»   » ಖುಷ್ಬೂ ಸುತ್ತ ಎದ್ದಿದೆ ವಿವಾದದ ಹೊಸ ಹುತ್ತ!

ಖುಷ್ಬೂ ಸುತ್ತ ಎದ್ದಿದೆ ವಿವಾದದ ಹೊಸ ಹುತ್ತ!

Posted By:
Subscribe to Filmibeat Kannada

ಕುಂಭಕೋಣಂ, ನ.29 : 'ಹೆಣ್ಣು ಮಕ್ಕಳು ವಿವಾಹಪೂರ್ವ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ತಪ್ಪೇನಿಲ್ಲ" ಎಂದು ಹೇಳುವ ಮೂಲಕ ಈ ಹಿಂದೆ ಇಡೀ ದೇಶದಲ್ಲೇ ಗುಲ್ಲೆಬ್ಬೆಸಿದ್ದರು ನಟಿ ಖುಷ್ಬೂ. ಈಗ ಹಿಂದೂ ದೇವತೆಗಳಿಗೆ ಅವಮರ್ಯಾದೆ ತೋರುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆಣಕಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ತಮಿಳು ಚಿತ್ರವೊಂದಕ್ಕೆ ಸಂಬಂಧಿಸಿದಂತೆ ಮುಹೂರ್ತ ಸಮಾರಂಭವೊಂದರಲ್ಲಿ ಆಕೆ ಭಾಗವಹಿಸಿದ್ದರು. ಲಕ್ಷ್ಮೀ, ಪಾರ್ವತಿ ಮತ್ತು ಸರಸ್ವತಿ ದೇವತಾವಿಗ್ರಹಗಳ ಮುಂದೆ ಚಪ್ಪಲಿ ಧರಿಸಿ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡಿರುವ ಚಿತ್ರವೊಂದು ನಿಯತಕಾಲಿಕೆಯಲ್ಲಿ ವಾರದ ಹಿಂದೆ ಪ್ರಕಟವಾಗಿತ್ತು. ಈ ಸಂಬಂಧ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಬ್ಬರು ಕೋರ್ಟ್‌ನಲ್ಲಿ ದೂರು ನೀಡಿದ್ದಾರೆ.

ಹಿಂದೂ ಧಾರ್ಮಿಕ ಭಾವನೆಗಳನ್ನು ಕೆಣಕಿರುವ ಖುಷ್ಬೂ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗುರುಮೂರ್ತಿ ಎಂಬ ಫಿರ್ಯಾದಿ ಕುಂಭಕೋಣಂನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ನ.22ರಂದು ಆಕೆ ತಮಿಳು ಚಿತ್ರವೊಂದರ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಆಕೆ ಚಪ್ಪಲಿ ಧರಿಸಿ ಕಾಲ ಮೇಲೆ ಕಾಲು ಹಾಕಿಕೊಂಡು ದೇವತಾವಿಗ್ರಹಗಳ ಮುಂದೆ ಕುಳಿತಿದ್ದರು. ತಮಿಳು ಪತ್ರಿಕೆಯೊಂದರಲ್ಲಿ ಚಪ್ಪಲಿ ಧರಿಸಿರುವ ಛಾಯಾಚಿತ್ರ ಪ್ರಕಟವಾಗಿತ್ತು. ಖಾಸಗಿ ದೂರದರ್ಶನ ವಾಹಿನಿಗಳಲ್ಲೂ ಈ ದೃಶ್ಯಾವಳಿ ಪ್ರಸಾರವಾಗಿತ್ತು ಎಂದು ಕುಂಭಕೋಣಂ ಘಟಕದ ಹಿಂದೂ ಪರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಗುರುಮೂರ್ತಿ ಎಂಬುವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮುಂದುವರಿದು, ಮುಹೂರ್ತದ ಪೂಜಾ ಕಾರ್ಯಕ್ರಮದಲ್ಲಿ ಗಣ್ಯರಾದ ಐಪಿಎಸ್ ಅಧಿಕಾರಿ ತಿಲಕಾವತಿ, ಲೇಖಕರಾದ ಶಿವಶಂಕರಿ ಪಾಲ್ಗೊಂಡಿದ್ದರು. ಖುಷ್ಬೂ ಧಾರ್ಮಿಕ ಭಾವನೆಗಳನ್ನು ಕಡೆಗಣಿಸುವ ಮೂಲಕ ಹಿಂದೂಗಳಿಗೆ ನೋವುಂಟು ಮಾಡಿದ್ದಾರೆ. ಖುಷ್ಬೂ ಅವರು ತಮ್ಮ ಸ್ವೇಚ್ಛಾಚಾರದ ಮೂಲಕ ಧಾರ್ಮಿಕ ಭಾವನೆಗಳನ್ನು ಕೆಣಕಿದ್ದಕ್ಕಾಗಿ ಐಪಿಸಿ ಸೆಕ್ಷನ್ 295 ಮತ್ತು 295ಎ ಪ್ರಕಾರ ಆಕೆಗೆ ಶಿಕ್ಷೆ ವಿಧಿಸಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಖುಷ್ಬೂ ವಿರುದ್ಧದ ದೂರನ್ನು ಸ್ವೀಕರಿಸುರುವ ನ್ಯಾಯಾಧೀಶರಾದ ಬಾಬೂಲಾಲ್ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಿದ್ದಾರೆ. ಈ ಸುಸಂಸ್ಕೃತವಲ್ಲದ ವರ್ತನೆಗೆ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಹಿಂದುಗಳ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಅವರ ದುರಹಂಕಾರ, ಆಕೆ ಏನೇ ಮಾಡಿದರೂ ಮಹಿಳಾ ಸಂಘಟೆನೆಗಳೂ ಆಕೆಯನ್ನು ಕಾಪಾಡುತ್ತಿವೆ ಎಂದು ಹಿಂದೂಪರ ಸಂಘಟನೆಯ ನಾಯಕರಾದ ರಾಮಗೋಪಾಲನ್ ತಿಳಿಸಿದರು. ಹೆಣ್ಣು ಮಕ್ಕಳು ವಿವಾಹಪೂರ್ವ ಲೈಂಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ತಪ್ಪೇನಿಲ್ಲ ಎಂಬ ಹೇಳಿಕೆಯ ವಿರುದ್ದ ತಮಿಳುನಾಡಿನ ವಿವಿಧ ನ್ಯಾಯಾಲಯಗಳಲ್ಲಿ ಖುಷ್ಬೂ ವಿರುದ್ಧ ಈಗಾಗಲೇ 9 ಕೇಸುಗಳು ದಾಖಲಾಗಿವೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada