»   » ಸುವರ್ಣದಲ್ಲಿ ರವಿ ಬೆಳಗೆರೆ 'ನೈಟ್ ಬೀಟ್'

ಸುವರ್ಣದಲ್ಲಿ ರವಿ ಬೆಳಗೆರೆ 'ನೈಟ್ ಬೀಟ್'

Posted By:
Subscribe to Filmibeat Kannada

ಹಾಯ್ ಬೆಂಗಳೂರು ಸಂಪಾದಕ ರವಿಬೆಳಗೆರೆ ಹಾಗೂ ಕಿರುತೆರೆಯ ಸಂಬಂಧ ಈ ಟಿವಿ ಕನ್ನಡ ವಾಹಿನಿಯ 'ಕ್ರೈಮ್ ಡೈರಿ' ಸಮಾಪ್ತಿಯಾಗುವುದರೊಂದಿಗೆ ಕಡಿದುಹೋಯಿತು. ನಂತರ ಅವರ ಕಿರುತೆರೆಯಲ್ಲಿ ಕಾಣಿಸಿದ್ದೇ ಅಪರೂಪ. ಅಪರಾಧ ಸುದ್ದಿಗಿಂತಲೂ ರವಿ ಅವರ ವಿಭಿನ್ನ ಮಾತಿನ ಶೈಲಿ ಬಹಳಷ್ಟು ಜನಪ್ರಿಯವಾಗಿತ್ತು. ಕ್ರೈಮ್ ಡೈರಿಗೆ ಶುಭಂ ಹೇಳಿ ಏನಿಲ್ಲಾ ಅಂದ್ರೂ ಒಂದು ವರ್ಷ ಕಳೆದುಹೋಗಿದೆ. ಈಗ ಮತ್ತೆ ರವಿ ಕಿರುತೆರೆಗೆ ಪ್ರವೇಶ ಕೊಡಲಿದ್ದಾರೆ.

ಬರೀ ಕ್ರೈಮ್ ಮಾತ್ರವಲ್ಲ ರಾಜಕೀಯ, ಸಿನಿಮಾ, ಅಪರಾಧ ಮುಂತಾದ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಈ ಬಾರಿ ಅವರ ಆಯ್ಕೆ ಈಟಿವಿಯಲ್ಲ ಸುವರ್ಣ ವಾರ್ತಾ ವಾಹಿನಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 10ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಆಗಸ್ಟ್ 4ರಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದ ಹೆಸರು 'ನೈಟ್ ಬೀಟ್ ' ಅಂತ.

ರವಿಬೆಳಗೆರೆ ಸಹ ಈ ಕಾರ್ಯಕ್ರಮದ ಬಗ್ಗೆ ಖುಷಿಯಾಗಿದ್ದಾರೆ. ಈಟಿವಿ ಕನ್ನಡ ವಾಹಿನಿಯಲ್ಲಿ ಬಹಳಷ್ಟು ಜನಪ್ರಿಯವಾಗಿದ್ದ ಕ್ರೈಮ್ ಡೈರಿಗಿಂತಲೂ ಈಗ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ನೈಟ್ ಬೀಟ್ ' ಸಾಕಷ್ಟು ಭಿನ್ನವಾಗಿ ತರಲು ಪ್ರಯತ್ನಿಸುವುದಾಗಿ ರವಿ ಹೇಳಿದ್ದಾರೆ. ಕನ್ನಡ ವಾಹಿನಿಗಳ ಪ್ರಸಾರ ಮಾಡುತ್ತಿರುವ ಅಪರಾಧಿ ಸುದ್ದಿಗಳನ್ನು ಪ್ರೇಕ್ಷಕ ಅಷ್ಟಾಗಿ ಇಷ್ಟ ಪಡುತ್ತಿಲ್ಲ. ವಾಹಿನಿಗಳು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸದಾ ತಲೆಕೆಡಿಸಿಕೊಳ್ಳುತ್ತಿರುತ್ತವೆ. ಈ ಸಂದರ್ಭದಲ್ಲಿ ರವಿ ಅವರ ಹೊಸ ಕಾರ್ಯಕ್ರಮವನು ಪ್ರೇಕ್ಷಕ ಮೆಚ್ಚುತ್ತಾನಾ. ಉತ್ತರಕ್ಕಾಗಿ ಆಗಸ್ಟ್ 4ರವರೆಗೂ ಕಾಯಲೇಬೇಕು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada