»   » ಪ್ರಜ್ವಲ್ ಸಿಕ್ಸರ್ ಮೇಲೆ ಸಿಕ್ಸರ್, ಸತ್ಯವಾನ್ ಬಿಡುಗಡೆಗೆ ಅಣಿ

ಪ್ರಜ್ವಲ್ ಸಿಕ್ಸರ್ ಮೇಲೆ ಸಿಕ್ಸರ್, ಸತ್ಯವಾನ್ ಬಿಡುಗಡೆಗೆ ಅಣಿ

Subscribe to Filmibeat Kannada


ಒಂದೆಡೆಯಿಂದ ಕನ್ನಡದ ಯುವ ನಟರು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ನೆರೆರಾಜ್ಯದ ಲಲನಾಮಣಿಗಳು ಕನ್ನಡ ಚಿತ್ರರಂಗಕ್ಕೆ ದಾಳಿಯಿಡುತ್ತಿದ್ದಾರೆ.

ನೆನಪಿರಲಿ, ಮುಂಗಾರು ಮಳೆ, ದುನಿಯಾ, ಜೊತೆಜೊತೆಯಲಿ, ಸಿಕ್ಸರ್ ಚಿತ್ರಗಳು ಬಾಕ್ಸಾಫೀಸಲ್ಲಿ ಸಿಕ್ಸರ್ ಹೊಡೆದದ್ದೇ ಹೊಡೆದದ್ದು ಒಬ್ಬೊಬ್ಬರಾಗಿ ಯುವನಟರು ಬೇಡಿಕೆಗೆ ಬರುತ್ತಿದ್ದಾರೆ. ಸಿಕ್ಸರ್‌ನಲ್ಲಿ ಬೌಂಡರಿ ಗೆರೆಯಂಚಿನಲ್ಲಿ ಬಿದ್ದ ಚೆಂಡಿನಿಂದಾಗಿ ಸಿಕ್ಸರ್ ತಪ್ಪಿಸಿಕೊಂಡ ಚೆಲುವ ಪ್ರಜ್ವಲ್ ದೇವರಾಜ್ ಪ್ಯಾಡ್ ಕಟ್ಟಿದ್ದನ್ನು ಬಿಚ್ಚೇ ಇಲ್ಲ. ಸಾಧು ನಿರ್ದೇಶನದ ಗಂಗೆ ಬಾರೆ ಗೌರಿ ಬಾರೆ ಚಿತ್ರೀಕರಣದಲ್ಲಿ ಏಟು ಬಿದ್ದಿದ್ದರೂ ಸಾವರಿಸಿಕೊಂಡು ಶೂಟಿಂಗ್ ಮುಂದುವರಿಸಿದ್ದಾರೆ. ಕಿಸ್ಸಮ್ಮ ರಾಖಿ ಸಾವಂತ್ ಕುಣಿದಿರುವ ಹರ್ಷ ನಿರ್ದೇಶನದ ಗೆಳೆಯ ಚಿತ್ರೀಕರಣಕ್ಕೆ ಮರಳಿದ್ದಾರೆ. ಇದರೊಂದಿಗೆ ಸೂಪರ್ ಹಿಟ್ ಆಕಾಶ್ ಮತ್ತು ಅರಸು ನಿರ್ದೇಶಿಸಿದ ಮಹೇಶ್ ಬಾಬು ಅವರ ಚಿತ್ರಕ್ಕೆ ಬುಕ್ ಕೂಡಾ ಆಗಿದ್ದಾರೆ. ಇದಲ್ವಾ ನಿಜವಾದ ಸಿಕ್ಸರ್? ಈ ಚಿತ್ರದಲ್ಲಿ ಅಂದ್ರಿತಾ ರೇ ಎಂದ ಅಂದದ ಹುಡುಗಿಯನ್ನು ಬಾಬು ಪರಿಚಯಿಸುತ್ತಿದ್ದಾರೆ.

*

ಮಾಡೋ ಪ್ರಯತ್ನ ಮಾಡಿದ್ದಾಗಿದೆ ಅದರ ಯಶಸ್ಸು ದೇವರ ಕೈಯಲ್ಲಿದೆ ಎನ್ನುವ ಜಾಯಮಾನದವರಲ್ಲ ಸುದೀಪ್. ಅವರ ಹೊಸ ಚಿತ್ರ 73 ಶಾಂತಿನಿವಾಸ ಉತ್ತಮವಾಗಿದೆ ಎನ್ನುವ ನಂಬಿಕೆಯಿದೆ, ಜನ ಬೆನ್ನು ತಟ್ಟುತ್ತಿದ್ದಾರೆ ಎನ್ನುವ ಸಮಾಧಾನವಿದೆ ಆದರೆ ಮುಂಗಾರು ಮಳೆ ಎಲ್ಲಿ ಚಿತ್ರವನ್ನು ನುಂಗಿಹಾಕಿಬಿಡುತ್ತದೋ ಎಂಬ ಅಳುಕು ಅವರಲ್ಲಿ ಮನೆ ಮಾಡಿದೆ. ಆದರೆ ಸಾಲೋಸಾಲು ಬರುತ್ತಿರುವ ಹೆಂಗಳೆಯರು ಸುದೀಪ್ ಹಣೆಯ ಮೇಲಿನ ಬೆವರಹನಿ ಕಣ್ಣಿಗಿಳಿಯದಂತೆ ತಡೆದಿದ್ದಾರೆ ಎನ್ನುವ ಸುದ್ದಿಗಳು ಚಿತ್ರಮಂದಿರಗಳಿಂದ ಬಂದಿವೆ. ಈಗ ಕೇವಲ ಬೆಂಗಳೂರು, ಮೈಸೂರಿನಲ್ಲಿ ಮಾತ್ರ ಬಿಡುಗಡೆ ಮಾಡಿದ್ದ ಶಾಂತಿನಿವಾಸವನ್ನು ಬೇರೆ ಕೇಂದ್ರಗಳಲ್ಲಿ ಬಿಡುಗಡೆ ಮಾಡುವ ಇರಾದೆಯನ್ನು ಸುದೀಪ್ ಹೊಂದಿದ್ದಾರೆ.

*

ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್ ಇನ್ನೊಂದು ನಗೆ ಹಂಗಾಮಾಕ್ಕೆ ಅಣಿಯಾಗುತ್ತಿದ್ದಾರೆ. ಅವರ ನಿರ್ದೇಶನದ ಎರಡನೇ ಚಿತ್ರ ಸತ್ಯವಾನ್ ಸಾವಿತ್ರಿ ಈ ವಾರ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರನ್ನು ಖಂಡಿತ ನಿರಾಸೆಗೊಳಿಸುವುದಿಲ್ಲ, ಮನರಂಜನೆ ಗ್ಯಾರಂಟಿ ಎಂದು ತಮ್ಮ ಎಂದಿನ ಸಿನೆಮಾ ಡೈಲಾಗ್ ಶೈಲಿಯಲ್ಲಿ ರಮೇಶ್ ಹೇಳಿದ್ದಾರೆ. ಕ್ಯಾಕ್ಟಸ್ ಫ್ಲವರ್ ಎಂಬ ಫ್ರೆಂಚ್ ನಾಟಕದಿಂದ ಪ್ರೇರಿತವಾದ ಈ ಚಿತ್ರದ ಯಶಸ್ಸಿನಲ್ಲಿ ತಂಡದ ಎಲ್ಲರ ಸಮಪಾಲಿರುತ್ತದೆ ಎಂದು ತಿಳಿಸಿದ್ದಾರೆ. ಇನ್ನೂ ಎರಡು ಚಿತ್ರಗಳನ್ನು ನಿರ್ಮಿಸುವ ಇರಾದೆಯನ್ನು ರಮೇಶ್ ಹೊಂದಿದ್ದಾರೆ. ಸೋ, ಆಲ್ದಿ ಬೆಸ್ಟ್ ರಮೇಶ್.

*

ಮೈ ಆಟೋಗ್ರಾಫ್ ಚಿತ್ರದಲ್ಲಿ ಚಡ್ಡಿ ಹಾಕಿಕೊಂಡು, ಕದ್ದು ಮುಚ್ಚಿ ಬೀಡಿ ಸೇದುತ್ತ ಹುಡುಗಿಯೊಬ್ಬಳಿಗೆ ಲೈನ್ ಹೊಡೆದ ಹುಡುಗ ನೆನಪಿರಬೇಕಲ್ಲ. ಅದೇ ಹುಡುಗ ಸಂಜಯ್ ಈಗ ನಾಯಕನಾಗುತ್ತಿದ್ದಾನೆ. ಚಿತ್ರ ಮರುಭೂಮಿ. ನಿರ್ದೇಶಕ ಋಷಿ. ಮುಂಗಾರು ಮಳೆಯಲ್ಲಿ ಪೂಜಾಳ ಗೆಳತಿಯಾಗಿ ಅಭಿನಯಿಸಿದ್ದ ಸುನಿತಾ ಶೆಟ್ಟಿ ಚಿತ್ರದ ನಾಯಕಿ. ವಾಸ್ತವಕ್ಕೆ ಹತ್ತಿರವಾಗಿರುವ ಕಥೆ ಹೊಂದಿರುವ ಚಿತ್ರದಲ್ಲಿ ರಾಜಣ್ಣನ ಕುರಿತು ಬರೆದಿರುವ ಹಾಡೊಂದನ್ನು ಸಿ.ಅಶ್ವತ್ಥ್ ಹಾಡಿದ್ದಾರೆ.

*

ಜುಲೈ 6ರಂದು ಬಿಡುಗಡೆಯಾಗುತ್ತಿರುವ ರವಿಚಂದ್ರನ್, ಶ್ರೀಕಾಂತ ನಟಿಸಿರುವ ಯುಗಾದಿಯಲ್ಲಿರುವ ಲಲನಾಮಣಿಗಳಾದ ಜೆನ್ನಿಫರ್, ಕಾಮ್ನಾ ಜೇಠ್ಮಲಾನಿ; ನಾಗೇಂದ್ರ ಪ್ರಸಾದ್‌ರ ಮೇಘವೇ ಮೇಘವೇ ಚಿತ್ರದ ಸೀರೆ ಸುಂದರಿ ಗ್ರೇಸಿ ಸಿಂಗ್; ಅನಿರುದ್ಧ್ ನಟಿಸಿರುವ ಜಯಂತ್ ನಿರ್ದೇಶನದ ನಲಿ ನಲಿಯುತಾ ಚಿತ್ರದ ಬೆಡಗಿ ವಿದಿಶಾ; ರಾಜಕುಮಾರಿ ಚಿತ್ರದಲ್ಲಿ ಬಾಲಾಜಿ ಜೋಡಿಯಾಗಿ ಮೋಡಿ ಮಾಡಲು ಬಂದಿರುವ ಕನ್ನಿಹಾ ಇವರ್ಯಾರೂ ಕನ್ನಡದವರಲ್ಲ ತಿಳಿದಿರಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada