»   » 'ವಂಶಿ' ಪ್ರಚಾರ ತಂತ್ರಕ್ಕೆ ಸುವರ್ಣ ಲಕ್ಸುರಿ ಬಸ್ ಗಳು

'ವಂಶಿ' ಪ್ರಚಾರ ತಂತ್ರಕ್ಕೆ ಸುವರ್ಣ ಲಕ್ಸುರಿ ಬಸ್ ಗಳು

Posted By:
Subscribe to Filmibeat Kannada

ಸಿನಿಮಾ ಪ್ರಚಾರ ತಂತ್ರಕ್ಕೆ ಆಟೋಗಳ ಹಿಂಭಾಗ ಗೋಡೆಗಳ ಮುಂಭಾಗ ಬಳಕೆಯಾದಷ್ಟು ಬಹುಶಃ ಮತ್ತಿನ್ಯಾವ ಮಾಧ್ಯಮವೂ ಬಳಕೆಯಾಗಿರಲಿಕ್ಕಿಲ್ಲ. ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೂ ಸಾಂಗವಾಗಿ ನಡೆದುಕೊಂಡು ಬರುತ್ತಿರುವ ಪದ್ಧತಿ ಇದು. ಈಗೀಗ ಕಡಿಮೆ ಖರ್ಚಿನಲ್ಲಿ ಭಿತ್ತಿಪತ್ರಗಳಿಗೆ ಬದಲಾಗಿ ಗೋಡೆಗಳಿಗೆ ಬಣ್ಣ ಬಳಿಯುವುದು ಸಾಮಾನ್ಯವಾಗಿದೆ. ಈಗೆಲ್ಲ ಪ್ರಚಾರದ ತಂತ್ರಗಳು ಬದಲಾಗಿವೆ ಇ-ಮೇಲ್ , ವಾಯ್ಸ್ ಪೋರ್ಟಲ್ ಮೂಲಕ ಸಿನಿಮಾ ಪ್ರಚಾರ ತಂತ್ರಗಳು ಸಹ ಹೊಸ ಹೊಸ ಹಾದಿಗಳಲ್ಲಿ ಸಾಗುತ್ತಿದೆ. ಆದರೆ ಪುನೀತ್ ರಾಜ್ ಕುಮಾರ್ ಅವರ 'ವಂಶಿ' ಚಿತ್ರದ ಪ್ರಚಾರಕ್ಕಾಗಿ ರಾಘವೇಂದ್ರ ರಾಜ್ ಕುಮಾರ್ ಸ್ವಲ್ಪ ಭಿನ್ನವಾದ ತಂತ್ರ ಬಳಸಿದ್ದಾರೆ.

'ವಂಶಿ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಐದು ಸುವರ್ಣ ಲಕ್ಸುರಿ ಬಸ್ಸುಗಳನ್ನು ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ಬಸ್ ಗೆ ತಿಂಗಳಿಗೆ ಕೇವಲ ರು. 2 ಲಕ್ಷಗಳನ್ನು ಖರ್ಚು ಮಾಡಲಾಗಿದೆ. ಐದೂ ಬಸ್ ಗಳಿಗೆ ತಿಂಗಳಿಗಾಗುವ ವೆಚ್ಚ ರು.10 ಲಕ್ಷಗಳು. ಒಂದೊಂದು ಬಸ್ ಗೂ 'ವಂಶಿ' ಚಿತ್ರದ ವಿಶೇಷ ವಿನೈಲ್ ಭಿತ್ತಿಪತ್ರಗಳನ್ನು ಅಳವಡಿಸಲು ರು.75,000 ಖರ್ಚು ಮಾಡಲಾಗಿದೆ! 'ವಂಶಿ' ಭಿತ್ತಿಪತ್ರವನ್ನು ಹೊತ್ತ ನಂದಿನಿ ಲೇಔಟ್ ( ರೂಟ್ ನಂಬರ್ 80ಎ) ಬಸ್ಸನ್ನು ಚಕ್ರೇಶ್ವರಿ ಕಂಬೈನ್ಸ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಬಿಡುಗಡೆ ಮಾಡಿದರು. ಉಳಿದ ಸುವರ್ಣ ಲಕ್ಸುರಿಬಸ್ ಗಳು ಕೆ.ಆರ್.ಪುರಂ, ಜಯನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೂ ಸಂಚರಿಸುತ್ತವೆ.

ಮನೆಮಂದಿಯಲ್ಲಾ ಕುಳಿತು ನೋಡುವ ಸದಭಿರುಚಿಯ ಚಿತ್ರಗಳನ್ನೇ ನೀಡುತ್ತಾ ಬಂದಿರು ಪುನೀತ್ ರ 'ವಂಶಿ' ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಉಳಿದಂತೆ ಚಿತ್ರದಲ್ಲಿ ಲಕ್ಷ್ಮಿ, ನಿಕಿತಾ, ರವಿ ಕಾಳೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಕ್ಟೋಬರ್ 2 ರಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದು 'ವಂಶಿ' ಬಿಡುಗಡೆಯಾಗುತ್ತಿದೆ. 'ಮಿಲನ' ಯಶಸ್ವಿ ಚಿತ್ರ ಕೊಟ್ಟ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕೃಷ್ಣ ಕುಮಾರ್ ಛಾಯಾಗ್ರಹಣ ಹಾಗೂ ಆರ್.ಪಿ.ಪಟ್ನಾಯಕ್ ಸಂಗೀತ ನಿರ್ದೇಶನವಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)
ಪೂರಕ ಓದಿಗೆ:
ಓಂ ಚಿತ್ರದ ನೆರಳಲ್ಲಿ ಪುನೀತ್ ಹೊಸ ಚಿತ್ರ ವಂಶಿ
ಗಾಂಧಿ ಜಯಂತಿಯಂದು 'ವಂಶಿ'ಚಿತ್ರ ಬಿಡುಗಡೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada