»   » ‘ಲವ್ವೇ ಪಾಸಾಗಲಿ’ಗೆ ಫಿನಿಷಿಂಗ್‌ ಟಚ್‌

‘ಲವ್ವೇ ಪಾಸಾಗಲಿ’ಗೆ ಫಿನಿಷಿಂಗ್‌ ಟಚ್‌

Posted By: Super
Subscribe to Filmibeat Kannada

ಒಂದೊಂದು ಹೃದಯದಲ್ಲೂ ನೂರು ನೋವು  ನೂರಾರು ನೋವಿನಲ್ಲೂ ಪ್ರೀತಿಗೆಲ್ಲಿ ಸಾವು ನೋವು...

ಹಂಸಲೇಖಾ ಸಾಹಿತ್ಯದ ಹಾಡು ಉಲಿಯುತ್ತಿತ್ತು. ಪ್ರೇಮಾಗೆ ಖುದ್ದು ಪ್ರಸಾದ್‌ ಡ್ಯಾನ್ಸ್‌ ಹೇಳಿಕೊಟ್ಟು, ತಾವೂ ಒಂದಾಗಿ ಹೆಜ್ಜೆ ಹಾಕುತ್ತಿದ್ದರು. ಶ್ರೀನಾಥ್‌, ಚರಣ್‌ ರಾಜ್‌ ಹಾಗೂ ರೇವತಿ ಲಂಬಾಣಿ ತಾಂಡಾದ ಗೆಟಪ್ಪಿನಲ್ಲಿ ನಿಂತಿದ್ದರು. ಲಂಬಾಣಿ ಉಡುಗೆ ತೊಟ್ಟ ಸುಮಾರು ಐವತ್ತು ಸಹ ಕಲಾವಿದರ ನೃತ್ಯದ ಸಾಥಿಯಿತ್ತು. ಶಿವಮೊಗ್ಗದಿಂದ ಸಿನಿಮಾಗೆಂದೇ ಕರೆಸಿದ ಡೊಳ್ಳು ಕುಣಿತದವರ ಹುಮ್ಮಸ್ಸಿನ ತಾಲೀಮಿತ್ತು. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಹತ್ತಿರದ ಫರ್ನಾಂಡೊ ಹೌಸ್‌ನಲ್ಲಿ ಲವ್ವಿನ ಗಮಲು. ಪ್ರೇಮ ಪರೀಕ್ಷೆಗೆ ಕೊನೆಯ ಟಚ್‌. 'ಲವ್ವೇ ಪಾಸಾಗಲಿ" ಶೂಟಿಂಗ್‌ ಇನ್ನೇನು ಮುಗಿಯುತ್ತಾ ಬಂದಿದೆ. ಚಿತ್ರತಂಡದ ಕೆಲಸಕ್ಕೀಗ ಭಾರೀ ವೇಗ.

ಫರ್ನಾಂಡೊ ಹೌಸ್‌ನಿಂದ ಲವ್ವೇ ಪಾಸಾಗಲಿ ತಂಡ ಸೀದಾ ಪರಪ್ಪನ ಅಗ್ರಹಾರಕ್ಕೆ ಬಂತು. ಸೆಂಟ್ರಲ್‌ ಜೈಲಿನ ಆವರಣದಲ್ಲಿ ಇನ್ನೊಂದು ಹಾಡಿನ ಚಿತ್ರೀಕರಣ. ಪ್ರಸಾದ್‌ ಮತ್ತೆ ಸೊಂಟ ತಿರುಗಿಸಲು ಶುರುವಿಟ್ಟುಕೊಂಡರು. 'ಕನಸಲ್‌ ಮನಸಲ್‌ ಎಲ್ಲೆಲ್ಲು ಇರುವೆ ನೆನೆಸಲ್‌ ಬಯಸಲ್‌ ನೆನೆದರು ಬರುವೆ..." ಹಾಡು ಪ್ಲೇ ಆಯಿತು. ಪ್ರೇಮಾ, ಶ್ರೀನಾಥ್‌, ಚರಣ್‌ರಾಜ್‌ ಹಾಗೂ ಜಯತೀರ್ಥ ಕೂಡ ನೃತ್ಯದಲ್ಲಿ ನಾವೂ ಒಂದು ಕೈ ನೋಡ್ತೀವಿ ಅಂತ ಕುಣಿಯತೊಡಗಿದರು. ಮಧ್ಯೆ ಮಧ್ಯೆ ಡ್ಯಾನ್ಸ್‌ ಮೇಷ್ಟ್ರು ಪ್ರಸಾದ್‌ ಪಾಠ.

ಕೊಂಚ ದೂರದಿಂದಲೇ ಟೂ ಇನ್‌ ಒನ್‌ (ನೃತ್ಯ ನಿರ್ದೇಶಕ ಹಾಗೂ ನಾಯಕ) ಪ್ರಸಾದ್‌ನ ಹುಮ್ಮಸ್ಸು ನೋಡಿ ನಿರ್ದೇಶಕ ಬಿ. ಮಲ್ಲೇಶ್‌ ಬೀಗುತ್ತಿದ್ದರು. ತ್ರಿಪುರ ಸುಂದರಿ ಪ್ರೊಡಕ್ಷನ್ಸ್‌ ಲಾಂಛನದ ಈ ಚಿತ್ರದ ಕತೆ-ಸಂಭಾಷಣೆ ಕೂಡ ಮಲ್ಲೇಶ್‌ ಅವರದ್ದೇ. ಹಾಡುಗಳನ್ನು ಬರೆದು, ಟ್ಯೂನ್‌ ಹಾಕಿದ್ದಾರೆ ಹಂಸಲೇಖ. ಕೆಮೆರಾ ಹಿಡಿದು ಮಲ್ಲಿಕಾರ್ಜುನ್‌ ನಿಂತಿದ್ದಾರೆ. ಫೈಟಿಂಗ್‌ ವರಸೆಗಳನ್ನು ಹೊಸೆದಿರುವುದು ಕೌರವ ವೆಂಕಟೇಶ್‌.

ನಗಿಸಲು ದೊಡ್ಡಣ್ಣ ಹಾಗೂ ಸಾಧುಕೋಕಿಲ ಇದ್ದಾರೆ. ಅಳುಮುಂಜಿ ನಟನೆ ಮಾಡಲು ಮನ್‌ದೀಪ್‌ ರಾಯ್‌ ಉಂಟು. ಈಗಲೂ ಬ್ಯುಸಿಯಾಗಿರುವ, ಕಣ್ಣು ಪಿಳಿಪಿಳಿಸುವ ಹಿರಿಯ ನಟಿ ಬಿ.ವಿ.ರಾಧಾ ಕೂಡ 'ಲವ್ವೇ ಪಾಸಾಗಲಿ" ಅನ್ನುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಲ್ಲೇಶ್‌ ಹೊಸೆದಿರುವ ಈ ಲವ್ವು ಪಾಸೋ ಫೇಲೋ ಗೊತ್ತಾಗುತ್ತದೆ.

English summary
Lavve Pasagali is in finishing stage of shooting

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada