ಜರಾಸಂಧ '3 ಕೋಟಿ' ರು. ಗಳಿಕೆ ವರದಿ ಠುಸ್
ಹ್ಯಾಟ್ರಿಕ್ ನಿರ್ದೇಶಕ ಶಶಾಂಕ್ 'ಜರಾಸಂಧ' ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಕಟು ಟೀಕೆ ವ್ಯಕ್ತವಾಗಿತ್ತು. ಆದರೆ 'ಜರಾಸಂಧ' ಮೊದಲ ದಿನವೇ 1 ಕೋಟಿ ರು, 2 ನೇ ದಿನ 1, ಹಾಗೂ 3 ನೇ ದಿನ 1, ಹೀಗೆ ಒಟ್ಟೂ 3 ಕೋಟಿ ರು. ಭರ್ಜರಿ ಕಲೆಕ್ಷನ್ ಆಗಿದೆ. ಇದು ವಿಜಯ್ ನಟನೆಯ, ಈವರೆಗಿನ ಎಲ್ಲಾ ಚಿತ್ರಗಳಿಗಿಂತ ಹೆಚ್ಚು" ಎಂದು ಮಾಧ್ಯಮಗಳಿಗೆ ಸುದ್ದಿ ನೀಡಿದ್ದರು, ನಿರ್ದೇಶಕ ಶಶಾಂಕ್.
ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಹೇಳುವುದೇ ಬೇರೆ. "ದುನಿಯಾ ವಿಜಯ್-ಪ್ರಣೀತಾ ಚಿತ್ರ 'ಜರಾಸಂಧ' ಅಷ್ಟೊಂದು ಸಂಪಾದನೆ ಮಾಡಿಯೇ ಇಲ್ಲ. ಇದು ಸುಳ್ಳು ವರದಿ. ಇತ್ತೀಚಿನ ದಿನಗಳಲ್ಲಿ ಬಾಕ್ಸಾಫೀಸ್ ವರದಿ ಅನ್ನೋದು ಮಾಮೂಲಿಯಾಗುತ್ತಿದೆ. ಚಿತ್ರಮಂದಿರದತ್ತ ಪ್ರೇಕ್ಷಕರು ಸುಳಿಯದೇ ಇದ್ದರೂ, ನಮ್ಮ ಸಿನಿಮಾ ಮೊದಲ ದಿನವೇ ಇಷ್ಟು ಗಳಿಸಿದೆ ಅಂತ ನಿರ್ಮಾಪಕ-ನಿರ್ದೇಶಕರು ಹೇಳಿಕೊಳ್ಳುತ್ತಾರೆ."
'ಸಿದ್ಲಿಂಗು' ಆಡಿಯೋ ಬಿಡುಗಡೆ ಸಮಾರಂಭ ಈ ವಿಷಯದ ಮಾತುಕತೆ ನಡೆದಿದೆ. ದುನಿಯಾ ವಿಜಯ್ ಕೂಡ ಅಲ್ಲಿದ್ದರು. ಪತ್ರಕರ್ತರು ಜರಾಸಂಧದ ಗಳಿಕೆ ಕುರಿತು ಪ್ರಶ್ನೆ ಹಾಕಿದ್ದರು. ಇದಕ್ಕೆ ಉತ್ತರಿಸಿದ ಚಂದ್ರಶೇಖರ್, "ಬಾಕ್ಸಾಫೀಸ್ ವರದಿಯಲ್ಲಿ ಹೇಳಿರುವುದು ಅರ್ಧಸತ್ಯ. ಮೂರು ದಿನಗಳಲ್ಲಿ ಮೂರು ಕೋಟಿ ರೂಪಾಯಿಗಳನ್ನು ಈ ಚಿತ್ರ ಸಂಪಾದಿಸಿಲ್ಲ. ಅಷ್ಟು ಬಿಡಿ, ಅದರ ಅರ್ಧದಷ್ಟೂ ಗಳಿಕೆಯಾಗಿಲ್ಲ" ಎಂದರು.
ಹಾಗಿದ್ದರೆ ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿಗಳಂತಹ ಸದಭಿರುಚಿಯ ಚಿತ್ರಗಳ ನಿರ್ದೇಶಕ ಶಶಾಂಕ್ ಸುಳ್ಳು ಹೇಳಿದರೇ? ಈ ಬಗ್ಗೆ ಸ್ವತಃ ಪ್ರದರ್ಶಕರೂ ಆಗಿರುವ ಚಂದ್ರಶೇಖರ್ ನೇರವಾಗಿ ಏನೂ ಹೇಳಲಿಲ್ಲ. ಬದಲಿಗೆ, ಹೀಗೆ ಸುಳ್ಳು ಬಾಕ್ಸಾಫೀಸ್ ವರದಿಗಳನ್ನು ನೀಡಿ ಪ್ರೇಕ್ಷಕರು ಮತ್ತು ಚಿತ್ರರಂಗವನ್ನು ಹಾದಿ ತಪ್ಪಿಸುತ್ತಿರುವವರು ಬಹಳ ಮಂದಿ ಇದ್ದಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











