ಈ ಗೆಲುವೂ ಎರವಲು ಪಡೆದಿದ್ದಷ್ಟೇ ; ವೃತ್ತಿ ಬದುಕಿಗೆ 30 ವರ್ಷ- ಸುದೀಪ್ ಭಾವುಕ
ಸುದೀಪ್ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾದವರಲ್ಲ. ಆ ಕಾಲದಲ್ಲಿಯೇ ಪರಭಾಷೆಯಲ್ಲಿ ಮಿಂಚಿದವರು ಸುದೀಪ್. ಇದಕ್ಕೆ ಈಗ ಚಿತ್ರಕ್ಕಿಂತ ಮತ್ತೊಂದು ಉದಾಹರಣೆ ಇಲ್ಲ. ಕೇವಲ ತೆಲುಗು, ತಮಿಳು ಮಾತ್ರವಲ್ಲ ಹಿಂದಿಯಲ್ಲಿಯೂ ಮೋಡಿ ಮಾಡಿದವರು ಸುದೀಪ್. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ನಿರ್ಮಾಪಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಅತ್ಯುತ್ತಮ ನಿರೂಪಕ ಕೂಡ ಹೌದು.
ಇಂಥಾ ಸುದೀಪ್ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ಈ 30 ವರ್ಷದಲ್ಲಿ ಸುದೀಪ್ ಗೆದ್ದಿದ್ದಾರೆ. ಬಿದ್ದಿದ್ದಾರೆ. ಬಿದ್ದು ಮತ್ತೆ ಎದ್ದು ಗೆದ್ದಿದ್ದಾರೆ. ತಮ್ಮ ಬದುಕಿನ 30 ವರ್ಷದ ಪ್ರಯಾಣವನ್ನೊಮ್ಮೆ ಇಂದು ಹಿಂದೆ ತಿರುಗಿ ನೋಡಿದ್ದಾರೆ. ಎಲ್ಲರಿಗೆ ಧನ್ಯವಾದವನ್ನು ಕೂಡ ಹೇಳಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾದ ಪತ್ರವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಸುದೀಪ್ ಈ ಸುಂದರವಾದ ಸಿನಿಮಾ ಜಗತ್ತಿನಲ್ಲಿ ಮೂರು ದಶಕಗಳ ಪಯಣದ ನಂತರ ಇಂದು ಇಲ್ಲಿ ನಿಂತಾಗ, ನನ್ನ ಹೃದಯ ತುಂಬಿ ಬಂದಿದೆ. ಕಣ್ಣಲ್ಲಿ ಕನಸು, ಮನದಲ್ಲಿ ಗೊಂದಲ ಮತ್ತು ಅತಿಯಾದ ಭರವಸೆ ಹೊತ್ತ ಹುಡುಗನಾಗಿದ್ದ ನಾನು, ಇಂದು ಏನಾಗಿದ್ದೇನೋ.. ಇದೆಲ್ಲವೂ ನಾನು ಊಹಿಸಿದ್ದಕ್ಕಿಂತ ದೊಡ್ಡದು ಎಂದಿದ್ದಾರೆ. ಇದಕ್ಕೆಲ್ಲಾ ಏಕೈಕ ಕಾರಣ ನೀವು. ನನ್ನ ಅಭಿಮಾನಿ ದೇವರುಗಳೇ - ನೀವೇ ನನ್ನ ಶಕ್ತಿ, ನನ್ನ ಉಸಿರು ಎಂದು ಹೇಳಿರುವ ಸುದೀಪ್ ನಾನು ಇಂದಿಗೂ ಇಲ್ಲಿರಲು ನೀವೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಈ ಮೂಲಕ ಈ 30 ವರ್ಷಗಳ ಸಾಧನೆ ಕೇವಲ ನನ್ನೊಬ್ಬನದ್ದಲ್ಲ, ಇದು ನನ್ನನ್ನು ನಂಬಿದ ಪ್ರತಿಯೊಬ್ಬ ಅಭಿಮಾನಿಯದ್ದು ಎಂದು ತಮ್ಮ ಶ್ರೇಯಸ್ಸನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ ಕಿಚ್ಚ ಸುದೀಪ್.
ಇನ್ನು ಸಿನಿಮಾ ಯಾರದ್ದೋ ಒಬ್ಬರಿಂದ ಆಗುವುದಲ್ಲ. ಒಂದು ಚಿತ್ರದ ಹಿಂದೆ ಹಲವರ ಶ್ರಮ ಇರುತ್ತೆ. ಕನಸು ಇರುತ್ತೆ. ತಮ್ಮ ಈ ಪ್ರಯಾಣದಲ್ಲಿ ಜೊತೆಯಾದ ತಮ್ಮ ಜೊತೆ ಕೆಲಸ ಮಾಡಿರುವ ಎಲ್ಲರನ್ನು ನೆನೆದಿರುವ ಸುದೀಪ್, ನಿರ್ದೇಶಕರೇ ಮತ್ತು ಬರಹಗಾರರೇ, ನಿಮ್ಮ ಕಥೆಗಳ ಮೂಲಕ ನನ್ನನ್ನು ನಂಬಿದ್ದಕ್ಕೆ, ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ನನ್ನಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿ ತಿದ್ದಿತೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ನಿಮ್ಮ ಧೈರ್ಯ ಮತ್ತು ನಂಬಿಕೆಯೇ ಈ ಕನಸುಗಳು ನನಸಾಗಲು ಕಾರಣವಾಯಿತು ಎಂದು ತಮ್ಮ ಮೇಲೆ ನಂಬಿಕೆ ಇಟ್ಟು ಹಣ ಹೂಡಿದ ನಿರ್ಮಾಪಕರಿಗೆ ಧನ್ಯವಾದ ಹೇಳಿದ್ದಾರೆ.
ಸಿನಿಮಾ ಎಂಬುದು ಒಂದು ಸಮೂಹ ಕಲೆ. ಲೈಟ್ ಬಾಯ್ಸ್, ಕ್ಯಾಮೆರಾಮೆನ್, ಆರ್ಟ್ ವಿಭಾಗ, ಕಾಸ್ಟ್ಯೂಮ್, ಸ್ಪಾಟ್ ಬಾಯ್ಸ್ ನಿಂದ ಹಿಡಿದು ಎಡಿಟರ್‌ಗಳವರೆಗೆ, ತೆರೆಯ ಹಿಂದೆ ಹರಿಯುವ ನಿಮ್ಮ ಬೆವರ ಹನಿಯೇ ಸಿನಿಮಾದ ನಿಜವಾದ ಗೆಲುವು ಎಂದು ಹೇಳಿರುವ ಸುದೀಪ್ ತಮ್ಮ ಸಹ ಕಲಾವಿದರಿಗೆ ಮತ್ತು ಪ್ರತಿಯೊಬ್ಬ ತಂತ್ರಜ್ಞರಿಗೆ ತಲೆ ಬಾಗಿದ್ದಾರೆ.
ಮಾಧ್ಯಮದವರಿಗೆ ಕೂಡ ಧನ್ಯವಾದ ಹೇಳಿರುವ ಸುದೀಪ್ ನೀವು ನನ್ನ ಧ್ವನಿಯಾದಿರಿ, ನನ್ನನ್ನು ಪ್ರಶ್ನಿಸಿದಿರಿ, ಸಂಭ್ರಮಿಸಿದಿರಿ ಮತ್ತು ನಾನು ಬೆಳೆಯಲು ಸಹಕರಿಸಿದಿರಿ ಎಂದು ಹೇಳಿದ್ದಾರೆ.

ಮುಂದುವರೆದು ಕನ್ನಡ ಚಿತ್ರರಂಗವನ್ನು ಉದ್ದೇಶಿಸಿ ಮಾತನಾಡಿರುವ ಸುದೀಪ್ ನನಗೆ ಅಸ್ಮಿತೆ, ಹೆಮ್ಮೆ ಮತ್ತು ಆಸರೆ ನೀಡಿದ ತಾಯಿ ನೀನು. ಕನ್ನಡ ಚಿತ್ರರಂಗವನ್ನು ನಾನು ಸದಾ ನನ್ನ ಹೃದಯದಲ್ಲಿಟ್ಟು ಪೂಜಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ .ಎಷ್ಟೇ ಭಾಷೆಗಳಲ್ಲಿ ನಟಿಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡ ನಾಡು ಮತ್ತು ಕನ್ನಡ ಚಿತ್ರರಂಗದ ಮೇಲೆ ತಮಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪಯಣದುದ್ದಕ್ಕೂ ನನ್ನ ಕಾಲು ನೆಲದ ಮೇಲಿರುವಂತೆ ನೋಡಿಕೊಂಡು, ನನ್ನನ್ನು ನಾನಾಗಿ ಇರುವಂತೆ ಮಾಡಿದ ಕುಟುಂಬ ಹಾಗು ಸ್ನೇಹಿತರಿಗೆ ಕೂಡ ನನ್ನ ಧನ್ಯವಾದ ಎಂದು ಸುದೀಪ್ ಹೇಳಿದ್ದಾರೆ.
ಕೊನೆಯದಾಗಿ ಈ 30 ವರ್ಷ ನನಗೆ ಮಾನವೀಯತೆ ಪಾಠವನ್ನು ಕಲಿಸಿದೆ ಎಂದು ಹೇಳಿರುವ ಸುದೀಪ್ ಸಿಕ್ಕ ಪ್ರತಿಯೊಂದು ಗೆಲುವೂ ಕೂಡ ಎರವಲು ಪಡೆದಿದ್ದಷ್ಟೇ. ನಾನು ಇನ್ನಷ್ಟು ಕಠಿಣ ಪರಿಶ್ರಮ ಪಡುತ್ತೇನೆ, ಈ ಕಲೆಗೆ ಗೌರವ ಸಲ್ಲಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದೆಲ್ಲವನ್ನೂ ಮರಳಿ ನೀಡುತ್ತೇನೆ ಎಂದು ಮಾತು ಕೊಡುತ್ತೇನೆ ಎಂದು ಹೇಳಿದ್ದಾರೆ. ಎಲ್ಲರಿಗೂ ಹೃದಯಾಳದಿಂದ ಧನ್ಯವಾದ ಎಂದಿದ್ದಾರೆ.


Click it and Unblock the Notifications











