»   » ಪ್ರೀತಿ ಏಕೆ ಭೂಮಿ ಮೇಲಿದೆ? : ಒಂದು ಹೊಸ ಫಿಲಾಸಫಿ

ಪ್ರೀತಿ ಏಕೆ ಭೂಮಿ ಮೇಲಿದೆ? : ಒಂದು ಹೊಸ ಫಿಲಾಸಫಿ

Posted By: Super
Subscribe to Filmibeat Kannada

ನಿರ್ದೇಶಕ ಪ್ರೇಮ್‌ ನಾಯಕರಾಗಿ ಅಭಿನಯಿಸುತ್ತಿರುವ 'ಪ್ರೀತಿ ಏಕೆ ಭೂಮಿ ಮೇಲಿದೆ?' ಕ್ಯಾಸೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುತ್ತಿದೆ. ಈ ಚಿತ್ರದ ಅಲ್ಬಂನ ಎಲ್ಲಾ ಹಾಡುಗಳು ಹಿಟ್‌ ಆಗೊತ್ತೋ ಇಲ್ವೋ, ಆದರೆ ಕೆಲವಂತೂ ಕೆಲಕಾಲ ನೆನಪಿನಲ್ಲಿ ಉಳಿಯೋದು ಗ್ಯಾರಂಟಿ.

ಪ್ರೇಮ್‌ಗೆ ಪ್ರೇಕ್ಷಕರ ನಾಡಿಮಿಡಿತ ಹೇಗೋ ಗೊತ್ತಾಗಿ ಬಿಟ್ಟಿದೆ. ಹೀಗಾಗಿಯೇ ಅವರು ನಿರ್ದೇಶಿಸಿದ 'ಎಕ್ಸ್‌ ಕ್ಯೂಸ್‌ ಮೀ', 'ಕರಿಯಾ' ಮತ್ತು 'ಜೋಗಿ' ಚಿತ್ರ ಮತ್ತು ಚಿತ್ರದ ಹಾಡುಗಳು ಹಿಟ್‌ ಆಗಿವೆ. ಈಗಿನ 'ಪ್ರೀತಿ ಏಕೆ ಭೂಮಿ ಮೇಲಿದೆ?' (ಪ್ರೀ.ಏ.ಭೂ.ಮೇ) ಚಿತ್ರದ ಸಂಗೀತದ ಬಗ್ಗೆ, ಧ್ವನಿ ಸುರಳಿ ವಿನ್ಯಾಸ ಪ್ರೇಮ್‌ ಅಭಿರುಚಿಯನ್ನು ತೋರಿಸುವಂತಿವೆ.

'ಸೇವಂತಿ ಸೇವಂತಿ', 'ಜೊತೆಜೊತೆಯಲಿ', ಪ್ರೇಮ್‌ ಅವರ ನೆಚ್ಚಿನ ಹಾಡುಗಳು, ಆರ್‌.ಪಿ. ಪಟ್ನಾಯಕ್‌ ಹಿಟ್ಸ್‌ ಮುಂತಾದ ಕಾಂಬೀನೇಷನ್‌ ಜೊತೆ 'ಪ್ರೀತಿ ಏಕೆ ಭೂಮಿ ಮೇಲಿದೆ?' ಕ್ಯಾಸೆಟ್‌ಗಳು ಲಭ್ಯವಿದೆ. ಆರ್‌.ಪಿ. ಪಟ್ನಾಯಕ್‌ ಹಾಗೂ ಪ್ರೇಮ್‌ ನಾಜೂಕಾಗಿ ಹಾಡುಗಳನ್ನು ಹೆಣೆದಿದ್ದಾರೆ. ಆದರೆ ಕ್ಯಾಸೆಟ್‌ ಕವರ್‌ನಲ್ಲಿ ಗುರುಕಿರಣ್‌ಗೆ ಥ್ಯಾಂಕ್ಸ್‌ ಹೇಳಿದ್ದಾರೆ. ಥ್ಯಾಂಕ್ಸ್‌ ಯಾಕೋ ಗೊತ್ತಿಲ್ಲ. ಇನ್ನೂ 'ಜೋಗಿ' ಗುಂಗಿನಲ್ಲೇ ಇರೋ ಆಗಿದೆ ಪ್ರೇಮ್‌! ಇರಲಿ ಬಿಡಿ...

ಈ ಕ್ಯಾಸೆಟ್‌ನ ಮೊದಲ ಹಾಡು 'ಈ ಪ್ರೀತಿ ಯಾಕೆ.. ಭೂಮಿ ಮೇಲೆ....'. ಪ್ರೇಮ್‌ ರಚಿಸಿ, ಹಾಡಿರುವ ಈ ಹಾಡು ಕೇಳಲು ಇಂಪಾಗಿದೆ. ಹಾಡಿನ ಸಾಹಿತ್ಯದಲ್ಲಿ ಬಲವಿಲ್ಲ. ಆದರೆ ಬೇಸರವಾದಾಗ ಗುನುಗಲು ಅಡ್ಡಿಯಿಲ್ಲ.

ಪ್ರೇಮ್‌ ರಚಿಸಿ ಸಿ. ಅಶ್ವಥ್‌, ಕಲ್ಪನಾ ಅವರೊಂದಿಗೆ ಹಾಡಿರುವ 'ಮಗಳು ದೊಡೋಳಾದ್ಳು....' ಸಕತ್‌ ಹಾಟ್‌ ಸಾಂಗ್‌. ಮಲ್ಲಿಕಾ ಶೆರಾವತ್‌ ಕುಣಿದಿದ್ದಾರೆ. ಕೇಳೋಕ್ಕೆ ಮಜ ಇರುತ್ತೆ ಅಂತೆಲ್ಲಾ ಪ್ರೇಮ್‌, ಎಫ್‌ಎಂ ರೇಡಿಯೋದಲ್ಲಿ ಪ್ರಚಾರ ಕೊಡುತ್ತಿದ್ದಾರೆ. ಆದರೆ ಹಾಡಿನ ಧಾಟಿ ಕೇಳುತ್ತಾ ಹೋದಂತೆ, ನಿರಾಸೆ ಆಗುತ್ತದೆ. ಈ ಹಾಡಿನ ಮೂಲಕ ಕನ್ನಡಿಗರ ಸಂಸ್ಕೃತಿಯನ್ನು ಬಿಂಬಿಸುವ ಪ್ರೇಮ್‌ ಪ್ರಯತ್ನ ಮಾಡಿದ್ದಾರಂತೆ!! ಶಿವ ಶಿವಾ!!!
ದೊಡೋಳಾದ್ಳು
ಮುಂದಿನ ಹಾಡು ಕವಿರಾಜ್‌ ಬರೆದಿರುವ 'ನೀನೇನೆ....'. ಇದನ್ನು ರೂಪ್‌ಕುಮಾರ್‌ ರಾಥೋಡ್‌ ಮತ್ತು ಚಿತ್ರಾ ಸುಶ್ರಾವ್ಯವಾಗಿ ಹಾಡಿದ್ದಾರೆ. ನೀನು ಹಾಗೂ ನಾನು ಎಂಬ ಪದಗಳನ್ನು ಸುಂದರವಾಗಿ ಬಳಕೆ ಮಾಡಿ, ಕೇಳುಗರಿಗೆ ಪ್ರಣಯದ ಅನುಭವ ನೀಡುವಲ್ಲಿ ಕವಿರಾಜ್‌ ಯಶಸ್ವಿಯಾಗಿದ್ದಾರೆ.

ಜಾನಪದ ಶೈಲಿಯಲ್ಲಿರುವ 'ಬಾರಯ್ಯ ಬಾರಯ್ಯ...' ಹಾಡನ್ನು ಸುದರ್ಶನ್‌ ಬರೆದಿದ್ದಾರೆ. ಜೋಗಿಯ 'ಎಲ್ಲೋ ಜೋಗಪ್ಪ ನಿನ್ನ ಅರಮನೆ' ಹಾಡಿನ ಗುಂಗನ್ನು ಮತ್ತೆ ನೆನಪಿಸುವಂತೆ ಮಾಡುತ್ತದೆ. ಈ ಹಾಡನ್ನು ಶಂಕರ್‌ ಮಹಾದೇವನ್‌ ಹಾಗೂ ಸುಪ್ರಿಯಾ ಆಚಾರ್ಯ ಸುಂದರವಾಗಿ ಹಾಡಿದ್ದಾರೆ. ಈ ಹಾಡು ಕೇಳುವಾಗ 'ಭಾಗ್ಯದ ಬಳೆಗಾರ..' ಹಾಡಿನ ನೆನಪು ಬಂದರೆ ನಾವೇನು ಮಾಡೋಕಾಗಲ್ಲ ಬಿಡಿ.

ಹಳ್ಳಿ ಸೊಗಡಿನ ಗಂಧವಿರುವ 'ಚಂದಮಾಮ ಕೈಗೆ ಸಿಗದೇ...' ಹಾಡು ಶ್ರೇಯಾ ಗೋಶಲ್‌ ಅವರ ಧ್ವನಿಯಲ್ಲಿ ಇಂಪಾಗಿ ಮೂಡಿ ಬಂದಿದೆ. ಈ ಹಾಡನ್ನು ಪ್ರೇಮ್‌ ಬರೆದಿದ್ದಾರೆ. ಈ ಹಾಡಿಗೆ ಅನೇಕ ಮಕ್ಕಳು ತಮ್ಮ ಧ್ವನಿ ನೀಡಿ ಚೆಂದಗಾಣಿಸಿದ್ದಾರೆ.

'ಈ ಜನ ಈ ಮನ. . .' ಹಾಡನ್ನು ಪ್ರೇಮ್‌ ಬರೆದಿದ್ದಾರೆ. ನಿಹಾಲ್‌ ಹಾಗೂ ಆರ್‌ಪಿ ಪಟ್ನಾಯಕ್‌ ಅವರು ಹಾಡಿರುವ ಈ ಹಾಡು ದೇಶಭಕ್ತಿ ಗೀತೆಯಾಗುವ ಲಕ್ಷಣಗಳಿವೆಯಂತೆ!!

ಕವಿರಾಜ್‌ ರಚಿಸಿರುವ 'ಚಂದಮಾಮ ಬಾ ...' ಹಾಡನ್ನು ಮತ್ತೊಮ್ಮೆ ಶ್ರೇಯಾ ಗೋಶಲ್‌ ತಮ್ಮ ಕಂಠಸಿರಿಯಿಂದ ಶ್ರೀಮಂತಗೊಳಿಸಿದ್ದಾರೆ. ತೆಲುಗು ಟ್ಯೂನ್‌ನಂತಿದೆ ಅನ್ನಿಸಿದರೂ, ಈ ಹಾಡು ತನ್ನ ಲಘು ಹಾಸ್ಯದ ಧಾಟಿಯಿಂದ ಮಜ ಕೊಡುತ್ತದೆ.

'ಕಳ್ಳನಿವನು . . .' ಹಾಡನ್ನು ನಿತ್ಯಶ್ರೀ ಹಾಗೂ ರಾಜೇಶ್‌ ಕೃಷ್ಣನ್‌ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ಯುಗಳ ಗೀತೆಯ ಸಂಗೀತ ಪಾಶ್ಚಿಮಾತ್ಯ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದ ಧಾಟಿಯನ್ನು ಒಳಗೊಂಡಿದ್ದು, ಒಳ್ಳೆ ರಿದಂನಿಂದ ಕೂಡಿದೆ. ಇದರಲ್ಲಿ ಸಾಕ್ಸೋಫೋನ್‌ ವಾದನದ ಬಳಕೆ ಹಾಗೂ ರಾಜೇಶ್‌ ಅವರ ಕಂಠ, ಹಾಡನ್ನು ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್‌ ರಚಿಸಿದ್ದಾರೆ.

ಕುನಾಲ್‌ ಗಂಜಾವಾಲ ಹಾಗೂ ಚಿತ್ರಾ ಹಾಡಿರುವ 'ಓ ಹುಡುಗ . . .' ಹಾಡು ಉತ್ತಮ ಸಾಹಿತ್ಯದಿಂದ ಕೂಡಿದ್ದು, ಹಾಡಿನ ಫುಲ್‌ ಮಾರ್ಕ್ಸ್‌ ಗಾಯಕಿ ಚಿತ್ರಾ ಹಾಗೂ ಸಾಹಿತಿ ಕವಿರಾಜ್‌ಗೆ ಸಲ್ಲುತ್ತದೆ. ಪ್ರೀತಿಯ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುವ ಹುಡುಗನ್ನು, ಹುಡುಗಿ ಚೇಡಿಸುವ ಗೀತೆ ಇದಾಗಿದೆ.

ಸುಳ್ಳಿನ ಮಹಿಮೆಯನ್ನು ಸಾರುವ 'ಸುಳ್ಳು ಸುಳ್ಳು . . . .'ಎಂಬ ಗೀತೆಯನ್ನು ಪ್ರೇಮ್‌ ಬರೆದಿದ್ದಾರೆ. ಶಂಕರ್‌ ಮಹಾದೇವನ್‌ ಹಾಗೂ ಕೈಲಾಶ್‌ ಕೈರ್‌ ಜುಗಲ್‌ಬಂದಿಯಲ್ಲಿ ಈ ಹಾಡು ಕೇಳುವಂತಿದೆ.

ಕೊನೆಯಲ್ಲಿ ಹೇಳೋದಾದರೆ, ಈ ಚಿತ್ರದ ಅಲ್ಬಂನ ಎಲ್ಲಾ ಹಾಡುಗಳು ಹಿಟ್‌ ಆಗೊತ್ತೋ ಇಲ್ವೋ, ಆದರೆ ಕೆಲವಂತೂ ಕೆಲಕಾಲ ನೆನಪಿನಲ್ಲಿ ಉಳಿಯೋದು ಗ್ಯಾರಂಟಿ. ಯಾವುದಕ್ಕೂ ನೀವೇ ಒಮ್ಮೆ ಕೇಳಿ ನಿರ್ಧರಿಸಿ.

English summary
Preeti Yeke Bhoomi Melide - A New Philosophy - Audio Review by Chethan B.S.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada