»   » ಮಾಯಾಮೃಗದ ಮೂಲಕ ಮನೆ ಮನೆ ತಲುಪಿದ ಎಂ.ಡಿ.ಪಲ್ಲವಿ

ಮಾಯಾಮೃಗದ ಮೂಲಕ ಮನೆ ಮನೆ ತಲುಪಿದ ಎಂ.ಡಿ.ಪಲ್ಲವಿ

Posted By: Super
Subscribe to Filmibeat Kannada

ನನ್ನ ಜೀವನದ ಮೊದಲ 12 ವರ್ಷ ಗೋವಾದಲ್ಲಿ ಕಳೆದೆ. ಪ್ರತಿ ವರ್ಷ ಬೇಸಿಗೆ ರಜೆಗೆ ನಾನು ನನ್ನ ಅಜ್ಜಿ ತಾತನ ಮನೆಗೆ ಬರುತ್ತಿದ್ದೆ. ಬೆಂಗಳೂರು ಆಗ ನನಗೆ ಅಜ್ಜಿ ಮನೆಯಷ್ಟು ದೊಡ್ಡದಾಗಿತ್ತು. ಮೊದಲ ವರ್ಷ ಕನ್ನಡ ಬರೆಯುವುದು ಕಲಿಯುವುದರಲ್ಲೇ ಕಳೆದು ಹೋಯಿತು.

ಮುಂದಿನ ವರ್ಷ ಸ್ಕೂಲ್‌... ನ್ಯಾಷನಲ್‌ ಹೈಸ್ಕೂಲ್‌ ಸೇರಿದೆ. ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ... ರಾಮಕೃಷ್ಣ ಆಶ್ರಮದ ಪ್ರಶಾಂತ ವಾತಾವರಣ. ಡಿವಿಜಿ ರಸ್ತೆಯ ಗಿಜಿಗಿಜಿ ಜನ. ವರ್ಲ್ಡ್‌ ಕಲ್ಚರ್‌ ಲೈಬ್ರರಿಯ ಸಂಜೆ ಕಾರ್ಯಕ್ರಮಗಳು, ಬಸವನಗುಡಿ ಸ್ವಿಮ್ಮಿಂಗ್‌ ಪೂಲ್‌ನ ಸ್ಪರ್ಧೆಗಳ ಸಂಭ್ರಮ... ಇವೆಲ್ಲವನ್ನು ಕಂಡೆ.

ಹತ್ತನೆ ತರಗತಿ ರಾಜ್ಯಮಟ್ಟದ ಪರೀಕ್ಷೆ... ನಾನು ಟ್ಯೂಷನ್‌ಗೆ ಸೇರಲಿಲ್ಲ. ಯುವ ಸಂಘದವರು ಮಿಥಿಕ್‌ ಸೊಸೈಟಿಯಲ್ಲಿ ನಡೆಸುವ ಲೆಕ್ಚರ್‌ ತರಗತಿಗಳಿಗೆ ಸೇರಿಕೊಂಡೆ. ಬೆಂಗಳೂರಿನ ವಿವಿಧ ಶಾಲೆಗಳಿಂದ ಅನೇಕ ಶ್ರೇಷ್ಠ ಅಧ್ಯಾಪಕರು ಇಲ್ಲಿ ಉಪನ್ಯಾಸಗಳನ್ನು ನೀಡುತ್ತಾರೆ. ಅಲ್ಲಿಗೆ ಹೋಗುವಾಗ ನನಗೊಂದು ವಿಶಿಷ್ಟ ಸ್ಥಳದ ಪರಿಚಯವಾಯಿತು. ವಿವಿಪುರಂ ರಸ್ತೆ. ನಂತರ ಎನ್‌ಎಂಕೆಆರ್‌ವಿ ಸೇರಿದೆ. ಕದಂಬಂ ಹೋಟೆಲಿನ ಕಾಫಿ, ಗೆಳತಿಯರೊಂದಿಗೆ ಜಯನಗರ ಕಾಂಪ್ಲೆಕ್ಸ್‌ ಸುತ್ತುವುದು ಗಾಡಿಗಳಲ್ಲಿ ಕಾಲೇಜಿನಿಂದ ಎಂ.ಜಿ. ರಸ್ತೆ ಬ್ರಿಗೇಡ್‌ ರಸ್ತೆಗೆ ಹೋಗಿ ಸಿನಿಮಾ ನೋಡಿಕೊಂಡು ಬರುವುದು... ಇವೆಲ್ಲಾ ನೆನಪಾಗುತ್ತವೆ.

ಕಾಲೇಜು ಮುಗಿದ ಮೇಲೆ ನನ್ನನ್ನು ನಾನು ತೊಡಗಿಸಿಕೊಂಡಿದ್ದು ಸಂಗೀತ, ರಂಗಭೂಮಿ, ಧಾರಾವಾಹಿಗಳು... ಇವುಗಳಲ್ಲಿ. ಹಿಂದೂಸ್ಥಾನಿ, ಕರ್ನಾಟಕ, ಪಾಶ್ಚಾತ್ಯ , ಸುಗಮ ಎಲ್ಲಾ ಸಂಗೀತ ಪ್ರಕಾರಗಳಲ್ಲೂ ಅವಕಾಶಗಳು, ಈ ಎಲ್ಲಾ ಪ್ರಕಾರಗಳಲ್ಲಿಯೂ ಕಲಿಸುವವರು, ಕಲಿಯುವವರು, ಕೇಳುಗರು ಎಲ್ಲರೂ ನಮ್ಮ ಬೆಂಗಳೂರಿನಲ್ಲಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ಅತಿವೇಗದಿಂದ ಬೆಳೆದಿದೆ. ನನ್ನದೊಂದು ಸಣ್ಣ ಅಳುಕು ಅಷ್ಟೆ. ನಮ್ಮ ಮನೆಯ ಸ್ವಿಚ್‌ ಬೋರ್ಡಿನ ಮೇಲೆ ತನ್ನ ಗೂಡನ್ನು ಕಟ್ಟಿಕೊಂಡಿದ್ದ ಗುಬ್ಬಚ್ಚಿ ಎಲ್ಲೋ ಮಾಯವಾಗಿದೆ. ಅದು ಎಲ್ಲಿ ಹೋಯಿತು ಅಂತ ಕೇಳಲು ಅದರ ಸ್ನೇಹಿತರನ್ನು ಊರೆಲ್ಲಾ ಹುಡುಕಿದೆ.

ಆದರೆ ಎಲ್ಲಾ ಗುಬ್ಬಚ್ಚಿಗಳೂ ಕೋಪಿಸಿಕೊಂಡು ಊರು ಬಿಟ್ಟು ಹೋಗಿವೆ. ಅವುಗಳು ಹಿಂತಿರುಗಿದರೆ - ಬೆಂಗಳೂರಿನಲ್ಲಿ ಇನ್ಯಾವ ಕೊರತೆಯೂ ಇರುವುದಿಲ್ಲ.

(ವಿಜಯ ಕರ್ನಾಟಕ)

English summary
Small screen actress and singer M.D.Pallavi is in search of sparrows...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada