»   » ದಾವಣಗೆರೆಯಲ್ಲಿ ಬರ ಪರಿಹಾರ ನಿಧಿಗಾಗಿ ನಾಗತಿ ಸಿನಿಹಬ್ಬ

ದಾವಣಗೆರೆಯಲ್ಲಿ ಬರ ಪರಿಹಾರ ನಿಧಿಗಾಗಿ ನಾಗತಿ ಸಿನಿಹಬ್ಬ

Subscribe to Filmibeat Kannada

ದಟ್ಸ್‌ ಕನ್ನಡ ಬ್ಯೂರೊ

ಜನಪ್ರಿಯ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶಿಸಿದ ಚಿತ್ರಗಳ ಚಿತ್ರೋತ್ಸವ ಮಂಗಳವಾರದಿಂದ (ಅ.28) ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಆರಂಭವಾಯಿತು.

ನಾಗತಿ ಹಳ್ಳಿ ನಿರ್ಮಾಣದ ಹಿಟ್‌ ಚಿತ್ರ ಅಮೆರಿಕಾ ಅಮೆರಿಕಾದ ಬಗ್ಗೆ ಚಿತ್ರೋತ್ಸವ ಉದ್ಘಾಟನೆ ವೇಳೆ ಸಾಕಷ್ಟು ಚರ್ಚೆಯಾಯಿತು. ಚಿತ್ರೋದ್ಯಮದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ರಿಮೇಕ್‌ ಟ್ರೆಂಡ್‌ ಬಗ್ಗೆ ಮೂಗು ಮುರಿದರು. ನಾನೆಂದೆಂದೂ ರಿಮೇಕ್‌ ಚಿತ್ರಗಳನ್ನು ಮಾಡುವುದಿಲ್ಲ. ಏನಿದ್ದರೂ ಜನರಿಗೆ ಹತ್ತಿರವಿರುವ ಕಥೆಗಳನ್ನು ತೆಗೆದುಕೊಂಡು ಚಿತ್ರ ಮಾಡುತ್ತೇನೆ ಎಂದು ಪ್ರಾಮಿಸ್‌ ಮಾಡಿದ ನಾಗತಿಹಳ್ಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಅಮೆರಿಕಾ ಅಮೆರಿಕಾ ಚಿತ್ರ ಭಾರತೀಯ ಮತ್ತು ಅಮೆರಿಕನ್‌ ಸಂಸ್ಕೃತಿಯ ತಿಕ್ಕಾಟಕ್ಕೆ ಸಂಬಂಧಿಸಿದ ಒಂದು ತ್ರಿಕೋನ ಪ್ರೇಮ ಕತೆಯ ಚಿತ್ರ. ಚಿತ್ರದಲ್ಲಿ ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ಇಂಗ್ಲಿಷ್‌ ಪದಗಳನ್ನು ಬಳಸಿದ್ದೇನೆ. ಆದರೆ ಅದರರ್ಥ ನಾನು ಕನ್ನಡ ವಿರೋಧಿ ಎಂದಲ್ಲ. ಆ ಸಿನೆಮಾಕ್ಕೆ ಅದರ ಅಗತ್ಯ ಇತ್ತು ಎಂದು ಚಿತ್ರದಲ್ಲಿರುವ ಇಂಗ್ಲಿಷ್‌ ಸಂಭಾಷಣೆಗಳಿಗೆ ನಾಗತಿಹಳ್ಳಿ ಸಮಜಾಯಿಷಿ ಕೊಟ್ಟರು.

ಅಮೆರಿಕಾ ಅಮೆರಿಕಾ ಚಿತ್ರದ ನಾಯಕಿ ಹೇಮಾ ಕೂಡ ಸಮಾರಂಭದಲ್ಲಿ ನಾಲ್ಕು ಮಾತನಾಡಿದರು. ಅಮೆರಿಕಾ... ಚಿತ್ರದಲ್ಲಿ ಮಿಂಚುಬಳ್ಳಿಯಂತಿದ್ದ ಹೇಮಾ ಈಗ ಅಂಬೋಡೆಯಂತಾಗಿದ್ದರೂ, ಭಾಗೀರಥಿಯಾಗಿ ಕಿರುತೆರೆಯಲ್ಲಿ ಜನಮನ ಗೆದ್ದಿರುವುದರಿಂದ ಹೇಮಾ ಮಾತು ಶುರುಮಾಡಿದಾಗ ಚಪ್ಪಾಳೆಗಳು ಬಿದ್ದವು.

ಅಮೆರಿಕಾ... ಚಿತ್ರದಲ್ಲಿ ನಾಗತಿಹಳ್ಳಿಯವರೊಂದಿಗೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ ಎಂದ ಹೇಮಾ, ಗಂಡ ಹೆಂಡತಿಯ ನಡುವಿನ ವಿಶ್ವಾಸಕ್ಕೆ ಸಂಬಂಧಿಸಿದ ಈ ಕಥೆ ಸುಂದರವಾಗಿದೆ ಎಂದರು.

ಹಿರಿಯನಟ ದತ್ತಾತ್ರೇಯ ನಾಗತಿಹಳ್ಳಿಯವರನ್ನು ಹೊಗಳಿದರು. ಅಮೆರಿಕಾದಲ್ಲಿ ಶೂಟಿಂಗ್‌ ಮಾಡುವುದು ತುಂಬಾ ಕಷ್ಟ ಅಂದುಕೊಂಡಿದ್ದೆ. ಆದರೆ ನಾಗತಿಹಳ್ಳಿಯವರು ಸುಲಲಿತವಾಗಿ ಶೂಟಿಂಗ್‌ ಮಾಡಿಕೊಂಡು ಬಂದರು. ಶೂಟಿಂಗ್‌ ಸ್ಲಾಟ್‌ ಆರಿಸಿ ನಿರ್ವಹಿಸುವ ಕಲೆ ಅವರಿಗೆ ಅಂಗೈ ನೆಲ್ಲಿ ಎಂದು ದತ್ತಣ್ಣ ನಾಗತಿಹಳ್ಳಿಯವರ ಕೌಶಲ್ಯವನ್ನು ಮೆಚ್ಚಿಕೊಂಡರು.

ದಾವಣಗೆರೆ ಸಾಂಸ್ಕೃತಿಕ ವೇದಿಕೆ ನಾಗತಿಹಳ್ಳಿ ಚಿತ್ರೋತ್ಸವವನ್ನು ಆಯೋಜಿಸಿತ್ತು. ವೇದಿಕೆಯ ಅಧ್ಯಕ್ಷ ಆರ್‌. ಟಿ. ಆರುಣ್‌ಕುಮಾರ್‌, ಮುಂದಿನ ವರ್ಷ ಕವಿತಾ ಲಂಕೇಶ್‌ ಅವರ ಚಿತ್ರಗಳನ್ನೂ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada