»   » ಸೆಲ್‌ಫೋನ್‌ನಲ್ಲಿ ರಾಜ್‌, ಜಯಂತಿ, ಸುದೀಪ್, ರಮ್ಯ, ರಕ್ಷಿತ

ಸೆಲ್‌ಫೋನ್‌ನಲ್ಲಿ ರಾಜ್‌, ಜಯಂತಿ, ಸುದೀಪ್, ರಮ್ಯ, ರಕ್ಷಿತ

Posted By:
Subscribe to Filmibeat Kannada


ಕನ್ನಡಚಿತ್ರ ಕಲಾವಿದರ ಚಿತ್ರ-ಚಿತ್ತಾರಗಳು ನಿಮ್ಮ ಮುಷ್ಟಿಯಲ್ಲಿ.. ಮೊಬೈಲ್ ಸ್ಯಾವಿ ಚಿತ್ರಪ್ರೇಮಿಗಳಾದ ನೀವು ಈ ಸೌಲಭ್ಯವನ್ನು ಖಂಡಿತಾ ಮಿಸ್ ಮಾಡಿಕೊಳ್ಳಲಾರಿರಿ...

ಗಣೇಶ್‌, ವಿಷ್ಣು, ರಾಜ್‌ಕುಮಾರ್‌, ಅಂಬಿ, ಪುನೀತ್, ದರ್ಶನ್‌, ಸುದೀಪ್, ರಮ್ಯ, ರಕ್ಷಿತ..ಯಾರು ಬೇಕು? ಯಾರು ಬೇಕು ನಿಮಗೆ? ನಿಮಗೆ, ನಿಮ್ಮ ಮನೆಮಂದಿಗೆ ಮತ್ತು ಸ್ನೇಹಿತರಿಗೆ ಇಷ್ಟವಾಗುವ ಕನ್ನಡ ಚಿತ್ರ ನಾಯಕ ನಾಯಕಿಯರನ್ನು, ಕಲಾವಿದ ತಂತ್ರಜ್ಞರನ್ನು ನಿಮ್ಮ ಸೆಲ್‌ಫೋನ್‌ ಅಥವಾ ಕಂಪ್ಯೂಟರ್‌ನಲ್ಲಿ ಅರೆಸ್ಟ್‌ ಮಾಡುವ ದಿನಗಳು ಸಮೀಪಿಸಿದೆ. ಕಂಗ್ರಾಚುಲೇಷನ್ಸ್!

ಕನ್ನಡ ಚಿತ್ರಲೋಕದ ನಿಮ್ಮ ಪ್ರೀತಿಯ ಕಲಾವಿದರನ್ನು ವಾಲ್‌ಪೇಪರ್ಸ್‌, ಸ್ಕ್ರೀನ್ ಸೇವರ್ಸ್ ಮತ್ತು ಚಿತ್ರಪಟಗಳ ಮೂಲಕ ಸೆಲ್‌ ಫೋನ್‌ಗೆ ಭಟ್ಟಿ ಇಳಿಸಿಕೊಳ್ಳಬಹುದಾದ ಸೌಲಭ್ಯ ಇದೀಗ ದೊರೆತಿದೆ. ಇಂಡಿಯ ಟೈಮ್ಸ್ ಮತ್ತು ಚಿತ್ರಲೋಕ ಡಾಟ್‌ಕಾಮ್ ಸಹಯೋಗದಲ್ಲಿ ಮೂಡಿಬಂದಿರುವ ಕನ್ನಡ ಚಿತ್ರಗಳ ಮನರಂಜನೆಯ ಈ ಮುಖ ನಿಮಗೆ ಸದ್ಯದಲ್ಲೆ ಇಂಡಿಯ ಟೈಮ್ಸ್‌ನ 8888 ಸೇವೆಗಳ ಮೂಲಕ ದೊರೆಯಲಿದೆ. ಸೇ ಯಸ್‌.

ಇತ್ತೀಚಿನ ಕಲಾವಿದರಲ್ಲದೆ ಹಳೆ ಜಮಾನಾದ ವರನಟ ರಾಜ್‌ಕುಮಾರ್‌ , ಕಲ್ಯಾಣ್‌ ಕುಮಾರ್‌, ಉದಯ್‌ಕುಮಾರ್‌, ಜಯಂತಿ, ಆರತಿ ಭಾರತಿ ಕಲ್ಪನ ಮಂಜುಳ ಚಂದ್ರಕಲಾ, ಬಾಲಕೃಷ್ಣ, ಅಶ್ವಥ್, ನರಸಿಂಹರಾಜು, ದ್ವಾರಕೀಶ್ ಮತ್ತೆಲ್ಲ ಕಲಾವಿದರೂ ಡೌನ್‌ಲೋಡ್‌ಗೆ ಸಿಗುತ್ತಾರೆ. ಗುಡ್‌ಲಕ್‌.

ಎಲ್ಲರ ಕೈಯಲ್ಲಿ ಈಗ ಸೆಲ್‌ ಫೋನ್‌ ಇರುತ್ತದೆ, ಕನ್ನಡ ಚಿತ್ರಗಳನ್ನು ಕನ್ನಡಿಗರು ಆನಂದಿಸಲು ಮತ್ತೆ ಶುರುಮಾಡಿದ್ದಾರೆ. ಹಾಗಾಗಿ ಕನ್ನಡ ಚಿತ್ರ ಕಲಾವಿದರ ಚಿತ್ರಪಟಗಳಿಗೆ ಬೇಡಿಕೆ ಸ್ವಾಭಾವಿಕವಾಗಿಯೇ ಕುದುರಿದೆ. ಆದುದರಿಂದ 8888 ಸೇವೆಗಳ ಪ್ರಯೋಜನವನ್ನು ಕನ್ನಡಿಗರು ಸ್ವೀಕರಿಸುತ್ತಾರೆ ಎಂಬ ಆಶಯ ನಮ್ಮದು ಎಂದು ಇಂಡಿಯಟೈಮ್ಸ್‌ನ ನಿರ್ದೇಶಕ (ಟೆಲಿಕಾಂ) ಅಜಯ್ ವೈಷ್ಣವಿ ಹೇಳಿದರು.

ಗುರುವಾರ ಸಂಜೆ ಕರ್ನಾಟಕ ಕ್ರಿಕೆಟ್‌ ಅಸೋಸಿಯೋಷನ್‌ ಸಭಾಂಗಣದಲ್ಲಿ ಜರುಗಿದ ಚಿತ್ರಲೋಕ ಮತ್ತು ಇಂಡಿಯ ಟೈಮ್ಸ್ ಒಡಂಬಡಿಕೆಯನ್ನು ನಟ ಪುನೀತ್‌ರಾಜಕುಮಾರ್ ಉದ್ಘಾಟಿಸಿದರು. ಚಿತ್ರಲೋಕ ಡಾಟ್‌ಕಾಂ ಅನ್ನು ತಾವು ಆರಂಭದ ದಿನಗಳಿಂದಲೂ ಬಲ್ಲವರಾಗಿದ್ದು ಛಾಯಾಗ್ರಾಹಕ ಕೆ.ಎಂ. ವೀರೇಶ್‌ ತಮ್ಮ ವೆಬ್‌ಸೈಟ್‌ ಮೂಲಕ ಕನ್ನಡ ಚಿತ್ರ ಜಗತ್ತನ್ನು ವಿಶ್ವಕ್ಕೆ ನಿತ್ಯ ಹಂಚುವ ಕಾಯಕದಲ್ಲಿ ಯಶಸ್ವಿಯಾಗಿದ್ದರೆಂದು ಅಭಿಮಾನ ವ್ಯಕ್ತಪಡಿಸಿದರು.

ನನಗೆ ಇವೆಲ್ಲ ( ಇಂಟರ್‌ನೆಟ್‌, ಸೆಲ್‌ ಫೋನು ಮುಂತಾದವು) ಅಷ್ಟು ಚೆನ್ನಾಗಿ ಗೊತ್ತಾಗೋದಿಲ್ಲ. ಮನೆಯಲ್ಲಿ ರಾಘವೇಂದ್ರ ಮತ್ತು ಪುನೀತ್ ಕಂಪ್ಯೂಟರ್‌ನಲ್ಲಿ ಕನ್ನಡ ಚಿತ್ರಗಳ ಸುದ್ದಿಬಿಂಬಗಳನ್ನು ತೆಗೆದು ತೋರಿಸ್ತಾರೆ. ನೋಡಿ ಆನಂದಿಸುವುದಷ್ಟೇ ನನ್ನ ಕೆಲಸ. ವೀರೇಶ್ ನಮ್ಮ ಕುಟುಂಬದ ಮಿತ್ರ. ಅವರ ಸಾಹಸ ಮತ್ತು ಕನ್ನಡ ಚಿತ್ರಪ್ರೀತಿ ಹಾಗೂ ಉತ್ಸಾಹ ಸದಾ ಮೆಚ್ಚುವಂಥದ್ದು. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಕೋರಿಕೊಳ್ಳುವುದಷ್ಟೆ ತಮಗೆ ಗೊತ್ತು ಎಂದು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಾರ್ವತಮ್ಮ ರಾಜ್‌ಕುಮಾರ್‌ ನುಡಿದರು. ಅಂದಹಾಗೆ, ಈ ಕಾರ್ಯಕ್ರಮವು ಚಿತ್ರಲೋಕ ವೆಬ್‌ಸೈಟಿನ 8ನೇ ವಾರ್ಷಿಕೋತ್ಸವ ಸಮಾರಂಭವೂ ಹೌದು.

ಕನ್ನಡ ಚಿತ್ರರಂಗದ ಜೊತೆಜೊತೆಗೆ ಸಾಗಿಬಂದ ತಮ್ಮ ವೆಬ್‌ಸೈಟಿನ ರೂಪುರೇಷೆಗಳನ್ನು, ಒಲವು ನಿಲವುಗಳನ್ನು ಹಾಗೂ ಸಾಹಸಚರ್ಯೆಗಳನ್ನು ಸಂಪಾದಕ ಕೆ.ಎಂ. ವೀರೇಶ್ ವಿವರಿಸಿದರು. ಕನ್ನಡ ಚಿತ್ರ ಕಲಾವಿದರ ಫೋಟೋಗಳಿಗೆ ತುಂಬಾ ಬೇಡಿಕೆಯಿದೆ. ಆ ಬೇಡಿಕೆಯನ್ನು ಸಾಮೂಹಿಕವಾಗಿ ಈಡೇರಿಸುವ ಸೌಲಭ್ಯ ಇಂದಿನಿಂದ ಆರಂಭವಾದುದು ತಮಗೆ ತೀವ್ರ ಸಂತೋಷ ತಂದಿದೆ ಎಂದು ವೀರೇಶ್ ದಟ್ಸ್‌ಕನ್ನಡ ಡಾಟ್‌ಕಾಂಗೆ ತಿಳಿಸಿದರು.

ದಟ್ಸ್‌ಕನ್ನಡ ಡಾಟ್ ಕಾಂ ಸಂಪಾದಕ ಎಸ್.ಕೆ.ಶಾಮ ಸುಂದರ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಏಳಿಗೆಗೆ ಮತ್ತು ಜನಪ್ರಿಯತೆಗೆ ಅಂತರ್ಜಾಲ ಪತ್ರಿಕೆಗಳ ಪಾತ್ರ ಮತ್ತಷ್ಟು ಅರ್ಥಪೂರ್ಣವಾಗಬೇಕು ಎಂದರು.

(ದಟ್ಸ್‌ಕನ್ನಡ ವಾರ್ತೆ)

ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada