ ಆಶೀರ್ವಾದವೂ ದೊರೆತಿದೆ. ಆತ್ಮವಿಶ್ವಾಸ-ಆಶೀರ್ವಾದಗಳ ಬೆಂಬಲದೊಂದಿಗೆ ಮಾಲಾಶ್ರೀ ಮತ್ತೆ ಪ್ರೇಕ್ಷಕರ ಮುಂದಿದ್ದಾರೆ.

ನಾಲ್ಕು ವರ್ಷಗಳ ನಂತರ ಬಣ್ಣ ಹಚ್ಚಿದಾಗ ಸಂಕೋಚ, ಅಳುಕು ಕಾಡಲಿಲ್ಲವಾ ಎನ್ನುವ ಪ್ರಶ್ನೆಗೆ ಮಾಲಾಶ್ರೀ ನಗುತ್ತಾರೆ. ಇಲ್ಲ , ಹಾಗೇನೂ ಆಗಲಿಲ್ಲ . ನಿಜ ಹೇಳಬೇಕೆಂದರೆ ಈ ನಾಲ್ಕು ವರ್ಷಗಳಲ್ಲಿ ನಾನು ನಟಿಸಲಿಲ್ಲ ಅನ್ನುವುದನ್ನು ಬಿಟ್ಟರೆ ಚಿತ್ರರಂಗಕ್ಕೆ ಹತ್ತಿರವಾಗಿಯೇ ಇದ್ದೆ ಎನ್ನುತ್ತಾರೆ ಮಾಲಾಶ್ರೀ. ರಾಮು ಅವರ ಚಿತ್ರಗಳ ನಿರ್ಮಾಣದಲ್ಲಿ ತಮ್ಮ ಪಾತ್ರವೂ ಇದ್ದುದನ್ನು ಅವರು ಪರೋಕ್ಷವಾಗಿ ನೆನಪಿಸುತ್ತಾರೆ.

'ದುರ್ಗಿ"ಯ ನಿರ್ದೇಶನ ಪಿ.ರವಿಶಂಕರ್‌ ಅವರದು. ಸಂಗೀತ ಹಂಸಲೇಖಾ ಅವರದು. ಥ್ರಿಲ್ಲರ್‌ ಮಂಜು ನಿರ್ದೇಶನದ ಸಾಹಸ ದೃಶ್ಯಗಳು ರೋಚಕವಾಗಿವೆ ಹಾಗೂ ಶ್ರೀಮಂತಿಕೆಯಿಂದ ಕೂಡಿವೆ ಎನ್ನುವುದು ಸುದ್ದಿ .

ರಾಮು-ಮಾಲಾಶ್ರೀ ದಂಪತಿಗಳು ಯಶಸ್ಸಿನ ಲಹರಿಯಲ್ಲಿದ್ದಾರೆ. ಈ ಲಹರಿ ಮುಂದುವರಿಯಲಿ. ಏಕೆಂದರೆ, ಒಂದು ದೊಡ್ಡ ಯಶಸ್ಸು ಮತ್ತಷ್ಟು ಕನಸುಗಳಿಗೆ ಬೀಜವಾಗುತ್ತದೆ.

English summary
Durgi : Malashri in

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada