ಈ ವಾರ 'ರುಸ್ತುಂ' ಜೊತೆ ಬರ್ತಿವೆ ಮತ್ತೆರಡು ಸಿನಿಮಾಗಳು
ಶುಕ್ರವಾರ ಅಂದರೆ ಹೊಸ ಸಿನಿಮಾದ ಆಗಮನದ ದಿನ. ಈ ವಾರ ಕೂಡ ಚಿತ್ರಮಂದಿರಗಳಿಗೆ ಮೂರು ಹೊಸ ಸಿನಿಮಾಗಳು ಬರುತ್ತಿದೆ.
ಶಿವರಾಜ್ ಕುಮಾರ ಅಭಿನಯದ 'ರುಸ್ತುಂ', 'ಸಮಯದ ಹಿಂದೆ ಸವಾರಿ' ಹಾಗೂ 'ಒನ್ ವೇ' ಈ ಮೂರು ಚಿತ್ರಗಳು ಜೂನ್ 28 ರಂದು ಬಿಡುಗಡೆಯಾಗುತ್ತಿವೆ.
'ರುಸ್ತುಂ' ರವಿವರ್ಮ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಶಿವರಾಜ್ ಕುಮಾರ್ ಮತ್ತೆ ಪೊಲೀಸ್ ಗೆಟಪ್ ನಲ್ಲಿ ಖದರ್ ತೋರಿಸಲು ಬಂದಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಹಿಟ್ ಆಗಿದ್ದು, ಸಿನಿಮಾದ ಕ್ರೇಜ್ ಜಾಸ್ತಿಯಾಗಿದೆ.

ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ ಹಾಗೂ ರಚಿತಾ ರಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಸಿಳೀನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಾಸ್ ಅಭಿಮಾನಿಗಳಿಗೆ ಸಿನಿಮಾ ಮಜಾ ನೀಡುವುದು ಪಕ್ಕಾ ಎನ್ನುವ ಸೂಚನೆ ಸಿಕ್ಕಿದೆ.
ಪತ್ರಕರ್ತ ಜೋಗಿ ಅವರ 'ನದಿಯ ನೆನಪಿನ ಹಂಗು' ಕಾದಂಬರಿ ಆಧಾರಿತ 'ಸಮಯದ ಹಿಂದೆ ಸವಾರಿ' ಸಿನಿಮಾ ಕೂಡ ಇದೇ ವಾರ ಬಿಡುಗಡೆಯಾಗುತ್ತಿದೆ. ರಂಗಭೂಮಿಯ ಪ್ರತಿಭಾವಂತ ನಟ, ನಿರ್ದೇಶಕ, ಸಂಗೀತಗಾರ ರಾಜ್ ಗುರು ಹೊಸಕೋಟೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ರಾಹುಲ್ ಹೆಗ್ಡೆ, ಪ್ರಕೃತಿ, ಕಿರಣ್ ವಟಿ, ರಂಜಿತ್ ಶೆಟ್ಟಿ, ಶಿವ ಶಂಕರ್, ಪ್ರವಿನ್ ಹೆಗ್ಡೆ ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಹೆಗ್ಡೆ ಚಿತ್ರದ ನಿರ್ಮಾಣ ಮಾಡಿದ್ದು, ರಂಜಿತ್, ಪ್ರವೀಣ್ ಹೆಗ್ಡೆ ಸಹ ನಿರ್ಮಾಪಕರಾಗಿದ್ದಾರೆ.

ನಿರ್ದೇಶಕ ನಮ್ ಖುಷಿ ಅವರ 'ಒನ್ ವೇ' ಸಿನಿಮಾ ನಾಳೆ (ಶುಕ್ರವಾರ) ತೆರೆಗೆ ಬರುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಗೆಳೆಯ ರಾಜ್ ಬಹದ್ದೂರ್ ಅವರ ಸ್ನೇಹದ ಕುರಿತಾಗಿ ಸಿನಿಮಾದ ಕತೆ ಇದೆಯಂತೆ. ಚಿತ್ರದ ನಿರ್ದೇಶನ ಜೊತೆಗೆ ಒಂದು ಪಾತ್ರದಲ್ಲಿಯೂ ಖುಷಿ ನಟಿಸಿದ್ದಾರೆ.


Click it and Unblock the Notifications











