»   » ಅರ್ಜುನ್ ನಾಯಕಿಯಾಗಿ ಪೂಜಾ ಗಾಂಧಿ ಆಯ್ಕೆ

ಅರ್ಜುನ್ ನಾಯಕಿಯಾಗಿ ಪೂಜಾ ಗಾಂಧಿ ಆಯ್ಕೆ

Posted By:
Subscribe to Filmibeat Kannada

'ಮುಂಗಾರು ಮಳೆ'ಯೊಡನೆ ಗುಡುಗಿ 'ತಾಜ್ ಮಹಲ್' ಥರ ಕಂಗೊಳಿಸುತ್ತಿರುವ ಪಂಜಾಬಿ ಹುಡುಗಿ ಪೂಜಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ಒಂದೊಂದಾಗಿ ಏಣಿಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಕನ್ನಡ ನಾಡಿನಲ್ಲೇ ಬೆಳೆದು ನಟಿಯರಾಗಿರುವ ಅನೇಕ ನಾಯಕಿಯರಿಗಿಂತ ಅದ್ಭುತವಲ್ಲದಿದ್ದರೂ ಚೆನ್ನಾಗಿ ಕನ್ನಡದಲ್ಲಿ ಮಾತನಾಡುವ ಪೂಜಾ ತಾವೇ ಸ್ವತಃ ತಮ್ಮ ಧ್ವನಿಯನ್ನು ನೀಡುವಷ್ಟು ಪ್ರಬುದ್ಧತೆಯನ್ನು ಪಡೆದಿದ್ದಾರೆ.

ವಿಶಾಲ್ ಹೆಗಡೆ ನಾಯಕನಾಗಿರುವ ಜಾಲಿ ಸೆಬಾಸ್ಟಿಯನ್ ನಿರ್ದೇಶನದ 'ಕಾದಿರುವೆ ನಿನಗಾಗಿ' ಚಿತ್ರದಲ್ಲಿ ಪೂಜಾ ತಾವೇ ಡಬ್ ಮಾಡಿದ್ದಾರೆ. ಬುರುಬುರಿಯಂತೆ ಉಬ್ಬುತ್ತಿದ್ದ ಪೂಜಾ ಈಗ ಸಪೂರವೂ ಆಗಿದ್ದಾರೆ. ತೆಳ್ಳಗಾಗುತ್ತಿರುವುದಕ್ಕೆ ಸಾಕ್ಷಿಯೆಂಬಂತೆ ಜಗ್ಗೇಶ್ ಜೊತೆ ನಟಿಸಿರುವ 'ಕೋಡಗನ ಕೋಳಿ ನುಂಗಿತ್ತ' ಚಿತ್ರದಲ್ಲಿ ಬಿಕಿನಿಯಲ್ಲಿಯೂ ನಟಿಸಿದ್ದಾರೆ.

ಕನ್ನಡದ ಪ್ರೇಕ್ಷಕರೂ ಅಷ್ಟೇ ಕನ್ನಡನಾಡಿನ ಮಗಳೆಂಬಂತೆ ಪೂಜಾಳನ್ನು ಪೊರೆದಿದ್ದಾರೆ, ಪ್ರೋತ್ಸಾಹಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಪೂಜಾ ಏರಿರುವ ಏಣಿಯನ್ನು ಒದೆಯದಿರುವುದೇ ಸಂತಸದ ಸಂಗತಿ. ಸದ್ಯಕ್ಕೆ ಒಪ್ಪಿಕೊಂಡಿರುವ ಎಲ್ಲಾ ಕನ್ನಡ ಚಿತ್ರಗಳ ಶೂಟಿಂಗನ್ನು ಪೂರೈಸಿರುವ ಪೂಜಾ 'ಕಾದಿರುವ ನಿನಗಾಗಿ' ಎಂಬಂತೆ ತಮಿಳು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ತಮಿಳಿನ ಖ್ಯಾತ ನಟ ಅರ್ಜುನ್ ಸರ್ಜಾ ಜೋಡಿಯಾಗಿ 'ತಿರುಅಣ್ಣಾಮಲೈ' ಚಿತ್ರದಲ್ಲಿ ನಟಿಸುವ ಭರ್ಜರಿ ಅವಕಾಶವನ್ನು ಬಾಚಿಕೊಂಡಿದ್ದಾರೆ.

'ಮುಂಗಾರು ಮಳೆ' ಚಿತ್ರದಲ್ಲಿ ನಟಿಸುವ ಮೊದಲು ಪೂಜಾ ಗಾಂಧಿ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಈಗ ಮೂರನೇ ಚಿತ್ರಕ್ಕಾಗಿ ಚೆನ್ನೈಗೆ ಜಿಗಿದಿದ್ದಾರೆ. ಮೊದಲು ಅರ್ಜುನ್‌ಗೆ ಎದುರಾಗಿ ಮುಂಬೈನ ತಾನ್ಯಾ ವಕೀಲ್ ಎಂಬ ಮಾಡೆಲ್ ಒಬ್ಬಳು ನಟಿಸಬೇಕಾಗಿತ್ತು. ಆಕೆ ಮಾಡೆಲಿಂಗಲ್ಲೇ ತುಂಬಾ ಬಿಜಿಯಾಗಿದ್ದರಿಂದ, ಆ ಅವಕಾಶ ಪೂಜಾಗೆ ಒಲಿದುಬಂದಿದೆ. ಪೂಜಾ ತಮಿಳು ಚಿತ್ರರಂಗದಲ್ಲಿ ಕಳೆದುಹೋಗದಿರಲಿ, ಕನ್ನಡಿಗರ ಪ್ರೀತಿಯನ್ನು ಮರೆಯದಿರಲಿ.

(ದಟ್ಸ್ ಸಿನಿ ವಾರ್ತೆ)

ಕೋಡಗನ ಕೋಳಿ ನುಂಗಿತ್ತ ಚಿತ್ರದಲ್ಲಿ ಪೂಜಾ ಗಾಂಧಿ
ಪೂಜಾ ಗಾಂಧಿಯ ಇನ್ನಷ್ಟು ಚಿತ್ರಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada