»   » ಅರಮನೆ ಮೈದಾನದಲ್ಲಿ ‘ರಾಜ್‌’ ಮೇಳ!

ಅರಮನೆ ಮೈದಾನದಲ್ಲಿ ‘ರಾಜ್‌’ ಮೇಳ!

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಸಿ.ಅಶ್ವತ್ಥ್‌ರ ‘ಕನ್ನಡವೇ ಸತ್ಯ’ ಕಾರ್ಯಕ್ರಮದ ಬೆರಗು ಮಾಸುವ ಮುನ್ನವೇ ಮತ್ತೊಂದು ಬೆರಗು. ಈ ಬೆರಗು ಮತ್ತು ಬೆಳಕಿನ ಕೇಂದ್ರ ಬಿಂದು ಡಾ.ರಾಜ್‌ಕುಮಾರ್‌!

ಹೌದು ಅದೇ ಅರಮನೆ ಮೈದಾನದಲ್ಲಿ ಮೇ 9ರಂದು ಕನ್ನಡದ ಹಬ್ಬ, ಕನ್ನಡವನ್ನು ಸತ್ಯ ಮತ್ತು ನಿತ್ಯ ಮಾಡುವ ಉತ್ಸವ! ಈ ‘ಸಾರ್ಥಕ ಸಂಭ್ರಮ’ ಕಾರ್ಯಕ್ರಮವನ್ನು ಕಾಣುವ ತವಕ ಎಲ್ಲರದು. ಕನ್ನಡ ಬೆಳ್ಳಿತೆರೆಗೆ ರಾಜ್‌ಕುಮಾರ್‌ ಸಲ್ಲಿಸಿದ ಐದು ದಶಕಗಳ ಸೇವೆಗೆ ಕೃತಜ್ಞತೆ ಸಲ್ಲಿಸಲು, ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ಸಂಘಟಿಸಿದೆ.

ಒಂದೇ ಭಾಷೆಯಲ್ಲಿ ನಟಿಸಿ ಜನ ಮೆಚ್ಚುಗೆಗೆ ಪಾತ್ರರಾಗಿರುವ ರಾಜ್‌, ಮೊನ್ನೆಯಷ್ಟೇ 77ನೇ ವಸಂತಕ್ಕೆ ಕಾಲಿಟ್ಟರು. ಆ ಬೆನ್ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ರಾಜ್‌ ಅಭಿಮಾನಿಗಳ ಪಾಲಿಗೆ ಒಂದು ಮಿಂಚು. ಕನ್ನಡ ಚಿತ್ರರಂಗದಲ್ಲಿ ಐವತ್ತು ವರ್ಷಗಳ ಸೇವೆ ಸಲ್ಲಿಸಿದ ಸಂಭ್ರಮವನ್ನು 2004ರಲ್ಲಿಯೇ ಆಚರಿಸಬೇಕಾಗಿತ್ತು. ಇಂತಹ ವಿಶೇಷ ಸಂದರ್ಭವನ್ನು ಎಲ್ಲರೂ ಮರೆತರು ಎನ್ನುವಾಗಲೇ ರಾಜ್ಯ ಸರ್ಕಾರ ತಡವಾಗಿಯಾದರೂ ರಾಜ್‌ರ ಗೌರವಿಸಲು ಸಿದ್ಧತೆ ನಡೆಸಿದೆ.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸೇರಿದಂತೆ ಸಚಿವರ ದಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಕಿರುತೆರೆ ಮತ್ತು ಬೆಳ್ಳಿತೆರೆಯ ಹಿರಿಕಿರಿಯರೆಲ್ಲಾ ‘ಸಾರ್ಥಕ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಕನ್ನಡವೇ ಸತ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿದ್ದ ಗ್ಲೋಬಲ್‌ ಕನ್ಸಲ್ಟೆಂಟ್‌ಗೆ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಲಾಗಿದೆ. ರಾಜಧಾನಿ ನಗರದಲ್ಲಿ ಈಗಾಗಲೇ ‘ಸಾರ್ಥಕ ಸಂಭ್ರಮ’ಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada