»   » ನಗ್ಮಾಗೆ ಕೊಟ್ಟಿರುವ ಸಂಭಾವನೆ ನಾಯಕಿಗಿಂತ ಹೆಚ್ಚಂತೆ !

ನಗ್ಮಾಗೆ ಕೊಟ್ಟಿರುವ ಸಂಭಾವನೆ ನಾಯಕಿಗಿಂತ ಹೆಚ್ಚಂತೆ !

Posted By: *ರಾಜೇಂದ್ರ, ಹೈದರಾಬಾದ್‌
Subscribe to Filmibeat Kannada

ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ನಿಗಿನಿಗಿ ತಾರೆಯಾಗಿ ಮಳೆಯಲ್ಲಿ ತೋಯುತ್ತಿದ್ದ ನಗ್ಮಾ ಇದೀಗ ಅಮ್ಮನ ಪಾತ್ರಧಾರಿ !
ಅರೆರೆ, ನಗ್ಮಾಗೆ ಆ ಪಾಟಿ ವಯಸ್ಸಾಯಿತೆ ಅಂತ ಬಾಯಿ ತೆಗೆವವರ ಬಾಯನ್ನು, ನಾನು ಅಂತಿಂಥ ಅಮ್ಮ ಅಲ್ಲ, ಕಾಸ್ಟ್‌ಲೀ ಅಮ್ಮ ಅಂತ ಹೇಳಿ ನಗ್ಮಾ ಖುದ್ದು ಬಾಯಿ ಮುಚ್ಚಿಸುತ್ತಿದ್ದಾರೆ.

ಈಕೆ ಅಮ್ಮನಾಗಿ ನಟಿಸುತ್ತಿರುವ ತೆಲುಗು ಸಿನಿಮಾ ಹೆಸರು ಅಲ್ಲರಿ ಅಲ್ಲುಡು. ಇದರ ನಾಯಕ ಎನ್‌ಟಿರ್‌ ಜೂನಿಯರ್‌. ನಾಯಕಿ ಆರತಿ ಅಗರ್ವಾಲ್‌. ನಗ್ಮಾ ಮಾಡುತ್ತಿರುವುದು ಆರತಿಯ ಅಮ್ಮನ ಪಾತ್ರ. ಮೊದಲು ಬಟ್ಟೆ ಅರೆಬರೆ, ಈಚೆಗೆ ಗಂಗೂಲಿ ಈಕೆಯ ಬೋನಲ್ಲಿ ಸೆರೆ, ಆಮೇಲೆ ಧ್ಯಾನ, ನಂತರ ಕ್ಯಾಬರೆ..ಹೀಗೆ ತಮ್ಮ ಜೀವನದಲ್ಲಿ ಸೋಜಿಗ ಹುಟ್ಟಿಸುವಂಥಾ ಹೆಜ್ಜೆಗಳನ್ನಿಟ್ಟು ದೊಡ್ಡ ನಗೆ ನಕ್ಕ ನಗ್ಮಾ ಅಮ್ಮ ಆಗಲು ಒಪ್ಪಿದ್ದಾದರೂ ಹೇಗೆ? ವಯಸ್ಸು ನಲವತ್ತು ದಾಟಿತೆ?... ನಗ್ಮಾ ಹತ್ತಿರ ಹೋಗಿ ಕೇಳಿದರೆ...

ನನಗೆ ಇನ್ನೂ ಥರ್ಟಿ ಪ್ಲಸ್‌. ಮುಂದಿನ ಸಿನಿಮಾಗೆ ಯಾರಾದರೂ ಅಮ್ಮ ಆಗು ಅಂತ ಕೇಳಲು ಬಂದೀರಾ ಜೋಕೆ. ಈ ಸಿನಿಮಾದಲ್ಲೂ ನಾನು ವಯಸ್ಸಾದ ಅಮ್ಮನಲ್ಲ , ಧವಳ ಕೇಶಿಯಲ್ಲದ ಆಧುನಿಕ ಅಮ್ಮ. ಅದಕ್ಕೆ ನಾನು ಇಸಿದುಕೊಂಡಿರುವ ಹಣ ಎಷ್ಟಂತ ಗೊತ್ತಾದರೆ ನಿಮಗೆ ನಾನೆಂಥ ಅಮ್ಮ ತಿಳಿಯುತ್ತೆ ಅಂತ ಗುಮ್ಮ ಬಿಡ್ತಾರೆ.

ಎನ್‌ಟಿಆರ್‌ ಜೂನಿಯರ್‌ನ ನಗ್ಮಾ ಕಂಕುಳಲ್ಲಿ ಎತ್ತಿಕೊಳ್ಳುವ ದೃಶ್ಯ ಚಿತ್ರದ ಹೈಲೈಟ್‌. ಬಲ್ಲ ಮೂಲಗಳ ಪ್ರಕಾರ ನಗ್ಮಾಗೆ ಕೊಟ್ಟಿರುವ ಸಂಭಾವನೆ ನಾಯಕಿಗಿಂತ ಹೆಚ್ಚು ; ಸ್ಕೋಪ್‌ ಕೂಡ. ಗಡಿಬಿಡಿ ಅಳಿಯ ಕನ್ನಡ ಚಿತ್ರದಲ್ಲಿ ಗಿರಿಕನ್ಯೆ ಜಯಮಾಲ ಮಿಂಚಿದಂತೆ ತಾನೂ ಅಮ್ಮನ ಪಾತ್ರದಲ್ಲಿ ಮಿಂಚುವೆ ಅನ್ನುವುದು ನಗ್ಮಾ ಕಾನ್ಫಿಡೆನ್ಸು.

ಅಂದಹಾಗೆ, ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚುವವರ ಸಾಲಿಗೆ 'ಜಿಪುಣ ನನ್ನ ಗಂಡ" ಚಿತ್ರದ ಫ್ಲಾಪ್‌ ನಟಿ ರವಳಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಸುದ್ದಿ ಕೇಳಿ ರಂಭಾ, ರೋಜಾಗೂ ದಿಗಿಲಾಗಿದೆಯಂತೆ. ಸುದ್ದಿ ಗೊತ್ತಾಯಿತೇನಮ್ಮ ಮಾಲಾಶ್ರೀ!
ವಾರ್ತಾಸಂಚಯ

English summary
Nagma, Ravalis changing track : now they are playing mother roles. Who enters this list next?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada