»   » ನಾಗಬಂಧನದಲ್ಲಿ ಉಪೇಂದ್ರ-ವಿಷ್ಣು

ನಾಗಬಂಧನದಲ್ಲಿ ಉಪೇಂದ್ರ-ವಿಷ್ಣು

Posted By: Staff
Subscribe to Filmibeat Kannada
Nagabharana Ts
ನಾಗಾಭರಣ ಕಿರುತೆರೆಗೇ ಲಾಯಕ್ಕು ?
ರಾಜ್‌ ಬ್ಯಾನರಿನ ರಕ್ಷೆ , ಕಾರಂತರ ಕಾದಂಬರಿಯ ಕ್ಯಾನ್ವಾಸ್‌, ಶಿವಣ್ಣನಂಥ ಜನಪ್ರಿಯ ನಟನಿದ್ದೂ 'ಚಿಗುರಿದ ಕನಸು" ಚಿತ್ರ ಸೋತಾಗ ನಿರ್ದೇಶಕ ನಾಗಾಭರಣರ ಕಥೆ ಮುಗಿಯಿತೆಂದೇ ಎಲ್ಲರೂ ಭಾವಿಸಿದ್ದರು. 'ಚಿಗುರಿದ ಕನಸು" ಚಿತ್ರ ಚೆನ್ನಾಗಿತ್ತು . ಆದರೆ ಜನ ಮೆಚ್ಚಲಿಲ್ಲ . ಜನರ ಮಾತಿರಲಿ, ಕೇಂದ್ರಸರ್ಕಾರದ ಪ್ರಶಸ್ತಿ ಕೂಡ ಬರಲಿಲ್ಲ . ಇದೇ ಹೊತ್ತಿನಲ್ಲಿ ಕನ್ನಡ ಚಿತ್ರರಂಗಕ್ಕೆ ವೃತ್ತಿಪರ ರಾಜಕಾರಣವನ್ನು ಪರಿಚಯಿಸಿದ ಖ್ಯಾತಿಯ ಎಚ್‌.ಡಿ.ಕುಮಾರಸ್ವಾಮಿ ನಿರ್ಮಾಣದ ಹೆಜ್ಜೆ ಚಿತ್ರದಿಂದಲೂ ಭರಣರಿಗೆ ಗೇಟ್‌ಪಾಸ್‌ ಸಿಕ್ಕಿತ್ತು . ಬಲ್ಲಾಳರ 'ಹೆಜ್ಜೆ " ಕಾದಂಬರಿಯನ್ನು ಚಿತ್ರವಾಗಿಸುವ ಬಗ್ಗೆ ಭರಣ ಕನಸು ಕಂಡಿದ್ದರು ; ಆ ಕನಸು ಕೂಡ ಚಿಗುರಲಿಲ್ಲ ! ಹೀಗಾಗಿ ಚಿತ್ರದ ಸಂಪೂರ್ಣ ಸೋಲುನಿರಾಶೆಗೆ ಗುರಿಯಾದದ್ದು ನಾಗಾಭರಣ.

ಉಹುಂ, ನಾಗಾಭರಣರ ಕಥೆ ಮುಗಿಯಿತೆಂದು ಲೆಕ್ಕ ಹಾಕುವ ಪಂಡಿತರು ಅವರ ಹಿಂದಿನ ಚಿತ್ರಗಳ ಸೋಲುಗೆಲುವುಗಳನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ನಾಗಾಭರಣ ಅವರಿಗೆ ಸೋಲು ಹೊಸದಲ್ಲ . ದೊಡ್ಡ ಹಿಟ್‌ಗಳು ಅವರ ಅಕೌಂಟ್‌ನಲ್ಲಿರುವಂತೆ ಶೂನ್ಯ ಸಂಪಾದನೆಯೂ ಇದೆ. ಇನ್ನೇನು ನಾಗಾಭರಣ ನೆಲ ಕಚ್ಚಿದರು ಅನ್ನುವ ಹೊತ್ತಿನಲ್ಲೇ ಚಿನ್ನಾರಿಮುತ್ತನಂತೆ ಅವರು ಮುಗಿಲೆತ್ತರಕ್ಕೆ ನಿಂತದ್ದೂ ಇದೆ. 'ಚಿಗುರಿದ ಕನಸು" ಸೋಲಿನ ನಂತರವೂ ಅಷ್ಟೇ, ಸೋಲನ್ನು ಮರೆಸುವ ಎತ್ತರದ ಪ್ರಯತ್ನವೊಂದಕ್ಕೆ ನಾಗಾಭರಣ ಸಿದ್ಧತೆ ನಡೆಸಿದ್ದಾರೆ. ಒಂದು ಮಾತಿನಲ್ಲಿ ಹೇಳುವುದಾದರೆ- ಉಪೇಂದ್ರ ಹಾಗೂ ವಿಷ್ಣುವರ್ಧನ್‌ ಕಾಂಬಿನೇಷನ್‌ನ ಚಿತ್ರವೊಂದನ್ನು ನಾಗಾಭರಣ ನಿರ್ದೇಶಿಸಲಿದ್ದಾರೆ!

ನಾಗಾಭರಣರ ಹೊಸ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿರುವವರು- ಧೀರ ರಾಕ್‌ಲೈನ್‌ ವೆಂಕಟೇಶ್‌. ರಾಕ್‌ ನಿರ್ಮಾಣದ 'ಮೌರ್ಯ" ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಪುನೀತ್‌ ಅಭಿನಯದ 'ಮೌರ್ಯ"ನ ಓಪನಿಂಗ್‌ ಆಕರ್ಷಕವಾಗಿಲ್ಲ . ಹಾಗಾಗಿ ರಾಕ್‌ಲೈನ್‌ ಹೊಸ ಚಿತ್ರದ ಬಗ್ಗೆ ಇನ್ನಷ್ಟು ಆಸ್ಥೆ ವಹಿಸುವುದು ಖಚಿತ.

ಉಪೇಂದ್ರ ಹಾಗೂ ವಿಷ್ಣುವರ್ಧನ್‌ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರೆಂದ ಮೇಲೆ ಅಭಿಮಾನಿಗಳ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿರುತ್ತವೆ. ಆ ಕಾರಣದಿಂದಲೇ ನಾಗಾಭರಣ ಚಿತ್ರಕಥೆಯನ್ನು ತಿದ್ದಿತೀಡಿ ಒಪ್ಪವಾಗಿಸುತ್ತಿದ್ದಾರೆ. ಮಹಾಮಾಯಿ ಧಾರಾವಾಹಿ 200 ಕಂತುಗಳನ್ನು ಪೂರೈಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಾಭರಣ- ಇರಾನ್‌ನಲ್ಲಿ ನಡೆಯುವ ಮಕ್ಕಳ ಚಿತ್ರೋತ್ಸವದಲ್ಲಿ ಪಾಲ್ಗೊಂಡ ನಂತರ ರಾಕ್‌ಲೈನ್‌ರ ಮೆಗಾ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ.

ಮೈಸೂರು ಮಲ್ಲಿಗೆ ಹಾಗೂ ಜನುಮದ ಜೋಡಿ ನಂತರ ಜನಮೆಚ್ಚುವ ಚಿತ್ರ ಕೊಡಲು ಸಾಧ್ಯವಾಗದುದಕ್ಕೆ ಬೇಸರವಿದೆ. ಹಾಗಾಗಿ ಹೊಸ ಚಿತ್ರದ ಬಗೆಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೇನೆ. ಇಮೇಜ್‌ ಉಳ್ಳ ನಟರಿಬ್ಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ನಿರೀಕ್ಷೆಗಳು ಸಹಾ ಹೆಚ್ಚಿರುತ್ತವೆ. ಈ ಚಿತ್ರ ಕಮರ್ಷಿಯಲ್‌ ಹಾಗೂ ಕಲಾತ್ಮಕ ಚಿತ್ರ ಎರಡರ ಮಿಶ್ರಣವಾಗಿರಲಿದೆ ಎಂದು ನಾಗಾಭರಣ ತಿಳಿಸಿದ್ದಾರೆ.

ನಾಗಾಭರಣರಿಗೆ ಯಶಸ್ಸು ಸಿಗಲಿ. ಕನ್ನಡ ಪ್ರೇಕ್ಷಕರಿಗೊಂದು ಒಳ್ಳೆಯ ಚಿತ್ರ ದೊರಕಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada