ರಂಜಾನ್ ಸಂಭ್ರಮದಲ್ಲಿ ನಾಳೆ ಬಿಡುಗಡೆಯಾಗುತ್ತಿವೆ 3 ಚಿತ್ರಗಳು
Recommended Video

ಪವಿತ್ರ ರಂಜಾನ್ ಮಾಸ ಶುರುವಾಗಿ 29 ದಿನ ಕಾಲಿಟ್ಟಿದೆ. ಮುಸ್ಲಿಂ ಬಾಂಧವರ ಮನ, ಮನೆ, ಮಸೀದಿ ಎಲ್ಲ ಕಡೆ ಪ್ರಾರ್ಥನೆ ನಡೆಯುತ್ತಿದೆ. ಇದರ ಜೊತೆ ಜೊತೆಗೆ ಹಬ್ಬದ ಸಂಭ್ರಮದಲ್ಲಿಯೇ ನಾಳೆ ಮೂರು ಹೊಸ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ದ್ವಾರಕೀಶ್ ಚಿತ್ರ ಬ್ಯಾನರ್ ನಲ್ಲಿ ಬರುತ್ತಿರುವ 51 ನೇ ಸಿನಿಮಾ 'ಅಮ್ಮ ಐ ಲವ್ ಯು', ನಟಿ ಸುಕೃತ ವಾಗ್ಲೆ ನಟನೆಯ 'ಮೇಘ ಅಲಿಯಾಸ್ ಮ್ಯಾಗಿ' ಹಾಗೂ ಹೊಸಬರ 'ಕಟ್ಟುಕಥೆ' ಈ ಮೂರು ಚಿತ್ರಗಳು ಇದೇ ಶುಭ ಶುಕ್ರವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ.
ಅಂದಹಾಗೆ, ನಾಳೆ ತೆರೆಗೆ ಬರುತ್ತಿರುವ ಈ ಮೂರು ಸಿನಿಮಾಗಳ ಒಂದಷ್ಟು ವಿವರ ಮುಂದಿದೆ ನೋಡಿ.

ಅಮ್ಮ ಐ ಲವ್ ಯು
ದ್ವಾರಕೀಶ್ ಚಿತ್ರ ಲಾಂಛನದಲ್ಲಿ ನಿರ್ಮಿಸಿರುವ `ಅಮ್ಮ ಐ ಲವ್ ಯು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರಕ್ಕೆ ಸಸಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಗುರುಕಿರಣ್ ಸಂಗೀತದ ಹಾಡುಗಳು ಹಿಟ್ ಆಗಿವೆ. ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ನಿಶ್ವಿಕ, ಪ್ರಕಾಶ್ ಬೆಳವಾಡಿ, ಸಿತಾರ, ಚಿಕ್ಕಣ್ಣ, ರವಿಕಾಳೆ ಬಿರಾದಾರ್, ತರಂಗ ವಿಶ್ವ, ಗಿರಿ ದ್ವಾರಕೀಶ್, ಅವಿನಾಶ್ ಮುಂತಾದವರಿದ್ದಾರೆ.
ಮುಖ್ಯ ಚಿತ್ರಮಂದಿರ : ಸಂತೋಷ್

ಚಿರು - ಚೈತನ್ಯ ಜೋಡಿಯ ಹ್ಯಾಟ್ರಿಕ್ ಚಿತ್ರ
'ಅಮ್ಮ ಐ ಲವ್ ಯು' ಸಿನಿಮಾ ತಮಿಳಿನ 'ಪಿಚ್ಚೆಗಾರನ್' ಚಿತ್ರದ ರಿಮೇಕ್ ಆಗಿದೆ. ಅಲ್ಲದೆ, ನಿರ್ದೇಶಕ ಕೆ.ಎಂ.ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಜೋಡಿಯ ಹ್ಯಾಟ್ರಿಕ್ ಚಿತ್ರ ಇದಾಗಿದೆ. ಈ ಹಿಂದೆ ಕೆ.ಎಂ.ಚೈತನ್ಯ ಅವರ 'ಆಟಗಾರ' ಹಾಗೂ 'ಆಕೆ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದರು. ಮತ್ತೊಂದು ವಿಶೇಷ ಅಂದರೆ ಮದುವೆಯ ನಂತರ ರಿಲೀಸ್ ಆಗುತ್ತಿರುವ ಚಿರಂಜೀವಿ ಅವರ ಮೊದಲ ಚಿತ್ರ ಇದು.

'ಕಟ್ಟುಕಥೆ'
'ಕಟ್ಟುಕಥೆ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಅನಘ ಪ್ರೋಡಕ್ಷನ್ ಲಾಂಛನದಲ್ಲಿ ಸ್ವೀಟ್ಸ್ ಮಹದೇವ ಮೈಸೂರು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಜ್ ಪ್ರವೀಣ್ ನಿರ್ದೇಶನದ ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯ ಸಂಗೀತ ನೀಡಿದ್ದಾರೆ. ಜೊತೆಗೆ 'ಟಗರು' ಚಿತ್ರದ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ, ಮಿತ್ರ, ಕೆಂಪೇಗೌಡ, ಬೃನಾಲಿ ಶೆಟ್ಟಿ, ರಿಹಾಂಸಿ ಗೌಡ, ಸೂರ್ಯ ಕುಂದಾಪುರ, ಮೋಹನ್ ಜುನೇಜ, ನಟನ ಪ್ರಶಾಂತ್, ರಜನಿಕಾಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮುಖ್ಯ ಚಿತ್ರಮಂದಿರ : ತ್ರೀವೇಣಿ

ಮೇಘ ಅಲಿಯಾಸ್ ಮ್ಯಾಗಿ
'ಮೇಘ ಅಲಿಯಾಸ್ ಮ್ಯಾಗಿ' ಚಿತ್ರ ಸಹ ಇದೇ ವಾರ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಟಾಮ್ ಬಾಯ್ ಪಾತ್ರವನ್ನು ನಟಿ ಸುಕೃತ ವಾಗ್ಲೆ ನಿರ್ವಹಿಸುತ್ತಿದ್ದಾರೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ನಿಂದ ಕೂಡಿಕೊಂಡಿದೆ. ಚಿತ್ರದಲ್ಲಿ ಸುಕೃತಾ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಶಾರ್ಟ್ ಹೇರ್ ಸ್ಟೈಲ್ ನಲ್ಲಿ, ಹುಡುಗರ ರೀತಿಯಲ್ಲಿ ಬಟ್ಟೆ ತೊಟ್ಟು, ಒಳ್ಳೆ ಗಂಡುಬೀರಿ ತರಹ ಮಿಂಚಲಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ತೇಜುಗೌಡ ನಾಯಕನಾಗಿ ಸುಕೃತಾಗೆ ಸಾತ್ ಕೊಡುತ್ತಿದ್ದಾರೆ. ವಿಶಾಲ್ ಪುಟ್ಟಣ್ಣ ನಿರ್ದೇಶನ ಮಾಡಿದ್ದಾರೆ.
ಮುಖ್ಯ ಚಿತ್ರಮಂದಿರ : ಮೇನಕಾ

ನಿಮ್ಮ ಆಯ್ಕೆ ಯಾವುದು?
'ಅಮ್ಮ ಐ ಲವ್ ಯೂ', 'ಮೇಘ ಅಲಿಯಾಸ್ ಮ್ಯಾಗಿ' ಹಾಗೂ 'ಕಟ್ಟು ಕಥೆ' ಈ ಮೂರು ಕನ್ನಡ ಸಿನಿಮಾಗಳು ನಾಳೆ ಚಿತ್ರಮಂದಿರಕ್ಕೆ ಬರಲಿದೆ. ಇವುಗಳ ಪೈಕಿ ನೀವು ನೋಡಲು ಇಷ್ಟ ಪಡುವ ಸಿನಿಮಾದ ಹೆಸರನ್ನು ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.


Click it and Unblock the Notifications











