»   » ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿ ತೋರಿದರೆ ಸಾಕು

ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿ ತೋರಿದರೆ ಸಾಕು

Posted By: Super
Subscribe to Filmibeat Kannada

ನಟಿ ಪ್ರೇಮ ಈಗ ನಟನೇಲಿ ಭಾರೀ ಕಂಫರ್ಟಬಲ್‌ !
ಎಲ್ಲಾ ದೇಸಾಯಿ ಮಹಿಮೆ. 'ಪರ್ವ" ಚಿತ್ರೀಕರಣದ ವೇಳೆ ಹಿಂದಿನ ದಿನ ನೃತ್ಯದ ತಾಲೀಮು ನಡೆಸಿ, ಕಲಿತದ್ದನ್ನು ಚಾಚೂ ತಪ್ಪದೆ ದೇಸಾಯಿಗೆ ಒಪ್ಪಿಸಿ ಬೀಗುತ್ತಿದ್ದ ಪ್ರೇಮಾ ಅವರ ಮೆಚ್ಚಿನ ನಿರ್ದೇಶಕರ ಸಾಲಿಗೆ ದೇಸಾಯಿ ಸೇರ್ಪಡೆಯಾಗಿದ್ದಾರೆ. ಯಾಕೆಂದರೆ, ದೇಸಾಯಿ ಪರ್ಫೆಕ್ಟ್‌ ಟೀಚರ್‌. ಉರುಹೊಡೆದು ಒಪ್ಪಿಸಿ, ಭೇಷ್‌ ಅನ್ನಿಸಿಕೊಳ್ಳುವ ಆಜ್ಞಾಧಾರಿ ವಿದ್ಯಾರ್ಥಿನಿ ಥರ ಪ್ರೇಮಾ.

ದೇಸಾಯಿ ಜೊತೆ ಕೆಲಸ ಸುಲಿದ ಬಾಳೆಯ ಹಣ್ಣಿನಂದದದಿ...
ನಿರೀಕ್ಷೆಗೆ ತಕ್ಕಂತೆ ನಟನೆ ಬರೋವರೆಗೂ ದೇಸಾಯಿ ಬಿಡೋಲ್ಲವಂತೆ. ಇಂಚು ಕೆಲಸ ಕೆಟ್ಟರೂ ಜಮದಗ್ನಿ ಥರ ಆಡ್ತಾರಂತೆ. ಹೀಗಾಗುವಾಗ ಚಿತ್ರೀಕರಣ ಮುಂದಕ್ಕೆ ಹೋಗುತ್ತಂತೆ. ನಿರ್ಮಾಪಕ ತಲೆ ಮೇಲೆ ಕೈ ಹೊತ್ಕೋತಾನಂತೆ. ಹೂವಿನ ಕುಂಡಗಳು ಎಗರಾಡ್ತಾವಂತೆ... ಹೀಗೆ ಪ್ರೇಮಾ ಮುಂದೆ ಮಾತಿಗೆ ಕೂತರೆ ಅವರು 'ಸಾಕು ನಿಲ್ಲಿಸಿರಪ್ಪಾ" ಅಂತಾರೆ. ಆಮೇಲೆ ಹೇಳುತ್ತಾರೆ :

ಶಾಟ್‌ ಹೀಗೇ ಇರಬೇಕು ಅಂತ ದೇಸಾಯಿ ನಿರೀಕ್ಷಿಸೋದೇನೋ ನಿಜ. ಆದರೆ ಅದನ್ನು ಅವರೇ ಅಭಿನಯಿಸಿ ತೋರಿಸ್ತಾರೆ. ಅವರು ಏನು ಮಾಡುತ್ತಾರೋ ಅದನ್ನ ಶ್ರದ್ಧೆಯಿಂದ ನೋಡಿಕೊಂಡರೆ ಸಾಕು, ಕೆಲಸ ಸುಲಭ. ನಾನೂ ಅದನ್ನೇ ಮಾಡೋದು. ಹಾಗೆ ಕೆಲಸ ಮಾಡೋದರಿಂದ ಸಾಕಷ್ಟು ಕಲೀತೇವೆ. ನಾನಂತೂ ಅವರ ಜೊತೆ ಕೆಲಸ ಮಾಡೋದರಲ್ಲಿ ಕಂಫರ್ಟಬಲ್‌ !

'ಮರ್ಮ" ತಂಡದ ಒಬ್ಬಾತ ಇವರ ಜೊತೆ ಕೆಲಸ ಮಾಡೋದು 'ಕರ್ಮ" ಅನ್ನುತ್ತಾರೆ. ಆದರೂ ದೇಸಾಯಿ ಸಾಕಷ್ಟು ಸುಧಾರಿಸಿಕೊಂಡಿದ್ದು, ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಈ ಬಾರಿ ಪ್ರೇಮಾಗೆ ಮನೆ ಮುಂದಣ ಹೂಕುಂಡಗಳು ಹಾರುವ ಭಯವಿಲ್ಲ.

ದೇಸಾಯಿ ಅವರನ್ನು ಹೊಗಳಿದ್ದೇನೋ ಸರಿ, ಆದರೆ ಸಾ.ರಾ.ಗೋವಿಂದು ನಾಯಕನಾದಾಗ ತೆಗಳಿ, ಈಗ ಅವರ ನಾಯಕತ್ವದ ಎರಡನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಪ್ರೇಮಾ ಒಪ್ಪಿರೋದಾದರೂ ಯಾತಕ್ಕೆ? ಭಾರೀ ಸಂಭಾವನೆಗೆ ಅನ್ನುತ್ತಿದೆ ಸ್ಯಾಂಡಲ್‌ವುಡ್‌. ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಸೊಸೆ ಕಡೆ ಜಾಯಮಾನದ ಪ್ರೇಮಾ, ದೇಸಾಯಿ ಹೊಗಳಿಕೆಗೆ ಪಾತ್ರವಾಗುವುದಂತೂ ಮುಂದುವರೆದಿದೆ. ಹೀಗಾಗಿ ಮತ್ತೆ ನಂಬರ್‌ ಒನ್‌ ಸೀಟ ಮೇಲೆ ಬಂದು ಈಕೆ ಕುಂತರೂ ಅಚ್ಚರಿಯಿಲ್ಲ.

English summary
Prema is comfortable with Desai

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada