ಸಾಯಿ ಬಾಬಾ ಅವತಾರ ತಾಳಿದ ತೆಲುಗು ಖಳನಟ
ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಶಿಯಾಜಿ ಶಿಂಧೆ ಈಗ ಸಾಯಿಬಾಬಾ ಅವತಾರ ತಾಳಿದ್ದಾರೆ. ಆದರೆ ನಿಜವಾಗಿ ಅಲ್ಲ, ತೆರೆಯ ಮೇಲೆ ಎಂಬುದು ನಿಮ್ಮ ಗಮನಕ್ಕಿರಲಿ. ಶಿಯಾಜಿ ಶಿಂಧೆ ಹಲವಾರು ಪಾತ್ರಗಳನ್ನು ಪೋಷಿಸಿದ್ದರೂ ಹೆಚ್ಚಾಗಿ ಗುರುತಿಸಿಕೊಂಡಿದ್ದು ಖಳನಟನಾಗಿ.
ಕನ್ನಡದ ಶ್ರೀಮತಿ ಹಾಗೂ ಲವಕುಶ ಚಿತ್ರಗಳಲ್ಲೂ ಶಿಂಧೆ ಅಭಿನಯಿಸಿದ್ದಾರೆ. ಇನ್ನೂ ನಿರ್ಮಾಣ ಹಂತದಲ್ಲಿರುವ ಮಾಲಾಶ್ರೀ ಅವರ ಶಕ್ತಿ ಚಿತ್ರದಲ್ಲೂ ಶಿಂಧೆ ಅಭಿನಯಿಸುತ್ತಿದ್ದಾರೆ. ಈಗವರು ಸಾಯಿಬಾಬಾ ಆಗಿ ಕಾಣಿಸುತ್ತಿರುವುದು ತೆಲುಗು ಚಿತ್ರದಲ್ಲಿ.
ಈಗಾಗಲೆ ಎರಡು ಮೂರು ಸಾಯಿಬಾಬಾ ಚಿತ್ರಗಳು ತೆಲುಗಿನಲ್ಲಿ ಸೆಟ್ಟೇರಿವೆ. ಅವುಗಳಲ್ಲಿ ಶಿಂಧೆ ಅವರು ಅಭಿನಯಿಸುತ್ತಿರುವ ಚಿತ್ರವೂ ಒಂದು.ಆದರೆ ಇವರು ಪುಟ್ಟಪರ್ತಿ ಸಾಯಿಬಾಬಾ ಆಗಿ ಅಭಿನಯಿಸುತ್ತಿಲ್ಲ. ಶಿರಡಿ ಸಾಯಿಬಾಬಾ ಆಗಿ ಕಾಣಿಸಲಿದ್ದಾರೆ.
ಪುಟ್ಟಪರ್ತಿ ಪವಾಡ ಪುರುಷನಾಗಿ ಕನ್ನಡಿಗ ಪ್ರಕಾಶ್ ರೈ ಅಭಿನಯಿಸುತ್ತಿರುವುದು ಗೊತ್ತೆ ಇದೆ. ಮತ್ತೊಂದು ಸಾಯಿಬಾಬಾ ಚಿತ್ರದಲ್ಲಿ ನಾಗಾರ್ಜುನ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಮೂರು ಸಾಯಿಬಾಬಾ ಚಿತ್ರಗಳು ತೆಲುಗಿನಲ್ಲಿ ನಿರ್ಮಾಣವಾಗುತ್ತಿವೆ. (ಏಜೆನ್ಸೀಸ್)


Click it and Unblock the Notifications











