ವರಮಹಾಲಕ್ಷ್ಮಿ ಹಬ್ಬಕ್ಕೆ ಮಳೆ ಬರಲಿ ಮಂಜು ಇರಲಿ
ವರಮಹಾಲಕ್ಷಿ ಹಬ್ಬದ ದಿನ(ಜು.31) ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 'ಮಳೆ ಬರಲಿ ಮಂಜು ಇರಲಿ' ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪುನೀತ್ ರಾಜ್ ಕುಮಾರ್ ಜತೆ ಮಿಲನ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಮೆನನ್ ಈ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಹಿಂದಿರುಗಿದ್ದಾರೆ. ಅವರು ಅಭಿನಯಿಸುತ್ತಿರುವ ಕನ್ನಡದ ಎರಡನೇ ಚಿತ್ರ ಮಳೆ ಬರಲಿ ಮಂಜು ಇರಲಿ.
ವಿಜಯ ಲಕ್ಷ್ಮಿ ಸಿಂಗ್ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಮಳೆ ಬರಲಿ ಮಂಜು ಇರಲಿ ಧ್ವನಿಸುರುಳಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ ಮತ್ತು ನಾಗಕಿರಣ್ ಇದ್ದಾರೆ.
ಮಿಲನ ನಂತರ ಪಾರ್ವತಿ ಮೆನನ್ ಎರಡು ವರ್ಷ ನಾಪತ್ತೆಯಾಗಿದ್ದರು. ಇಷ್ಟು ದಿನ ಎಲ್ಲಿದ್ದರು ಎಂದು ಕೇಳಿದರೆ, ಬಂದ ಎಲ್ಲ ಅವಕಾಶಗಳನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ನನಗೆ ಒಪ್ಪಿಗೆಯಾಗುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಇಷ್ಟು ದಿನ ಕಾಯಬೇಕಾಯಿತು ಎನ್ನುತ್ತಾರೆ. ನಾಯಕ ನಟ, ಬ್ಯಾನರ್ ಯಾವುದೇ ಆಗಿರಲಿ ಕತೆ ಚೆನ್ನಾಗಿರಬೇಕು ಎಂಬುದು ಪಾರ್ವತಿ ಅವರ ಅಭಿಪ್ರಾಯ.
ಪ್ರಮುಖ ತಾರಾಗಣದಲ್ಲಿ ಶ್ರೀನಗರ ಕಿಟ್ಟಿ , ಪಾರ್ವತಿ ಮೆನನ್, ನಾಗಕಿರಣ್, ಜೈ ಜಗದೀಶ್, ಹರಿಪ್ರಿಯ, ಹೇಮಾ ಚೌಧರಿ, ಮುಖ್ಯಮಂತ್ರಿ ಚಂದ್ರು, ಶರಣ್, ಸಾಧು ಕೋಕಿಲ, ಮೇಘ ಶ್ರೀ ಮುಂತಾದವರಿದ್ದಾರೆ.ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ, ಮನೋಮೂರ್ತಿ ಸಂಗೀತ, ಯೋಗರಾಜ ಭಟ್ ಸಾಹಿತ್ಯ, ಕೆಂಪರಾಜ್ ಸಂಕಲನ, ಜಯರಾಜ್ ಸಿಂಗ್ ನಿರ್ಮಾಣ, ಮೇಲ್ವಿಚಾರಣೆ, ಮೂರ್ತಿ ನಿರ್ಮಾಣ-ನಿರ್ವಹಣೆ, ಕಿಟ್ಟಿರಂಗ ಮಂಚ ನಿರ್ದೇಶನ ಸಹಕಾರವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ವಿಜಯಲಕ್ಷ್ಮಿ ಸಿಂಗ್ ಹೊತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











