ಬ್ಯಾನರ್ ಕಟ್ಟಲು ಹೋಗಿ ದುರಂತ ಅಂತ್ಯ ಕಂಡ ಅಭಿಮಾನಿಗಳ ಕುಟುಂಬಕ್ಕೆ ಯಶ್ ಧನ ಸಹಾಯ
10 ದಿನಗಳ ಹಿಂದೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೂವರು ಅಭಿಮಾನಿ ದುರಂತ ಸಾವಿಗೀಡಾಗಿದ್ದರು. ನೆಚ್ಚಿನ ನಟದ ಹುಟ್ಟುಹಬ್ಬ ಆಚರಣೆಗೆ ಬ್ಯಾನರ್ ಕಟ್ಟಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮುರಳಿ, ನವೀನ್ ಮತ್ತು ಹನುಮಂತ ಎಂಬ ಮೂವರು ಅಭಿಮಾನಿಗಳು ಕೊನೆಯುಸಿರೆಳೆದಿದ್ದರು. ಇದೀಗ ನಟ ಯಶ್ ಮೂವರ ಕುಟುಂಬಕ್ಕೆ ಪರಿಹಾರವಾಗಿ ಹಣ ಸಹಾಯ ಮಾಡಿರುವುದಾಗಿ ವರದಿಯಾಗಿದೆ.
ನಟ ಯಶ್ ಆಪ್ತರು ಮುರಳಿ, ನವೀನ್ ಮತ್ತು ಹನುಮಂತ ಮನೆಗಳಿಗೆ ಭೇಟಿ ನೀಡಿ ಪರಿಹಾರದ ಹಣದ ಚೆಕ್ ವಿತರಿಸಿ ಬಂದಿದ್ದಾರೆ. ಪ್ರತಿಯೊಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳ ಕುಟುಂಬಸ್ಥರು ಕಣ್ಣೀರಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಹುಟ್ಟುಹಬ್ಬದ ದಿನ ನಡೆದ ಕಹಿ ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ನಟ ಯಶ್ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಜನವರಿ 8ರಂದು ನಟ ಯಶ್ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಜನವರಿ 7ರಂದು ರಾತ್ರಿಯೇ ಗದಗ ಜಿಲ್ಲೆಯ ಸೊರಣಗಿ ಗ್ರಾಮದಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟಿ ಸಂಭ್ರಮಾಚರಣೆಗೆ ಮುಂದಾಗಿದ್ದರು. ಆದರೆ ಈ ವೇಳೆ ಬ್ಯಾನರ್‌ಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಮುರಳಿ, ನವೀನ್ ಹಾಗೂ ಹನುಮಂತ ನರಳಾಡಿ ಜೀವ ಬಿಟ್ಟಿದ್ದರು. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಮೃತ ಅಭಿಮಾನಿಗಳು ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ನಟ ಯಶ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. "ನೋಡಿ ಅಭಿಮಾನ ಯಾವುದೇ ಕಾರಣಕ್ಕೂ ಈ ರೀತಿ ವ್ಯಕ್ತ ಪಡಿಸಬೇಕು, ಬ್ಯಾನರ್ ಹಾಕಬೇಕು ಅನ್ನೋದೆಲ್ಲ ಇಷ್ಟ ಪಡಲ್ಲ. ಪ್ರತಿ ವರ್ಷ ಬರ್ತ್‌ಡೇ ಬಂದಾಗ ಈತರ ಒಂದೊಂದು ಘಟನೆ ನಡೆದಾಗ, ನನಗೆ ಬರ್ತ್‌ಡೇ ಅಂದರೇನೆ ಭಯ ಬಂದುಬಿಟ್ಟಿದೆ. ನಿಜ ಹೇಳಬೇಕು ಅಂದರೆ, ನನ್ನ ಬಗ್ಗೆ ನನಗೆ ಅಸಹ್ಯ ಆಗಿಬಿಟ್ಟಿದೆ."

"ಹೀಗೆ ಬ್ಯಾನರ್ ಕಟ್ಟೋದು, ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರೋದು. ಫೋಟೊ ತೆಗೆಯೋದು, ಸೆಲ್ಫಿ ತೆಗೆಯೋದು ಇವನ್ನೆಲ್ಲ ಬಿಟ್ಟು ಬಿಡಿ. ನನ್ನ ಸುತ್ತಮುತ್ತ ಜನ ಇರಬೇಕು ಅಂತ ಬಯಸೋದಿಲ್ಲ. ಬೇಜಾರು ಮಾಡಿಕೊಂಡರೂ ಪರ್ವಾಗಿಲ್ಲ ಅಂತ ನಾನು ಯಾರ ಕೈಗೂ ಸಿಗೋದಿಲ್ಲ" ಎಂದಿದ್ದರು.
ಪರಿಹಾರದ ಬಗ್ಗೆ ಕೇಳಿದ ಪ್ರಶ್ನೆಗೆ "ನಾನು ಈಗ ಏನೋ ಒಂದು ಘೋಷಣೆ ಮಾಡೋದು ದೊಡ್ಡ ವಿಷಯ ಅಲ್ಲ. ನಾನು ನಿಜವಾಗಲೂ ಅವರ ಕುಟುಂಬವನ್ನು ಅರ್ಥ ಮಾಡಿಕೊಂಡು. ಅವರಿಗೆ ಏನು ಅವಶ್ಯಕತೆ ಇರುತ್ತೋ? ಅದನ್ನು ಮಾಡೋಣ. ಇವತ್ತು ಅದೆಲ್ಲ ಮಾತಾಡೋ ಸಮಯ ಅಲ್ಲ" ಎಂದು ಯಶ್ ಹೇಳಿದ್ದರು.
ಇನ್ನು ಗದಗ ಜಿಲ್ಲೆಗೆ ಸೊಣರಗಿಗೆ ಯಶ್ ಬರುವ ವಿಚಾರ ತಿಳಿದು ನೆಚ್ಚಿನ ನಟನನ್ನು ನೋಡಲು ಬರುತ್ತಿದ್ದ ಮತ್ತೊಬ್ಬ ಅಭಿಮಾನಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಗಾಯಗೊಂಡಿದ್ದ ಅಭಿಮಾನಿಗಳನ್ನು ನೋಡಲು ಯಶ್ ಗದಗದ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಂದು ಯಶ್ನ ನೋಡಲು ಹೋಗುತ್ತಿದ್ದ 22 ವರ್ಷದ ಅಭಿಮಾನಿ ಕೊನೆಯುಸಿರೆಳೆದಿದ್ದರು. ನಿಖಿಲ್ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.


Click it and Unblock the Notifications










