»   » ನಂದಿತಾದಾಸ್‌ ಬಾಲ್ಯ ನೆನೆಯುತ್ತಲೇ ಬಾಯಲ್ಲಿ ಜೊಲ್ಲು ಸುರಿಸಿದರು

ನಂದಿತಾದಾಸ್‌ ಬಾಲ್ಯ ನೆನೆಯುತ್ತಲೇ ಬಾಯಲ್ಲಿ ಜೊಲ್ಲು ಸುರಿಸಿದರು

Posted By: *ರಾಜು
Subscribe to Filmibeat Kannada

'ದೇವೀರಿ" ನಂದಿತಾ ದಾಸ್‌ ನಗುತ್ತಿದ್ದರು. ಎರಡು ಮಾತು, ಬ್ರೇಕ್‌ ಎಂಬಂತೆ ನಗೆ. ಆಕೆಯ ಮಾತು- ನಗೆ ಎರಡನ್ನೂ ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುತ್ತಿದ್ದವರ ಸಂಖ್ಯೆ ಚಿಕ್ಕದೇನೂ ಆಗಿರಲಿಲ್ಲ.

ಕೃಷ್ಣಸುಂದರಿ ನಂದಿತಾ ದಾಸ್‌ ನಟಿಯಷ್ಟೇ ಅಲ್ಲ. ಚಳವಳಿಗಾರ್ತಿ ಕೂಡ. ಮಕ್ಕಳೆಂದರೆ ಈಕೆಗೆ ಪ್ರಾಣ. ಉಪ್ಪಿನ ಕಾಯಿಯನ್ನು ಕಿತ್ತುಕೊಂಡು ತಿನ್ನಲೂ ಸೈ. ಅಪ್ಪನ ಅಡುಗೆ ಮೆಚ್ಚು. ಅಮ್ಮ ಕೊಡುತ್ತಿದ್ದ ಪುಸ್ತಕ ಹಿಡಿಸಿತ್ತು ಹುಚ್ಚು. ಬೆಂಗಳೂರಿನ ಪ್ಲಾನೆಟ್‌ ಎಂನಲ್ಲಿ ಶಿಶುಗೀತೆಗಳ ಕೆಸೆಟ್‌ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ನಂದಿತಾ ತೀರಾ ಇನ್ಫಾರ್ಮಲ್‌ ಆಗಿಯೇ ಮನದ ಪುಟಗಳ ತೆರೆದಿಟ್ಟರು. ಮಾತು ಫ್ಲಾಷ್‌ಬ್ಯಾಕ್‌ಗೆ ಹೋಯಿತು...

ನನ್ನ ಬಾಲ್ಯ ತುಂಬಾ ಸೊಗಸಾಗಿತ್ತು. ಅಪ್ಪ (ಜತಿನ್‌ ದಾಸ್‌) ಚಿತ್ರ ಬಿಡಿಸುತ್ತಿದ್ದರು. ಅದು ಎಷ್ಟು ಚೆನ್ನಾಗಿರುತ್ತಿತ್ತು ಗೊತ್ತಾ? ಚಿತ್ರ ಬಿಡಿಸಿದ, ಅರ್ಧ ಗಂಟೆಯಲ್ಲೇ ಘಮ್ಮೆನ್ನುವ ರುಚಿಕಟ್ಟು ಅಡುಗೆ ಮಾಡುತ್ತಿದ್ದರು. ಅಮ್ಮನಿಗೂ ಆ ಹದ ಇರಲಿಲ್ಲ. ಸ್ಕೂಲಲ್ಲಿ ಊಟಕ್ಕೆ ಮುನ್ನವೇ ನನ್ನ ಟಿಫಿನ್‌ ಬಾಕ್ಸ್‌ ಖಾಲಿ. ಅಪ್ಪನ ಅಡುಗೆ ಕದ್ದು ತಿನ್ನುವವರ ದೊಡ್ಡ ದಂಡೇ ನಮ್ಮ ಸ್ಕೂಲಲ್ಲಿತ್ತು. ಅಪ್ಪ ಮನೆಯಲ್ಲಿ, ಅಮ್ಮ ಆಫೀಸಲ್ಲಿ. ಮೊದಮೊದಲು ನಮ್ಮ ಮನೆ ಮಾತ್ರ ಹೀಗೆ ಅಂದುಕೊಂಡಿದ್ದೆ. ಆದರೆ ಆಮೇಲೆ ತಿಳಿಯಿತು- ಈ ಥರ ಅನೇಕರಿದ್ದಾರೆ ಅಂತ. ಆದರೆ ಅಪ್ಪ ಪ್ರತಿಭಾವಂತ ಕಲಾವಿದ ಅನ್ನೋದರಲ್ಲಿ ಎರಡು ಮಾತಿಲ್ಲ. ಪ್ರಾಯಶಃ ಅವರ ರಕ್ತದಿಂದಲೇ ನನಗೂ ಸ್ವಲ್ಪ ನಟನೆ ಸಿದ್ಧಿಸಿರಬಹುದು.

ನಮ್ಮ ಭಾನುವಾರವೇ ವಿಶೇಷವಾದದ್ದು. ಸಿನಿಮಾ ನೋಡೋಕೆ ಹೋಗುತ್ತಿರಲಿಲ್ಲ. ಡ್ಯಾನ್ಸು, ನಾಟಕಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಆ ಫೋಟೋಗಳನ್ನು ನೋಡುತ್ತಿದ್ದರೆ ಇವತ್ತಿಗೂ ಎಂಥಾ ಖುಷಿಯಾಗುತ್ತದೆ. ಈಗ ಮಕ್ಕಳು ಕೆಸೆಟ್‌ ಹಾಡನ್ನೋ, ಕಥೆಯನ್ನೋ ಕೇಳಿದ ನಂತರ ಕುತೂಹಲ ಹುಟ್ಟಿ ಓದೋಕೆ ಶುರುಮಾಡುತ್ತವೆ. ಕಾಲಕ್ಕೆ ತಕ್ಕಂತೆ ನಡೆಯಲೇಬೇಕು. ಮಕ್ಕಳ ಪ್ರತಿಭೆ ಕೆಲವು ಸಲ ನಮ್ಮನ್ನೂ ದಂಗಾಗುಸುತ್ತದೆ. ತಮಿಳು ಸಿನಿಮಾ ಒಂದರಲ್ಲಿ ಬಾಲ ನಟಿ ಕೀರ್ತನಾ ಜೊತೆ ನಟಿಸಿದ್ದನ್ನು ನಾನು ಮರೆಯಲಾರೆ. ಅರಳು ಹುರಿದಂತೆ ಪಟಪಟನೆ ಮಾತಾಡುವ ಅವಳ ನಗು ಎಷ್ಟು ಚೆನ್ನ!

ಮಾತಿನ ನಡುವೆ ಮಕ್ಕಳ ಜೊತೆ ಬೆರೆತ ನಂದಿತಾ ಕಥೆ ಹೇಳಲು ಮುಂದಾದರು. ಸಿನಿಮಾ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಚುಟುಕು ಉತ್ತರ ಹೀಗಿತ್ತು- ಸಿನಿಮಾನೇ ನನ್ನ ಜೀವನವಲ್ಲ. ಇನ್ನೂ ಸಾಕಷ್ಟಿದೆ. ಕನಸುಗಳು, ತೆವಲುಗಳು ಅನೇಕ. ನಾಳೆ ಏನು ಅಂತ ಗೊತ್ತಿಲ್ಲ. ಅದು ನೆಮ್ಮದಿ ತಂದೇ ತರುತ್ತದೆ ಅನ್ನುವ ಆತ್ಮವಿಶ್ವಾಸದಿಂದ ಇವತ್ತನ್ನು ನನ್ನದಾಗಿಸಿಕೊಳ್ಳುತ್ತೇನೆ! ವಾರ್ತಾ ಸಂಚಯ 

English summary
Films are not my life : Nanditha Das

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada