»   » ಚಿಣ್ಣರಿಗಾಗಿ ಶಿವಮೊಗ್ಗದಲ್ಲಿ ಚಲನಚಿತ್ರೋತ್ಸವ

ಚಿಣ್ಣರಿಗಾಗಿ ಶಿವಮೊಗ್ಗದಲ್ಲಿ ಚಲನಚಿತ್ರೋತ್ಸವ

Subscribe to Filmibeat Kannada

ಶಿವಮೊಗ್ಗ ಅ. 30: ಚಿಲ್ಡ್ರನ್ ಫಿಲಂ ಸೊಸೈಟಿ ಇಂಡಿಯಾ ಹಾಗೂ ಜಿಲ್ಲಾಡಳಿತದ ವತಿಯಿಂದ ಇದೇ ನವೆಂಬರ್ 1ರಿಂದ 13ರವರೆಗೆ ಸಾರ್ವತ್ರಿಕ ರಜಾದಿನಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ ಏರ್ಪಡಿಸಿದೆ. ಈ ಚಿತ್ರೋತ್ಸವ ಸಂದರ್ಭದಲ್ಲಿ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಶಿಸ್ತು, ರಾಷ್ಟ್ರ ಪ್ರೇಮ, ಕರ್ತವ್ಯಪ್ರಜ್ಞೆ ಗುರಿ ಸಾಧನೆ ಇತ್ಯಾದಿ ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ತೀರ್ಥಹಳ್ಳಿ ತಾಲೂಕಿನ ಆಯ್ದ ಚಿತ್ರಮಂದಿರಗಳಲ್ಲಿ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಈ ಸಂಬಂಧವಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ನಿರ್ಣಯದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು 5ರಿಂದ 9ನೇ ತರಗತಿಯ ಸುಮಾರು 50 ಸಾವಿರ ವಿದ್ಯಾರ್ಥಿಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ.

ಚಿತ್ರೋತ್ಸವದಲ್ಲಿ ಮಲ್ಲಿ, ಹಲೋ, ಇನ್ನೊಂದು ಮುಖ, ಒಂದು ಅದ್ಭುತ, ಒಮ್ಮೆ ಪಾಸ್, ಒಮ್ಮೆ ಫೇಲ್, ವಾದ್ಯ ಚಿತ್ರಗಳನ್ನು ಪ್ರದರ್ಶಿಸಲಿದ್ದು, ನವೆಂಬರ್ 3ರಿಂದ 6ರವರೆಗೆ ಶಿವಮೊಗ್ಗ ನಗರದಲ್ಲಿರುವ ವೀರಭದ್ರೇಶ್ವರ, ಹೆಚ್ ಪಿ ಸಿ, ಮಲ್ಲಿಕಾರ್ಜುನ, ಶ್ರೀ ಲಕ್ಷ್ಮಿ, ಮಾರ್ಡನ್, ಮಂಜುನಾಥ, ವಿನಾಯಕ ಚಿತ್ರಮಂದಿರಗಳಲ್ಲಿ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನವೆಂಬರ್ 7, 8,10 ರಂದು ಭದ್ರಾವತಿ ಪಟ್ಟಣದ ವೆಂಕಟೇಶ್ವರ, ನೇತ್ರಾವತಿ, ವಾಗೀಶ್, ಭಾಗ್ಯವತಿ, ವಿನಾಯಕ, ಶಂಕರ್ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನಗಳು ಜರುಗಲಿವೆ.
ನವೆಂಬರ್ 11,12 ಹಾಗೂ 13 ರಂದು ತೀರ್ಥಹಳ್ಳಿ ಪಟ್ಟಣದ ವೆಂಕಟೇಶ್ವರ, ವಿನಾಯಕ ಚಿತ್ರಮಂದಿರದಲ್ಲಿ, ಸಾಗರ ಪಟ್ಟಣದ ಶ್ರೀ ಸಾಗರ, ಶ್ರೀ ಟಾಕೀಸ್‌ನಲ್ಲಿ, ಶಿಕಾರಿಪುರದ ಮಾಲತೇಶ, ಕಿರಣ, ರಾಜಶೇಖರ ಚಿತ್ರಮಂದಿರದಲ್ಲಿ ಪ್ರದರ್ಶನಗಳು ನಡೆಯಲಿವೆ.

ಚಿತ್ರಗಳ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ಆಯಾ ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ನಗರಸಭಾ ಅಧ್ಯಕ್ಷ, ಪುರಸಭೆಯ ಅಧಿಕಾರಿಗಳ ನೇತೃತ್ವದ ಸಮಿತಿಯ ಚಿತ್ರೋತ್ಸವಕ್ಕೆ ಸಕಲಸಿದ್ಧತೆ ಕೈಗೊಂಡಿದೆ.

ನವೆಂಬರ್ 1ರಂದು ಬೆಳಗ್ಗೆ 11ಗಂಟೆಗೆ ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಮಕ್ಕಳ ಚಲನಚಿತ್ರೋತ್ಸವ ಉದ್ಘಾಟನೆ ಜರುಗಲಿದೆ. ಈ ಸಮಾರಂಭದಲ್ಲಿ ಜಿಲ್ಲೆಯ ಸಚಿವರು, ಶಾಸಕರು ಇನ್ನಿತರೆ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada