»   » ಛಾಪಾಕಾಗದ ಪಾಪಿ ಲಾಲ ತೆಲಗಿ ಕುರಿತೊಂದು ಸಿನಿಮಾ-‘ಶಲ್ಯ’

ಛಾಪಾಕಾಗದ ಪಾಪಿ ಲಾಲ ತೆಲಗಿ ಕುರಿತೊಂದು ಸಿನಿಮಾ-‘ಶಲ್ಯ’

Subscribe to Filmibeat Kannada

ಮುಂಬಯಿ : ಬಹುಕೋಟಿ ಛಾಪಾ ಹಗರಣದ ರೂವಾರಿ ಕರೀಂ ಲಾಲ ತೆಲಗಿಯ ಜೀವಂತ ಕಥೆ ಈಗ ಮರಾಠಿ ಚಿತ್ರವಾಗಿ ನಿರ್ಮಿತವಾಗಿದೆ.

ಎನ್‌ಕೌಂಟರ್‌ಗೆ ಹೆಸರುವಾಸಿಯಾಗಿರುವ ಸಬ್‌ ಇನ್ಸ್‌ಪೆಕ್ಟರ್‌ ದಯಾನಾಯಕ್‌ ಕುರಿತ ಮರಾಠಿ ಚಿತ್ರ ‘ಕಗಾರ್‌’ ನಿರ್ಮಿಸಿದ ಅಶೋಕ್‌ ಗಜಾನನ್‌ ಛೌಗುಲೆ ಈ ಚಿತ್ರಕ್ಕೂ ಕಾಸು ಹಾಕಿದ್ದಾರೆ. ಚಿತ್ರ ಈಗಾಗಲೇ ಸಿದ್ಧವಾಗಿದ್ದು, ಇತ್ತೀಚೆಗೆ ಪ್ಲಾಜಾ ಚಿತ್ರಮಂದಿರದಲ್ಲಿ ಒಂದು ಪ್ರೀಮಿಯರ್‌ ಪ್ರದರ್ಶನ ಕೂಡ ಕಂಡಿತು.

ಚಿತ್ರದ ಹೆಸರು ಶಲ್ಯ. ತೆಲಗಿಯ ಹೆಸರು ಇದರಲ್ಲಿ ನೆಲಗಿ. ವಿಲಾಸ್‌ ಉಜ್ವಾನೆ ಎಂಬ ನಟ ತೆಲಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಮರಾಠಿ ಚಿತ್ರೋದ್ಯಮದಲ್ಲಿ ಹೆಸರು ಮಾಡಿರುವ ಆನಂದ್‌ ಜೋಗ್‌, ಸುಧೀರ್‌ ದಳ್ವಿ, ಸ್ಮಿತಾ ಓಕ್‌ ಪ್ರಮುಖಪಾತ್ರಗಳಲ್ಲಿ ಇದ್ದಾರೆ. ಅಮೋಲ್‌ ಅಶೋಕ್‌ ಛೌಗಲೆ ಚಿತ್ರದ ನಾಯಕ. ಅಮೋಲ್‌ ಜಾಗೀರ್‌ದಾರ್‌ ಎಂಬ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಈತ ನಟಿಸಿದ್ದಾರೆ.

ಹೇಮಂತ್‌ ಕುಮಾರ್‌ ಶರ್ಮ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಕಲಿ ಛಾಪಾ ಕಾಗದ ಹಗರಣದ ಜಾಲದ ಸಾಮಾಜಿಕ ಪರಿಣಾಮ ಚಿತ್ರಿತವಾಗಿದೆ. ಹಗರಣ ಶುರುವಾಗುವುದು, ಅರ್ಥ ವ್ಯವಸ್ಥೆಯನ್ನು ಅದು ಬುಡಮೇಲು ಮಾಡುವುದು, ಈ ಸಮಾಜ ಘಾತುಕ ಕೆಲಸವನ್ನು ಮಟ್ಟ ಹಾಕಲು ಬರುವ ಪೊಲೀಸ್‌ ಅಧಿಕಾರಿ ವಿಕ್ರಂ ಜಾಗೀರ್‌ದಾರ್‌ನನ್ನು ಪಾತಕಿಗಳು ಕೊಲ್ಲುವುದು, ಈ ಕೊಲೆಯ ಸೇಡನ್ನು ವಿಕ್ರಂ ಪುತ್ರ ಅಮೋಲ್‌ ತೀರಿಸಿಕೊಳ್ಳುವುದು, ಆ ಮೂಲಕ ಛಾಪಾ ಪಾಪಕ್ಕೂ ಇತಿಶ್ರೀ ಹಾಡುವುದು- ಚಿತ್ರದ ಸಂಕ್ಷಿಪ್ತ ಕಥೆ. ಚಿತ್ರಕ್ಕೆ ನಡುನಡುವೆ ಅಗತ್ಯ ಮಸಾಲೆಗಳನ್ನೂ ಸೇರಿಸಲಾಗಿದೆ.

ಮರಾಠಿ ಚಿತ್ರಗಳು ಕಡಿಮೆ ತಯಾರಾಗುತ್ತಿವೆ. ಮಹಾರಾಷ್ಟ್ರದಲ್ಲಿ ತೆಲಗಿಯ ಹಗರಣ ಈಗ ಸಂಚಲನೆಯ ವಿಷಯ. ಇದು ತೆರೆಗೆ ಬಂದರೆ ಯಶಸ್ವಿಯಾಗುವುದು ಗ್ಯಾರಂಟಿ ಎಂಬ ಕಾರಣಕ್ಕೆ ಈ ಚಿತ್ರ ನಿರ್ಮಿಸಿದೆ ಎನ್ನುತ್ತಾರೆ ಛೌಗಲೆ. ಈ ಚಿತ್ರವನ್ನು ಹಿಂದಿ ಭಾಷೆಗೆ ತಂದುಕೊಳ್ಳುವ ಮಾತುಕತೆ ನಡೆಯುತ್ತಿದೆ ಎಂಬ ಗುಸುಗುಸು ಕೂಡ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada