ಬೆಳ್ಳಿತೆರೆಯ ಮೇಲೆ ನರಹಂತಕ ವೀರಪ್ಪನ್ ಅಟ್ಟಹಾಸ
ದಂತಚೋರ, ನರಹಂತಕ ವೀರಪ್ಪನ್ ಕತೆ ಇದು. ಶೀಘ್ರದಲ್ಲೆ ಈ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. 'ಅಟ್ಟಹಾಸ' (ಚಿತ್ರದ ಹೆಸರು) ಮೆರೆದ ವೀರಪ್ಪನ್ ಆಗಿ ಕಿಶೋರ್ ಕಾಣಿಸಲಿದ್ದು ವರನಟ ಡಾ.ರಾಜ್ ಕುಮಾರ್ ಪಾತ್ರವನ್ನು ಹಿಂದಿಯ ಸುರೇಶ್ ಒಬೆರಾಯ್ ಪೋಷಿಸಲಿದ್ದಾರೆ. ಎಸ್‌ಟಿಎಫ್ ಚೀಫ್ ವಿಜಯ್ ಕುಮಾರ್ ಆಗಿ ಅರ್ಜುನ್ ಸರ್ಜಾ ಪರಕಾಯ ಪ್ರವೇಶ ಮಾಡಲಿದ್ದಾರೆ.
ರಾಜ್ ಪಾತ್ರ ಪೋಷಿಸಲು ಈ ಹಿಂದೆ ತೆಲುಗು ಹಿರಿಯ ನಟ ಅಕ್ಕಿನೇನಿ ನಾಗಶ್ವರ ರಾವ್(86) ಮುಂದಾಗಿದ್ದರು. ಆದರೆ ಅವರ ವಯಸ್ಸು ಅಡ್ಡಿಬಂದ ಕಾರಣ ಅಕ್ಕಿನೇನಿ ಹಿಂದೆ ಸರಿದಿದ್ದರು. ಎಸ್‌ಟಿಎಫ್ ಮುಖ್ಯಸ್ಥ ವಿಜಯ್ ಕುಮಾರ್ ಪಾತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಣಿಸಲಿದ್ದು ವೀರಪ್ಪನ್‍ನನ್ನು ಮುಗಿಸಲಿದ್ದಾರೆ.
ಡಾ.ರಾಜ್ ಅಪಹರಣ, 108 ದಿನಗಳ ಒತ್ತೆ, ಬಿಡುಗಡೆ, ಆನಂತರದ ಬೆಳವಣಿಗೆಗಳು ಚಿತ್ರ ಬೆಳಕು ಬೀರಲಿದೆ. ವೀರಪ್ಪನ್ ಬಂಧನದಿಂದ ಪಾರಾದ ನಾಗಪ್ಪ ಮರದಗಿ ಕೂಡ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದು ದ್ವಿಭಾಷಾ ಚಿತ್ರವಾಗಿದ್ದು ಕನ್ನಡದಲ್ಲಿ 'ಅಟ್ಟಹಾಸ' ಎಂದು ತಮಿಳಿನಲ್ಲಿ 'ವನ ಯುದ್ಧಂ' ಎಂದು ಹೆಸರಿಟ್ಟಿದ್ದಾರೆ ಚಿತ್ರದ ನಿರ್ದೇಶಕ ಎ ಎಂ ಆರ್ ರಮೇಶ್.
ಮುಖ್ಯವಾಗಿ ವೀರಪ್ಪನ್ ಪಾತ್ರಕ್ಕೆ ಕಿಶೋರ್ ತೀವ್ರವಾಗಿ ಶ್ರಮಿಸಿದ್ದಾರೆ. ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು ಥೇಟ್ ಕಾಡಿನ ಮನುಷ್ಯನಂತಾಗಿದ್ದಾರೆ. ವೀರಪ್ಪನ್ ಎಂದರೆ ಮಜಬೂತಾದ ಮೀಸೆ ಮುಖ್ಯ. ಈ ಮೀಸೆ ಗೆಟಪ್‌ಗಾಗಿ ವಿದೇಶದಿಂದ ಮೀಸೆಯನ್ನೂ ತರಿಸಲಾಗಿದೆ. ಒಟ್ಟಿನಲ್ಲಿ ತೆರೆಯ ಮೇಲೆ ವೀರಪ್ಪನ್ ಅಟ್ಟಹಾಸ ಮೆರೆಯಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











