»   » ಭೂಗತ ಜಗತ್ತಿನಿಂದ ಎದ್ದು ಬರಲಿದ್ದಾನೆ ಮಾದೇಶ

ಭೂಗತ ಜಗತ್ತಿನಿಂದ ಎದ್ದು ಬರಲಿದ್ದಾನೆ ಮಾದೇಶ

Subscribe to Filmibeat Kannada

ಕನ್ನಡ ಚಿತ್ರೋದ್ಯಮ ಹಾಗೂ ಶಿವು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ 'ಮಾದೇಶ'. ಇತ್ತೀಚೆಗಷ್ಟೆ ಬಿಡುಗಡೆಯಾದ ಮಾದೇಶನ ಧ್ವನಿಸುರುಳಿಗೆ ವ್ಯಕ್ತವಾಗಿರುವ ಉತ್ತಮ ಪ್ರತಿಕ್ರಿಯೆ ಇದನ್ನು ಸಾರುತ್ತಿದೆ.

ಹಳ್ಳಿಮುಕ್ಕನಾದ ಮಾದೇಶ ಪರಿಸ್ಥಿತಿಯ ಒತ್ತಡದಿಂದ ಹಳ್ಳಿಯನ್ನು ಬಿಡಬೇಕಾಗುತ್ತದೆ. ನಂತರ ಪಟ್ಟಣ ಸೇರಿ ಬೆಂಗಳೂರು ಭೂಗತ ಜಗತ್ತಿಗೆ ಪ್ರವೇಶಿಸುತ್ತಾನೆ. ಅಲ್ಲಿಂದ ಮಾದೇಶನ ಖದರ್ ಬದಲಾಗುತ್ತದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ನಿರ್ದೇಶಕ ರವಿ ಶ್ರೀವತ್ಸ ಮತ್ತೊಂದು ಭೂಗತ ಜಗತ್ತಿನ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. 'ಗಂಡ ಹೆಂಡತಿ', ಚಿತ್ರ ಅಷ್ಟಾಗಿ ಓಡಲಿಲ್ಲ.'ಡೆಡ್ಲಿ ಸೊಮ' ಜನಪ್ರಿಯತೆ ಗಳಿಸಿತು. ಈಗ ತಮ್ಮ ಮಾದೇಶನ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರಕಥೆಗಾಗಿ ಹಾಯ್ ಬೆಂಗಳೂರು ಪತ್ರಿಕೆಯ ನಿರ್ದೇಶಕ ರವಿ ಬೆಳಗೆರೆ ಅವರ ಸಹಾಯವನ್ನೂ ಪಡೆದಿದ್ದಾರೆ. ಪ್ರಮುಖ ಪಾತ್ರ ಒಂದರಲ್ಲಿ ರವಿ ಬೆಳಗೆರೆ ಸಹ ನಟಿಸಿದ್ದಾರೆ.

ಮಾದೇಶ ಒಂದು ಸಂಪೂರ್ಣ ಆಕ್ಷನ್ ಪ್ರಧಾನ ಚಿತ್ರ. ತಾಯಿ-ಮಗನ ನಡುವೆ ಕರುಳು ಬಳ್ಳಿ ಸಂಬಂಧ ದ ಕಥೆಯೇ ಚಿತ್ರದ ಜೀವಾಳ ಎನ್ನುತ್ತಾರೆ ನಿರ್ದೇಶಕರು. ಆಸ್ಟ್ರೇಲಿಯಾ, ಬ್ಯಾಂಕಾಕ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಎಲ್ಲಾ ಮಸಾಲೆಗಳು ಇವೆ. ಬ್ಯಾಂಕಾಕ್‌ನಲ್ಲಿ ಚಿತ್ರೀಕರಣಗೊಂಡಿರುವ ಜ್ಯೋತಿ ರಾಣಿಯ ಐಟಂ ಸಾಂಗ್‌‍ ಪಡ್ಡೆಗಳಿಗೆ ಹುಚ್ಚು ಹಿಡಿಸಲಿದೆಯಂತ!

ಮುಂಬೈ ಮೂಲದ ರೂಪದರ್ಶಿ ಸೋನಾ ಕೆ ಭಟ್ ಚಿತ್ರದ ನಾಯಕಿ. ರಾಮ್‌ಗೋಪಾಲ್ ವರ್ಮಾರ 'ಸರ್ಕಾರ್' ಹಾಗೂ 'ಸೈನೇಡ್' ಚಿತ್ರಗಳ ಖ್ಯಾತಿಯ ರವಿ ಕಾಳೆ ಈ ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಮಾದೇಶನ ತಾಯಿಯಾಗಿ ಪದ್ಮಾ ರಾವ್ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಮುನಿರಾಜು, ರಮೇಶ್ ಪಂಡಿತ್, ಕೋಟೆ ಪ್ರಭಾಕರ್, ಹರೀಶ್ ರೈ, ಬುಲ್ಲೆಟ್ ಪ್ರಕಾಶ್ ಮುಂತಾದವರಿದ್ದಾರೆ. ತಮ್ಮ ಅದ್ಭುತ ಸಂಗೀತದ ಮೂಲಕ ಮನೆಮಾತಾದ ಮನೋ ಮೂರ್ತಿ ನಿರ್ದೇಶನದ ಹಾಡುಗಳು ಈ ಚಿತ್ರದಲ್ಲೂ ಕಾಡಲಿವೆ. ಚಿತ್ರದಲ್ಲಿನ ವೈವಿಧ್ಯಭರಿತವಾದ ಹಾಡುಗಳುಪ್ರೇಕ್ಷಕರನ್ನು ಖಂಡಿತಾ ರಂಜಿಸಲಿವೆ ಎಂಬ ವಿಶ್ವಾಸ ರವಿ ಶ್ರೀವತ್ಸ ಅವರದು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada