ಮೈಸೂರು ಹುಡುಗನ ಜತೆ ನಯನತಾರಾ ಮದುವೆ
ಮಲಯಾಳಿ ಚೆಲುವೆ ನಯನತಾರಾ ಮದುವೆ ಕಡೆಗೂ ನಿಶ್ಚಯವಾಗಿದೆ. ಮೈಸೂರು ಹುಡುಗನ ಕೈಹಿಡಿಯಲಿದ್ದಾರೆ ನಯನತಾರಾ! ಈಕೆಯ ಕೈಹಿಡಿಯಲಿರುವ ಗಂಡು ಯಾರು ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಡಿಸೆಂಬರ್ ನಲ್ಲಿ ಈಕೆ ಹಸೆಮಣೆ ಏರುತ್ತಿದ್ದು "ಮಾಂಗಲ್ಯಂ ತಂತು ನಾನೇನಾ..." ಮಂತ್ರಘೋಷ ಮೊಳಗುವ ಮೂಲಕ ಎಲ್ಲ ಕುತೂಹಲಗಳಿಗೂ ತೆರೆಬೀಳಲಿದೆ!
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದ, ನೃತ್ಯ ನಿರ್ದೇಶಕ, ನಟ ಮತ್ತು ಚಿತ್ರ ನಿರ್ದೇಶಕ, ಭಾರತದ ಮೈಕೇಲ್ ಜಾಕ್ಸನ್ ಎಂದೇ ಬಿರುದಾಂಕಿತ ಪ್ರಭುದೇವ ಅವರನ್ನು ವರಿಸಲಿದ್ದಾರೆ ನಯನಿ ಎಂದು ಚೆನ್ನೈ ಮೂಲಗಳು ಘಂಟಾಘೋಷವಾಗಿ ಹೇಳುತ್ತಿವೆ.
ಆರಂಭದಿಂದಲೂ ನಯನತಾರಾ ತಮ್ಮ ಮದುವೆ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು. ಏನಿಲ್ಲಾ ಏನಿಲ್ಲಾ ನನ್ನ ಮತ್ತು ಪ್ರಭು ದೇವ ನಡುವೆ ಏನಿಲ್ಲಾ ಎನ್ನುತ್ತಲೇ ಬಂದಿದ್ದರು. ಆದರೆ ಸಾಕಷ್ಟು ಬಾರಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಮಾಧ್ಯಮಗಳ ಆರನೆ ಇಂದ್ರಿಯ ಜಾಗೃತಗೊಳಿಸುತ್ತಿದ್ದರು.
ಪ್ರಭುದೇವಾ ಈಗಾಗಲೆ ವಿವಾಹ ವಿಚ್ಛೇದನ ಪಡೆದಿದ್ದು ನಯನತಾರಾರನ್ನು ಆತನ ಮನೆಯವರಿಗೂ ಒಪ್ಪಿದ್ದಾರಂತೆ. ಪ್ರಭು ಮನೆಯಲ್ಲಿ ಇತ್ತೀಚೆಗೆ ಹೋಮ ನಡೆಯಿತು. ಆಗ ನಯನತಾರಾ ಮತ್ತು ಪ್ರಭುದೇವಾ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ. ಈ ಘಟನೆಗೆ ಪ್ರಭು ಅವರ ತಂದೆ ಸುಂದರಮ್ ಮಾಸ್ಟರ್ ಸಾಕ್ಷಿಯಾಗಿದ್ದರು ಎನ್ನುತ್ತವೆ ಮೂಲಗಳು.
ಕೈಕೈ ಹಿಡಿದು ಒಟ್ಟಿಗೆ ಇಬ್ಬರೂ ವಡಪಳನಿಯ ಚಿತ್ರಮಂದಿರದಲ್ಲಿ ಸೆಕೆಂಡ್ ಶೋ ನೋಡಿದ್ದಾಗಿಯೂ ಸುದ್ದಿ ಇದೆ. ನಯನತಾರಾ ಹಾಗೂ ಪ್ರಭು ಒಟ್ಟಿಗೆ ಪ್ಯಾರಿಸ್ 'ಪ್ರಣಯ' ಮಾಡಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ ಎಂಬುದು ಚೆನ್ನೈ ಮೂಲಗಳ ಸಾರಸಂಗ್ರಹ. ಸದ್ಯಕ್ಕೆ ಉಪೇಂದ್ರ ಜೊತೆಗಿನ ಸೂಪರ್ ಸಿಂಬಲ್ ಚಿತ್ರ ಮುಗಿಸಿ, ತಮಿಳು ಮತ್ತು ಮಲಯಾಳಂನ ಒಂದೆರಡು ಚಿತ್ರಗಳನ್ನು ಮುಗಿಸಿದ ಮೇಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ನಯನತಾರಾ ಚಿಂತಿಸಿದ್ದಾರೆ.


Click it and Unblock the Notifications











