»   » ಸಿನಿಮಾ ಅಮ್ಮನಾಗಿ ಸಾಕಷ್ಟು ಅನುಭವ ಹೊಂದಿರುವ ಶ್ರುತಿ

ಸಿನಿಮಾ ಅಮ್ಮನಾಗಿ ಸಾಕಷ್ಟು ಅನುಭವ ಹೊಂದಿರುವ ಶ್ರುತಿ

Posted By: Staff
Subscribe to Filmibeat Kannada
Shruti
'ಎರಡೂ ವರ್ಷದ ಹಿಂದೇನೆ ಅಮ್ಮನಾಗಿದ್ದರೆ ಚೆನ್ನಾಗಿತ್ತು !"
ಮುಖದಲ್ಲಿನ್ನೂ ಬಾಣಂತಿಯ ಬಿಸುಪು ಆರದ ಶ್ರುತಿ ನಾಲ್ಕು ತಿಂಗಳ ಮಗುವ ಕವುಚಿಕೊಂಡು ಮಾತಿಗೆ ಶುರುವಿಟ್ಟುಕೊಂಡರು. ಅವರ ಮಾತಿನಲ್ಲಿದ್ದುದು ಅಮ್ಮಂದಿರಿಗೆ ಬುದ್ಧಿವಾದವೋ ಅಥವಾ ತಾಯ್ತನದ ಸುಖವನ್ನು ತಾವು ಈವರೆಗೂ ಕಳಕೊಂಡ ಬಗೆಗಿನ ವಿಷಾದವೋ.. ಯಾರಿಗೆ ಗೊತ್ತು ?

ಅಮ್ಮನಾಗುವ ಖುಷಿ ತಂತಾನೇ ಸಹಜವಾಗಿ ಒದಗಿದರೇನೆ ಚೆಂದ. ತಾಯಿಯಾಗಬೇಕು ಎಂದು ನಿರ್ಧರಿಸಿ ಅಮ್ಮನಾಗುವುದು ಒಂಥರಾ ಯಾಂತ್ರಿಕ ಎಂದು ಶ್ರುತಿ ತಾಯ್ತನದ ಆಳ ಅಗಲಗಳ ವ್ಯಾಖ್ಯಾನಕ್ಕಿಳಿದರು. ಮಗು ಮಡಿಲಲ್ಲಿ ಆಡಿಕೊಳ್ಳುತ್ತಿತ್ತು .

ಬಾಣಂತನದ ಹಿತ ಅನುಭವಿಸುತ್ತ ಮನೆಯಲ್ಲಿ ಬೆಚ್ಚಗಿದ್ದ ಶ್ರುತಿ ತುಂಬಾ ದಿನಗಳ ನಂತರ ಬಯಲಿಗೆ ಬಂದಿದ್ದರು. ಅದು ಎಚ್‌.ಪಿ.ಬಸವರಾಜ್‌ ನಿರ್ಮಾಣದ 'ಸಖಿ" ಚಿತ್ರದ ಮುಹೂರ್ತದ ಕಾರ್ಯಕ್ರಮ. ಮುಹೂರ್ತ ನಡೆದದ್ದು ಕಂಠೀರವ ಸ್ಟುಡಿಯೋದಲ್ಲಿ . 'ಸಖಿ" ಚಿತ್ರಕ್ಕೆ ಎಸ್‌.ಮಹೇಂದರ್‌ ನಿರ್ದೇಶಕರು. ಆ ಕಾರಣದಿಂದಾಗಿಯೇ ಮಹೇಂದರ್‌ ಪ್ರಾಣಸಖಿ- ಶ್ರುತಿ ಮಗುವಿನೊಂದಿಗೆ ಮುಹೂರ್ತಕ್ಕೆ ಆಗಮಿಸಿದ್ದರು. 'ಸಖಿ"ಗೆ ಶುಭ ಕೋರಿದರು.

ಪ್ರವೀಣ್‌ ಕುಮಾರ್‌ ನಾಯಕನಾಗಿ ಅಭಿನಯಿಸುತ್ತಿರುವ 'ಸಖಿ" ಚಿತ್ರಕ್ಕೆ ಫೂನಂ ನಾಯಕಿ. ರಮೇಶ್‌ ಭಟ್‌, ಪ್ರಮೋದಿನಿ, ಮೈನಾವತಿ, ಜಿ.ವಿ.ಕೃಷ್ಣ , ಕರಿಬಸವಯ್ಯ , ಬ್ಯಾಂಕ್‌ ಜನಾರ್ಧನ್‌, ಅಶ್ವಥ್‌, ದಯಾನಂದ್‌, ಬೇಬಿ ರಕ್ಷ ತಾರಾಗಣದಲ್ಲಿನ ಇತರರು. ಎಸ್‌.ಎಂ.ಶಂಕರ್‌ ಕೆಮರಾ, ಚೈತನ್ಯ ಸಂಗೀತ, ರಮೇಶ್‌ಬಾಬು ಛಾಯಾಗ್ರಹಣ, ಪಿ.ಆರ್‌.ಸೌಂದರ್‌ರಾಜನ್‌ ಸಂಕಲನ 'ಸಖಿ"ಗಿದೆ.

ಮತ್ತೆ ನಾ ಬರುವೆ...
ತಾಯ್ತನದಿಂದ ಮಾತು ಹೊರಳಿದ್ದು ಸಿನಿಮಾದತ್ತ . 'ಮಗಳು ಮಿಲಿ ಬೇರೆಯವರ ಜೊತೆ ಹೊಂದಿಕೊಳ್ಳುವಂತಾಗಲಿ. ಆಗಷ್ಟೇ ನಾನು ಸಿನಿಮಾದಲ್ಲಿ ಮರಳಿ ನಟಿಸುವುದು ಸಾಧ್ಯ" ಎಂದರು ಶ್ರುತಿ. ಅವರ ಕಣ್ಣುಗಳು ಮಿನುಗುತ್ತಿದ್ದವು. ಅಲ್ಲಿ ಕಲಾವಿದೆಯ ನಟಿಸುವ ಹಸಿವಿತ್ತಾ ?

'ಗಟ್ಟಿಮೇಳ" ಸದ್ದು ಮಾಡದಿದ್ದರೂ ಸ್ವಂತ ಚಿತ್ರ ಮಾಡುವ ಆಸೆ ಅವರಿಗಿನ್ನೂ ಇದೆ. ತಮ್ಮ ನೂರನೇ ಚಿತ್ರ ಸ್ವಂತ ಬ್ಯಾನರ್‌ನಲ್ಲೇ ತಯಾರಾದರೆ ಚೆಂದ ಅಂದುಕೊಂಡಿದ್ದೇವೆ. ಮಹೇಂದರ್‌ ಕತೆ ರೆಡಿ ಮಾಡಿಟ್ಟಿದ್ದಾರೆ ಎಂದರು ಶ್ರುತಿ.

ಅಂದಹಾಗೆ, ಶ್ರುತಿ ಮಗಳ ಹೆಸರು 'ಮಿಲಿ"!
ಶ್ರುತಿ ಕುಟುಂಬದಲ್ಲಿ ಚಿಲಿಪಿಲಿ !!

English summary
Kannada filmdom : Shruti is enjoying her motherhood... with her baby Mili
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada