»   » ಆಗ ಗಾಯಕ, ಈಗ ನಾ... ?

ಆಗ ಗಾಯಕ, ಈಗ ನಾ... ?

Posted By: Super
Subscribe to Filmibeat Kannada

ಚಿತ್ರದ ಹೆಸರು : ಮದನ್‌ ಮಲ್ಲು , ಏನೋ ಗುಲ್ಲು
ಮೂಲ ಕಥೆ : ಹಲವು ಭಾಷೆಗಳ ಮಿಕ್ಸು !
ಕಥೆ, ಚಿತ್ರಕಥೆ, ಪ್ರಚಾರ, ಸಂಗೀತ, ನಾಯಕ, ಖಳನಾಯಕ, ಗಾಯಕ, ನಿರ್ಮಾಪಕ, ನಿರ್ದೇಶಕ : ಮದನ್‌ ಪಟೇಲ್‌ ಉರುಫ್‌ ಮದನ್‌ ಮಲ್ಲು !
ಪ್ಲಸ್‌ ಪಾಯಿಂಟು : ಹಾಡು, ಡ್ಯಾನ್ಸು, ಫೈಟಿಂಗ್‌, ಸ್ಟೋರಿ ಯಾವ್ದೂ ಇಲ್ಲ !
ಸೆನ್ಸಾರ್‌ ತೀರ್ಪು : ಬೈಗುಳ ಪ್ರಿಯರಿಗೆ ಮಾತ್ರ...
ಚಿತ್ರದ ಮೈನಸ್‌ ಪಾಯಿಂಟು : ಮೊದಲಿಂದ ಕಡೇತನಕ ಆಸಿಡ್‌ ಘಾಟು !
ಹಿಂಸೆ ಅನ್ನಿಸೋದು : ಪದೇ ಪದೇ ನಾನು ಕ್ಷಮಿಸಿದ್ನೀ ಎಂಬ ಎಲ್ಲಾ ಪಾತ್ರಗಳ
ಡೈಲಾಗು...

ಇಂಥದೊಂದು ಬಯ್ಯೋ-ಡಾಟಾ ಮುಂದುವರಿಸಿದರೆ ಅದು ನಿರುದ್ಯೋಗಿಗಳ ಅರ್ಜಿಯ ಥರವೇ ಆಗಿಬಿಡುವ ಅಪಾಯವಿರುವುದರಿಂದ- ಮಹಾ ಜನಗಳೇ, ಮದನ್‌ ಮಲ್ಲು ಎಂಬ ನಟನ ಕಥೆಯನ್ನು ಅಜ್ಜಿ ಕಥೆಯ ಥರದಲ್ಲೇ ಹೇಳಿಬಿಡುತ್ತೇನೆ. ಕೇಳುವಂಥವರಾಗಿ.

ಇವತ್ತು ಇದೇ ಗಾಂಧೀನಗರದಲ್ಲಿ ಮದನ್‌ ಪಟೇಲ್‌, ಮದನ್‌ ಮಲ್ಲು, ಮಲ್ಲು , ಮಲ್ಲಣ್ಣ , ಮಲ್ಲೇಗೌಡ ಇತ್ಯಾದಿ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವ ಈ ಕಥಾನಾಯಕಡು ಕ್ಯಾಮರಾ ಮುಂದೆ ನಿಂತ್ರೆ ನಾಯಕ. ಕನ್ನಡಿ ಮುಂದೆ ಬಂದ್ರೆ ಜೂನಿಯರ್‌ ರವಿಚಂದ್ರನ್ನು ! ಮೈಕು ಹಿಡಿದು ನಿಂತ್ರೆ ಕೇಳಿಬರೋ ಮೊದಲ ಹಾಡೇ- ರಾಜಾ, ನಾನೇ ಮಹಾರಾಜಾ... ಅದೇ ಪತ್ರಿಕಾಗೋಷ್ಠಿಗೆ ಬಂದರೆ ಈಯಪ್ಪ- ಆಸಿಡ್‌ ರಾಜಾ ! ಮಾತಿಗೆ ಶುರುವಿಟ್ಟರೆ ನಿಮಿಷಕ್ಕೊಂದು ಬಾರಿ ಓಕೆ ಸಾರ್‌ ಓಕೆ !

ಇಂಥ ಪರಿಚಯದ ಮಲ್ಲು ಸಾಹೇಬರು ದಶಕದ ಹಿಂದೆ 'ಓನ್ಲಿ ಸಿಂಗರ್‌" ಆಗಿದ್ದರು. ರಾಜ್ಯೋತ್ಸವ, ಗಣರಾಜ್ಯೋತ್ಸವ, ಮದುವೆ ಉತ್ಸವ, ಗಾಯನೋತ್ಸವ... ಹೀಗೆ ಎಲ್ಲೆಲ್ಲೂ ಹಾಡುತ್ತ, ಬಣ್ಣ ಬಣ್ಣದ ಲೈಟುಗಳನ್ನು ಮೈತುಂಬಾ ಅಂಟಿಸಿಕೊಂಡು ಆಡುತ್ತಾ ಸುಖವಾಗಿಯೇ ಇದ್ದರು. ಅದು ಯಾವ ದುರ್ದಿನವೋ ಏನು ಕತೆಯೋ ? ಯಡವಟ್ಟುರಾಯನೊಬ್ಬ ಇದೇ ಮಲ್ಲು ಹತ್ತಿರ ಬಂದು ಏನ್ಸಾರ್‌ ನೀವು ? ನೋಡಿದ್ರೆ ಚರಿತ್ರೆಯ ಮಹಾರಾಜನ ಥರಾನೇ ಇದೀರಿ. ನೀವು ಬರೀ ಗಾಯಕ ಆಗೇ ಇರ್ತೀರಾ... ಛೂ, ಥೂ. ಮೊದ್ಲು ನಾಯಕ ಆಗಿಬಿಡೀ ಎಂದು ಕಿವಿಯೂದಿಬಿಟ್ಟ !

ಆವತ್ತಿನತನಕ ಎಲ್ಲವೂ ಚೆನ್ನಾಗಿಯೇ ಇತ್ತು . ಯಾವತ್ತು ಮಲ್ಲು ಸಾಹೇಬರಿಗೂ ನಾನು ಸುರ ಸುಂದರಾಂಗ ಎಂಬ ಅರ್ಧಸತ್ಯ, ಜ್ಯೂನಿಯರ್‌ ರವಿಚಂದ್ರನ್‌ ಎಂಬ ಪೂರ್ಣಸತ್ಯ ಅರ್ಥವಾಗಿ ಹೋಯಿತೋ ಅವತ್ತೇ- ಕೈಲಿದ್ದ ಮೈಕನ್ನು ಪಕ್ಕಕ್ಕಿಟ್ಟ ಮಲ್ಲು ಮಹಾರಾಜರು ಎರಡಿಂಚು ದಪ್ಪದ ಮೇಕಪ್‌ ಅಂಟಿಸಿಕೊಂಡು ಹೀರೋ ಆಗೇಬಿಟ್ರು.

ಚಿತ್ರರಂಗಕ್ಕೆ ಹೊಸನೀರು ಬರಬೇಕು ಸಾರ್‌ ಎಂದು ಘೋಷಿಸುತ್ತಲೇ ಕಳ್ಳ-ಪೊಲೀಸರ ಕಥೆಯ ಚಿತ್ರವನ್ನೂ ತಂದರು. ಅದು ಬರಕತ್ತಾಗದೇ ಹೋದಾಗ 'ಆಂಧ್ರ ಹೆಂಡ್ತಿ" ಎಂಬ ಇನ್ನೊಂದು ಚಿತ್ರ ತೆಗೆದು ನಾಯಕ, ನಿರ್ಮಾಪಕ ಮತ್ತು ಖಳನಾಯಕನ ಪಾತ್ರವನ್ನು ಒಟ್ಟೊಟ್ಟಿಗೇ ನಿರ್ವಹಿಸಿ ತಮ್ಮ ಮೇಲೆ ತಾವೇ ಸೇಡು ತೀರಿಸಿಕೊಂಡರು.

ಇಂಥ ಮಜಬೂತ್‌ ಹಿನ್ನೆಲೆಯ ಮಲ್ಲು ಮಾಮ ಒಂದು ರೀತೀಲಿ ಛಲದಂಕ ಮಲ್ಲ ! ತನ್ನ ಚಿತ್ರಗಳನ್ನು ನೋಡದ ಪ್ರೇಕ್ಷಕರಿಗೆ ಇನ್ನೊಂದು ಹೊಸ ಸಿನಿಮಾ ತೋರಿಸಿ ಅವರ ಮೇಲೆ ಸೇಡು ತೀರಿಸಿಕೊಳ್ಳೋದು ; ಮಾತು ಮೈತಿಗೂ ಓಕೆ ಸಾರ್‌ ಓಕೆ ಎನ್ನುತ್ತಲೇ ಫಿಲಂ ನೋಡದಿದ್ರೆ ಜೋಕೆ ಅನ್ನುವುದು ಇದೇ ಮಲ್ಲು ಮಾಮನ ಹಾಬಿ !

ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಅನ್ನೋವಾಗ ಹೀರೋಯಿನ್‌ಗಳ ಮಧ್ಯದಲ್ಲೇ ಆನೆ ಪಟಾಕಿ ಹೊಡೆದು ಸುದ್ದಿಯಾಗೋದು ಈ ಪಟೇಲನ ಗ್ರಾಫಿಕ್‌ ಎಫೆಕ್ಟು ! ನಿರ್ಮಾಪಕ ನಕ್ಕಿದ್ದಕ್ಕೆ, ನಾಯಕಿಯರು ಬೈದಿದ್ದಕ್ಕೆ , ಸೈಡ್‌ ಆಕ್ಟರ್‌ಗಳು ಅತ್ತಿದ್ದಕ್ಕೆ ಪತ್ರಿಕಾಗೋಷ್ಠಿ ಕರೆದು- ಓಕೆ ಸಾರ್‌ ಓಕೆ, ನಾನು ಎಲ್ಲರನ್ನೂ ಕ್ಷಮಿಸಿದ್ದೀನಿ ಅಂದುಬಿಡೋದು ಈ ಣ್ಞ್ಚಛಿ ್ಠಟಟ್ಞ ಚ ಠಿಜಿಞಛಿ ಗಾಯಕನ ಪ್ರಚಾರ ತಂತ್ರವು.

ಅರ್ಥವಾಯಿತಾ ಓದುಗ ಮಹಾಪ್ರಭೂ... ಇದು ಮಲ್ಲು ಮಾಮನ ಕಥೆ. ಅವರು ಬೈದವರನ್ನು, ಬಿದ್ದವರನ್ನು, ಎದ್ದವರನ್ನು ಮತ್ತು ಗೆದ್ದವರನ್ನು ಅಗತ್ಯ ಇಲ್ಲದಿದ್ರೂ ಕ್ಷಮಿಸ್ತಾರಂತೆ. ಅವರು ಕ್ಷಮಿಸ್ತಾರೆ ಅನ್ನೋ ನಂಬಿಕೆಯಿಂದ ಅವರೊಪ್ಪದ ಈ ಕತೇನ ಹೇಳಿಬಿಟ್ಟಿದ್ದೀನಿ. ತಪ್ಪಲ್ಲ ತಾನೆ ?

ತಪ್ಪು ಅನ್ನಿಸಿದರೆ ಓಕೆ ಓಕೆ ಅನ್ನುತ್ತಲೇ ಅವರು ಕ್ಷಮಿಸಲಿ !(ಸ್ನೇಹ ಸೇತು : ವಿಜಯ ಕರ್ನಾಟಕ)

English summary
Cinema actor cum singer Madanmallu story

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada