twitter
    For Quick Alerts
    ALLOW NOTIFICATIONS  
    For Daily Alerts

    'ರಾಜರತ್ನ' ದೈವಾಧೀನರಾಗಿ 3 ತಿಂಗಳು: ಕುಟುಂಬದಿಂದ ವಿಶೇಷ ಕಾರ್ಯ!

    |

    ಕನ್ನಡ ಚಿತ್ರರಂಗದ ಬೆಳಕು ಪವರ್​ ಸ್ಟಾರ್​ ಪುನೀತ್‌ ರಾಜ್‌ಕುಮಾರ್, ನಟನಾಗಿ ಮಾತ್ರವಲ್ಲದೆ ಒಬ್ಬ ಆದರ್ಶ ವ್ಯಕ್ತಿತ್ವ ಇರುವ ವ್ಯಕ್ತಿಯಾಗಿ ಜನರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಂದಿಗೆ ಪುನೀತ್‌ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು 3 ತಿಂಗಳು ಕಳೆದು ಹೋಗಿದೆ. ಇದೇ ಬೆನ್ನಲ್ಲೇ ಇಂದು ರಾಜ್‌ಕುಮಾರ್ ಕುಟುಂಬ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದೆ.

    ಅಪ್ಪು ಸಮಾಧಿಗೆ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳ ದಂಡು ಕಂಠೀರವ ಸ್ಟುಡಿಯೋಗೆ ಹರಿದು ಬರ್ತಿದೆ. ಪುನೀತ್​ ಅವರ ಸಮಾಧಿಗೆ ನಮನ ಸಲ್ಲಿಸಲು ಸಹಸ್ರಾರು ಅಭಿಮಾನಿಗಳು ಬರ್ತಿದ್ದಾರೆ. ಕನ್ನಡದ ಕಣ್ಮಣಿ ನಟ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅಗಲಿ ಮೂರು ತಿಂಗಳಾಗಿದೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ.

    ಪುನೀತ್ ಅವರನ್ನು ಮರೆಯುವುದು ಅಸಾಧ್ಯ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ, ಅಜರಾಮರ. ಅವರು ಇಲ್ಲವಾದರು ನಿತ್ಯವೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಅವರ ಹೆಸರು ಸದಾ ವೈರಲ್ ಲಿಸ್ಟ್‌ನಲ್ಲಿ ಇದ್ದೇ ಇರುತ್ತದೆ.

    ಪೂಜೆ ಕಾರ್ಯದಲ್ಲಿ ಪುನೀತ್ ಮಕ್ಕಳು ಭಾಗಿ!

    ಪೂಜೆ ಕಾರ್ಯದಲ್ಲಿ ಪುನೀತ್ ಮಕ್ಕಳು ಭಾಗಿ!

    ಇಂದು ಪುನೀತ್‌ ರಾಜ್‌ಕುಮಾರ್ ಅವರ ಮೂರನೇ ತಿಂಗಳ ಪುಣ್ಯ ತಿಥಿ. ಹಾಗಾಗಿ ಅಪ್ಪು ಸಮಾಧಿಗೆ ರಾಜ್​ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​, ವಿಜಯ್​ ರಾಘವೇಂದ್ರ, ಧೀರನ್ ರಾಮ್​ ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​, ಪುತ್ರಿ ಧೃತಿ, ಪುನೀತ್ ಸಹೋದರಿ ಲಕ್ಷ್ಮೀ ಹಾಗೂ ಗೋವಿಂದ ರಾಜು ಅವರು ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಸಮಾಧಿ ಆವರಣದಲ್ಲಿ ರಾಘವೇಂದ್ರ ರಾಜ್​ಕುಮಾರ್​​ ಗಿಡ ನೆಟ್ಟರು.ಇದಾದ ಬಳಿಕ ಅಭಿಮಾನಿಗಳಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸಸಿ ವಿತರಿಸಿದರು.

    ದೊಡ್ಮನೆಯಿಂದ ಅಭಿಮಾನಿಗಳಿಗೆ ಸಸಿ ವಿತರಣೆ!

    ದೊಡ್ಮನೆಯಿಂದ ಅಭಿಮಾನಿಗಳಿಗೆ ಸಸಿ ವಿತರಣೆ!

    ಅಪ್ಪು ಅಗಲಿ ಮೂರು ತಿಂಗಳು ಕಳೆದಿದೆ. ಹಾಗಾಗಿ ಅಪ್ಪು ಸಮಾಧಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಅಭಿಮಾನಿಗಳು ಮಾತ್ರವಲ್ಲದೇ, ಸಿನಿಮಾ ಮಂದಿ ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ನಮಿಸುತ್ತಿದ್ದಾರೆ. ಜೊತೆಗೆ ರಾಜ್‌ ಕುಟುಂಬದಿಂದ ವಿಶೇಷ ಕಾರ್ಯ ಮಾಡಲಾಗಿದೆ. ಅಭಿಮಾನಿಗಳಿಗಾಗಿ 500 ಸಸಿಗಳನ್ನು ವಿತರಣೆ ಮಾಡಲಾಗಿದೆ. ಅಪ್ಪು ಸಮಾಧಿಗೆ ಬರುವ ಅಭಿಮಾನಿಗಳಿಗೆ ಪುನೀತ್‌ ರಾಜ್‌ಕುಮಾರ್ ಅವರ ಹೆಸರಲ್ಲಿ ಸಸಿಗಳನ್ನು ವಿತರಣೆ ಮಾಡಲಾಯಿತು. ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡಗಳನ್ನು ಅಭಿಮಾನಿಗಳಿಗೆ ಉಡುಗೊರೆ ನೀಡಲಾಗಿದೆ.

    ಕಾಡು, ಹಸಿರು ಎಂದರೆ ಅಪ್ಪುಗೆ ಇಷ್ಟ: ರಾಘವೇಂದ್ರ ರಾಜ್‌ಕುಮಾರ್!

    ಕಾಡು, ಹಸಿರು ಎಂದರೆ ಅಪ್ಪುಗೆ ಇಷ್ಟ: ರಾಘವೇಂದ್ರ ರಾಜ್‌ಕುಮಾರ್!

    ಪೂಜೆ ನೆರವೇರಿಸಿದ ಬಳಿಕ ಅಪ್ಪು ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. "ಅಪ್ಪು ಅಭಿಮಾನಿಗಳು ಭಕ್ತರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಪುಣ್ಯಭೂಮಿಗೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಅಭಿಮಾನಿಗಳಿಗೆ ಗಿಡ ಕೊಟ್ಟು ನೆಡಲು ಯೋಚನೆ ಮಾಡಲಾಗಿದೆ. ಅಪ್ಪು ಹುಟ್ಟುಹಬ್ಬದ ವೇಳೆಗೆ ಒಂದು ಲಕ್ಷ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅಪ್ಪಾಜಿ ಅವರು ಹೇಳಿದ ಹಾಗೆ ನಾನು ಮೊದಲು ಗಿಡ ನೆಟ್ಟು ಆ ಕೆಲಸಕ್ಕೆ ಚಾಲನೆ ಕೊಡಲಾಗಿದೆ. ಅಪ್ಪು ಅಗಲಿಕೆಯ ಮುನ್ನ ಕಾಡಿನಲ್ಲಿ ಕೆಲಸ ಮಾಡಿದ್ರು. ಕಾಡು ಹಸಿರು ಅಪ್ಪುಗೆ ಬಹಳ ಇಷ್ಟ ಹಾಗಾಗಿ ಗಿಡ ನೀಡುವ ಕೆಲಸ ಶುರುವಾಗಿದೆ." ಎಂದು ರಾಘಣ್ಣ ಹೇಳಿದರು.

    ಅಪ್ಪುಗಾಗಿ ದೀಪೋತ್ಸವ ಕಾರ್ಯಕ್ರಮ!

    ಅಪ್ಪುಗಾಗಿ ದೀಪೋತ್ಸವ ಕಾರ್ಯಕ್ರಮ!

    ಅಪ್ಪು ಸಮಾಧಿ ಬಳಿ ಕುಟುಂಬಸ್ಥು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನ ಹಮ್ಮಿಕೊಂಡಿದ್ದಾರೆ. ಇದರಂತೆ, 500 ಸಸಿಗಳನ್ನು ಅಭಿಮಾನಿಗಳಿಗೆ ನೀಡಲಾಗಿದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೂ ಚಾಲನೆ ಸಿಕ್ಕಿದೆ. ಅಪ್ಪು ಸಮಾದಿ ಎದುರು ಇರುವ ಸ್ಕಿಲ್ ಡಿಪಾರ್ಟ್​ಮೆಂಟ್ ವತಿಯಿಂದ ಸಂಜೆ 6 ಗಂಟೆಗೆ ದೀಪೋತ್ಸವ ನಡೆಯಲಿದೆ. ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರ ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ‌ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

    English summary
    3 Months For Puneeth Rajkuma's Death : Family Gave 500 Plnats To Appu Fans
    Saturday, January 29, 2022, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X