»   » ಉಪ್ಪಿಯ ಗೌರಮ್ಮ - ರಮ್ಯ

ಉಪ್ಪಿಯ ಗೌರಮ್ಮ - ರಮ್ಯ

Posted By: Super
Subscribe to Filmibeat Kannada

ಚಿತ್ರವಿಚಿತ್ರ ಹೆಸರುಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಉಪೇಂದ್ರರ ಮುಂದಿನ ಚಿತ್ರ 'ಗೌರಮ್ಮ". ಅರೇ ಉಪ್ಪಿಗೂ ಗೌರಮ್ಮಂಗೂ ಏನು ಸಂಬಂಧ ಅಲ್ಲವೇ? 'ಕುಟುಂಬ" ಉಪ್ಪಿಗೊಂದು ಒಳ್ಳೆಯ ರೂಪ ನೀಡಿತು. ಉಪ್ಪಿ ಚಿತ್ರವೆಂದರೇ, 'ಛೇ ಛೇ...ಥೂ ಥೂ" ಎಂದು ಮಾರು ದೂರ ಸರಿಯುತ್ತಿದ್ದ ಹೆಣ್ಣು ಮಕ್ಕಳು, ಮನೆಯ ಹಿರಿಯರನ್ನು ಉಪೇಂದ್ರ ಆ ಚಿತ್ರದಿಂದ ಸೆಳೆದಿದ್ದರು. ಈಗ ಮತ್ತೆ ಅದೇ ದಾರಿಯಲ್ಲಿ ನಿಂತಿದೆ ಗೌರಮ್ಮ.

ಮದುವೆ ನಂತರ ಉಪ್ಪಿ ಬದಲಾದರೇ ?-ಈ ಪ್ರಶ್ನೆಗೆ ಉಪ್ಪಿ ಸುತರಾಂ ಇಲ್ಲ ಅಂತಾರೆ. ಮದುವೆಗೂ ಪಾತ್ರಕ್ಕೂ ಸಂಬಂಧವೇ ಇಲ್ಲ. ನಾನು ಕೇವಲ ಪಡ್ಡೆ ಹುಡುಗರ ನಟನಲ್ಲ. ವಿಚಿತ್ರ ವೇಷ ಹಾಕಿಕೊಂಡು, ಮನಸ್ಸಿಗೆ ಬಂದಂತೆ ಕುಣಿಯೋನು ಅಲ್ಲ. ನಾನು ಎಂತಹ ಪಾತ್ರ ಬೇಕಾದರೂ ನಿಭಾಯಿಸಬಲ್ಲೆ ಅನ್ನುತ್ತಾರೆ ಉಪ್ಪಿ.

ಕುಟುಂಬ ತಂಡದ ಶೈಲೇಂದ್ರಬಾಬು(ನಿರ್ಮಾಪಕ), ನಾಗಣ್ಣ(ನಿರ್ದೇಶಕ), ಉಪೇಂದ್ರ ಮತ್ತೆ ಗೌರಮ್ಮ ಮೂಲಕ ಕೈ ಸೇರಿಸಿದ್ದಾರೆ. ಚಿತ್ರದ ನಾಯಕಿ ರಮ್ಯಾ. ಚಿತ್ರದ ಹೆಸರು ಗೌರಮ್ಮ ಆದರೂ, ಮಾಡ್ರನ್‌ ಗೌರಮ್ಮ ಆಗಿ ರಮ್ಯಾ ನಟಿಸುತ್ತಿದ್ದಾರೆ. ಇದು ನುವ್ವು ನಾಕು ನೆಚ್ಚಾವು ಚಿತ್ರದ ರಿಮೇಕ್‌.

'ರೈತ"ನ ಕನಸು : ಅಂದ ಹಾಗೇ ಹಳ್ಳಿಯಿಂದ ಬಂದಿರೋ ಉಪ್ಪಿಗೆ ಅಂತಹ ಪಾತ್ರವೇ ಈವರೆಗೆ ಸಿಕ್ಕೇ ಇಲ್ಲ ಅನ್ನೋ ಬೇಜಾರು ಇದೆ. ಹೀಗಾಗಿ ಅವರೇ ಒಂದು ಕತೆ ರೆಡಿ ಮಾಡಿದ್ದಾರೆ. ಚಿತ್ರದ ಹೆಸರು- ರೈತ. ಇದನ್ನು ತಮ್ಮ ಮೊದಲ ನಿರ್ಮಾಣದ ಚಿತ್ರವಾಗಿಸುವ ಕನಸು ಸಹ ಅವರಲ್ಲಿದೆ. ನಟ, ನಿರ್ದೇಶಕ, ಸಂಭಾಷಣೆ, ಚಿತ್ರಕತೆ, ಹಾಡು, ಗಾಯನ- ಹೀಗೆ ಎಲ್ಲ ರಂಗದಲ್ಲೂ ಬಹುರೂಪಿಯಾಗಿರುವ ಉಪೇಂದ್ರ ನಿರ್ಮಾಪಕರಾಗುವ ಹಾದಿಯಲ್ಲಿದ್ದಾರೆ.

ಸ್ವಲ್ಪ ಪ್ಲಾಷ್‌ಪ್ಯಾಕ್‌ಗೆ ಹೋಗೋದಾದ್ರೆ, ಪ್ರೀತ್ಸೆ ಚಿತ್ರದ ನಂತರ ಉಪ್ಪಿ ಗೆದ್ದಿದ್ದಕ್ಕಿಂತಲೂ ಕಳೆದುಕೊಂಡದ್ದೆ ಜಾಸ್ತಿ. ನಾಗರಹಾವು, ಹಾಲಿವುಡ್‌, ಸೂಪರ್‌ಸ್ಟಾರ್‌, ಎಚ್‌ಟುಓ ಚಿತ್ರಗಳು ಸಾಲಾಗಿ ಬಂದು ಮುಗ್ಗರಿಸಿದ್ದವು. ಕೋಟಿ ರೂಪಾಯಿ ಸಂಭಾವನೆಯ 'ಉಪ್ಪಿ"ಯುಗ ಮುಗಿಯಿತು ಎಂದೇ ಗಾಂಧಿನಗರ ಹೇಳುತ್ತಿತ್ತು.

ಅವರಿಗೆ ಜೀವ ನೀಡಿದ್ದು- ಕುಟುಂಬ. ನಂತರ ಬಂದದ್ದು ರಕ್ತಕಣ್ಣೀರು. ಅದರ ಯಶಸ್ಸಿಗೆ ಉಪ್ಪಿ ಡೈಲಾಗ್‌ ಡೆಲಿವರಿನೇ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಮತ್ತೆ ಉಪ್ಪಿ ನಿಂತರು. ಆದರೆ ಒಂದು ಬದಲಾವಣೆ. ಈಗ ಅವರು ಮಾಸ್‌ ಹೀರೋ. ನ್ಯೂಸ್‌, ಉಪ್ಪಿದಾದ ಎಂಬಿಬಿಎಸ್‌ ಮುಗಿಯುವ ಹಂತದಲ್ಲಿದೆ. ಆಟೋ ಶಂಕರ್‌ ಸೆಟ್ಟೇರಿದೆ. 2005ರಲ್ಲಿ ಉಪ್ಪಿ ಚಿತ್ರಕ್ಕೆ ಉಪ್ಪಿ ಚಿತ್ರಗಳೇ ಪೈಪೋಟಿ ನೀಡಿದರೆ ಅಚ್ಚರಿ ಇಲ್ಲ.

English summary
Gorgeous Gouramma Ramya pairs up with Uppi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada