ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ 'ಧ್ರುವ' ತಾರೆ ಆಗಮನ
ಕನ್ನಡ ಚಿತ್ರರಂಗಕ್ಕೆ ಸರ್ಜಾ ಕುಟುಂಬದ ಮತ್ತೊಂದು ಕುಡಿ ಆಗಮಿಸಿದೆ. ನೋಡಲು ದೃಢಕಾಯ, ಆಕ್ಷನ್ ಚಿತ್ರಗಳಿಗೆ ಹೇಳಿ ಮಾಡಿಸಿದ ಮೈಕಟ್ಟು. ಹೆಸರು ಧ್ರುವ ಸರ್ಜಾ. ಆಕ್ಷನ್ ಕಿಂಗ್ ಅರ್ಜು ನ್ ಸರ್ಜಾ ಅವರ ಸಂಬಂಧಿ. 'ಅದ್ದೂರಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ.
"ನಮ್ಮ ಅಂಕಲ್ ಅರ್ಜುನ್ ಸರ್ಜಾರಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಗುರಿ ಮುಟ್ಟುವ ತನಕ ಹೋರಾಡು ಎಂದು ಅವರು ಹೇಳುತ್ತಿದ್ದರು. ನೃತ್ಯ, ಸಾಹಸ, ಕುದುರೆ ಸವಾರಿ, ಈಜು ಜೊತೆಗೆ ಅಭಿನಯ ತರಂಗದಲ್ಲಿ ಅಭಿನಯವನ್ನು ಶ್ರದ್ಧೆಯಿಂದ ಕಲಿತು ಚಿತ್ರರಂಗಕ್ಕೆ ಅಡಿಯಿಟ್ಟಿದ್ದೇನೆ. 'ಅದ್ದೂರಿ' ನನ್ನ ಚೊಚ್ಚಲ ಚಿತ್ರ. ಫಸ್ಟ್ ಕ್ಲಾಸ್ ನಲ್ಲಿ ಪಾಸಾಗುತ್ತೇನೆ ಎಂಬ ವಿಶ್ವಾಸವಿದೆ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಖಂಡಿತ ಡಿಸ್ಟಿಂಕ್ಷನ್ ನಲ್ಲಿ ಪಾಸಾಗುತ್ತೇನೆ" ಎಂದರು ಧ್ರುವ ಸರ್ಜಾ.
ಕಂಠೀರವ ಸ್ಟುಡಿಯೋದಲ್ಲಿ 'ಅದ್ದೂರಿ' ಚಿತ್ರೀಕರಣ ಚಾಲನೆ ಪಡೆದುಕೊಂಡ ಸಂದರ್ಭದಲ್ಲಿ ಧ್ರುವ ಸರ್ಜಾ ಮಾತನಾಡುತ್ತಿದ್ದರು. ಬಾಲ್ಡ್ ವಿನ್ ಕಾಲೇಜಿನಲ್ಲಿ ಬಿಬಿಎಂ ಓದುತ್ತಿರುವ ಧ್ರುವ ಸರ್ಜಾ 94 ಕೆ.ಜಿ ತೂಕದ ದಢೂತಿ ಆಸಾಮಿ ಆಗಿದ್ದರಂತೆ. 'ಅದ್ದೂರಿ' ಚಿತ್ರಕ್ಕಾಗಿ ಆತ ತೂಕವನ್ನು 64 ಕೆ ಜಿಗೆ ಇಳಿಸಿಕೊಂಡು ಸ್ಮಾರ್ಟ್ ಅಂಡ್ ಸ್ವೀಟ್ ಆಗಿದ್ದಾರೆ.
ಶಂಕರ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಪಿ ಅರ್ಜುನ್ ನಿರ್ದೇಶಿಸುತ್ತಿದ್ದಾರೆ. ರಾಧಿಕಾ ಪಂಡಿತ್ ಚಿತ್ರದನಾಯಕಿ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅರ್ಜುನ್ ಸರ್ಜಾ ಸಹ ಚಿತ್ರದ ಮುಹೂರ್ತದಲ್ಲಿ ಉಪಸ್ಥಿತರಿದ್ದರು. ನನಗಿಂತಲೂ ಅತ್ಯುತ್ತಮವಾಗಿ ಧ್ರುವ್ ಸರ್ಜಾ ನಟಿಸುತ್ತಾರೆ ಎಂಬ ಮಾತನ್ನು ಅವರು ಹೇಳಿ ಪ್ರೋತ್ಸಾಹಿಸಿದರು.
"ನಮ್ಮ ತಂದೆ ಶಕ್ತಿ ಪ್ರಸಾದ್ ಅವರ ನಿಧನದ ಬಳಿಕ ನಾನು ಮತ್ತು ಕಿಶೋರ್ ಸರ್ಜಾ ಚಿತ್ರರಂಗಕ್ಕೆ ಬಂದೆವು. ಬಳಿಕ ಚಿರಂಜೀವಿ ಸರ್ಜಾ ಅಡಿಯಿಟ್ಟ. ಈಗ ಧ್ರುವ ಆಗಮಿಸಿದ್ದಾನೆ. ಧ್ರುವನಲ್ಲಿ ಆತ್ಮವಿಶ್ವಾಸವಿದೆ, ಅಂಕಿತಭಾವವಿದೆ ಆತ ನಿಜಕ್ಕೂ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡುತ್ತಾನೆ ಎಂಬ ನಂಬಿಕೆ ನನಗಿದೆ " ಎಂದರು ಅರ್ಜುನ್ ಸರ್ಜಾ.


Click it and Unblock the Notifications











