ನವೆಂಬರ್ ಎರಡನೇ ವಾರದಲ್ಲಿ 'ಕಳ್ಳರ ಸಂತೆ'
ಪ್ರೇಮಿಗಳು, ಪೊಲೀಸರು, ರೌಡಿಗಳು, ಮಂತ್ರಿಗಳು ಮತ್ತು ಅವರ ಗರ್ಲ್ ಫ್ರೆಂಡ್ಸ್ ಎಲ್ಲಿ ಸಿಗುತ್ತಾರೆ ಎಂಬ ಪ್ರಶ್ನೆಗೆ ಉತ್ತರವೇ 'ಕಳ್ಳರ ಸಂತೆ'!ಮೇಘ ಮೂವೀಸ್ ಲಾಂಛನದಲ್ಲಿ ಸೈಯ್ಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ 'ಕಳ್ಳರ ಸಂತೆ ಚಿತ್ರಕ್ಕೆ ಆಕಾಶ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಮಾಸಾಂತ್ಯಕ್ಕೆ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ನವೆಂಬರ್ ಎರಡನೇ ವಾರದಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
'ಸ್ಲಂ ಬಾಲ' ಚಿತ್ರವನ್ನು ನಿರ್ದೇಶಿಸಿದ್ದ ಸುಮನಾ ಕಿತ್ತೂರು 'ಕಳ್ಳರ ಸಂತೆ' ಚಿತ್ರದ ನಿರ್ದೇಶಕಿ. ವಿಭಿನ್ನ ಕಥಾಹಂದರವುಳ್ಳ ಈ ಚಿತ್ರ ನೋಡುಗರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ.ವಿ.ಮನೋಹರ್ ಅವರ ರಾಗ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳು ಕೇಳುಗರ ಪ್ರಶಂಸೆಗೆ ಪಾತ್ರವಾಗಿದ್ದು, ಧ್ವನಿಸುರುಳಿಗಳಿಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಆಡೀಯೋ ಕಂಪನಿ ಮಾಲೀಕರು ತಿಳಿಸಿದ್ದಾರೆ.
ಪತ್ರಕರ್ತ ಆಗ್ನಿಶ್ರೀಧರ್ 'ಕಳ್ಳರ ಸಂತೆ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಸುಮನಾ ಕಿತ್ತೂರು ಹಾಗೂ ವಿ.ಮನೋಹರ್ ಗೀತರಚನೆ, ಡಿಫರೆಂಟ್ ಡ್ಯಾನಿ ಸಾಹಸ, ಮದನ್ ಹರಿಣಿ ನೃತ್ಯ ಹಾಗೂ ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಹರಿಪ್ರಿಯ, ಕಿಶೋರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











