ಪಾ.ಪ.ಪಾಂಡುವಿನಲ್ಲಿ ಎರಡು ಟ್ವಿಸ್ಟು
ನಿತ್ಯ ಒಂದೊಂದು ನಗೆ ಶೀರ್ಷಿಕೆಯಾಟ್ಟಿಗೆ ಹಾಸ್ಯದ ರನ್ನುಗಳ ಹೊಡೆಯುತ್ತಾ ಈಗ 5 ಶತಕಕ್ಕೆ ಇನ್ನು 20 ಕಂತು ಮಾತ್ರ ಬಾಕಿ ಉಳಿಸಿಕೊಂಡಿರುವ ಪಾ.ಪ.ಪಾಂಡು ಧಾರಾವಾಹಿಯದ್ದು 'ಲಿಮ್ಕಾ" ದಾಖಲೆಯ ಆಟ. ಈ ಪರಿಯ ಯಾವ ನಗೆ ಧಾರಾವಾಹಿಯೂ 5 ಶತಕ ಬಾರಿಸಿಲ್ಲ. ಯೋಚನೆ ಮಾಡಬೇಡಿ, ಪಾಂಡು 5 ಶತಕ ಹೊಡೆಯುವ ಮುನ್ನ ಸುತಾರಾಂ ಔಟಾಗೋದಿಲ್ಲ. ಬದಲಿಗೆ ಆಟದ ವರಸೆಯಲ್ಲಿ ಹೊಸ ಟ್ವಿಸ್ಟು ಕೊಡುತ್ತಿದ್ದೇವೆ ಅಂತ ಸಿಹಿಕಹಿ ಚಂದ್ರು ಬಾಯಿತುಂಬಾ ನಗುತ್ತಿದ್ದರು.
ಈಟಿವಿಯ ಟ್ರಂಪ್‌ಕಾರ್ಡ್ ಧಾರಾವಾಹಿ ಪಾ.ಪ.ಪಾಂಡುವಿನಲ್ಲೀಗ ಅನಿರೀಕ್ಷಿತ ತಿರುವು; ಒಂದಲ್ಲ ಎರಡು. ಪಾಂಡುವಿನ ಪೊರೆಯಲು ಈಗೊಂದು ಶಕ್ತಿ ಬೇಕು. ಆ ಶಕ್ತಿ 'ರಾಮುತಾತ"ನ ರೂಪದಲ್ಲಿ ಅವತರಿಸಲಿದೆ. ಮಾತಿನಮಲ್ಲ ಮಾಸ್ಟರ್ ಹಿರಣ್ಣಯ್ಯ ರಾಮುತಾತನಾಗಿ ಪಾಂಡು ಬಳಗ ಸೇರಿಕೊಳ್ಳಲಿದ್ದಾರೆ. ಈ ತಾತನ ಕೈಲೊಂದು ಮಾಂತ್ರಿಕ ಚಾವಿ. ಅದನ್ನು ಕುಟ್ಟಿದರೆ ಫಟ್ಟನೊಂದು ಐಡಿಯಾ. ಇದು ರಾಮು ತಾತನ ಶಕ್ತಿ.

ನಿತ್ಯವೂ ಒಂದೊಂದು ಪಾಂಡು ಹಾಸ್ಯದ ಎಳೆಯನ್ನು ಹೊಸೆತ್ತಿರುವ ಎಂ.ಎಸ್.ನರಸಿಂಹಮೂರ್ತಿ ಮುಖದಲ್ಲಿ ಕಳೆ ಕಿಂಚಿತ್ತೂ ಮಾಸಿಲ್ಲ. ಅವರ ನಗೆ ಬತ್ತಳಿಕೆ ಅಕ್ಷಯವಾದುದು ಅಂತ ಶಹಬ್ಭಾಸ್‌ಗಿರಿ ಕೊಟ್ಟಾಗ ಪಾಂಡು ಶೈಲಿಯಲ್ಲೇ ನರಸಿಂಹಮೂರ್ತಿ ನಕ್ಕರು.
ಇಪ್ಪತ್ತೆೈದು ನಿಮಿಷದ ನಿತ್ಯ ಕಚಗುಳಿಯಿಡುವ ಈ ಧಾರಾವಾಹಿಯಲ್ಲಿ 10 ನಿಮಿಷ ಜಾಹೀರಾತು ಇದೆಯೆಂದರೆ ಇದರ ಜನಪ್ರಿಯತೆ ತಲುಪಿರುವ ತುದಿಯ ಎತ್ತರ ಎಂಥದ್ದು ನೋಡಿ. ಪಾಂಡು ಬಳಗ ಧಾರಾವಾಹಿಯ ಹೊಸ ತಿರುವನ್ನು ನಾಲ್ಕೇ ಸಾಲುಗಳಲ್ಲಿ ಎಷ್ಟು ಸೊಗಸಾಗಿ ಹೇಳುತ್ತದೆ, ಓದಿ-
- 'ಪಾ.ಪ. ಪಾಂಡು"ಗೆ ಒಂದು ಹೊಸ ರೂಪ
- 'ಪಾ.ಪ.ಪಾಂಡು"ಗೊಂದು ಪಾಪ
- ಪಾಂಡು ನಗೆಗೆ ಹೊಸ ತಿರುವು : ಪುಂಡನ ಆಗಮನ
- ಬರುತ್ತಿದ್ದಾನೆ ಪಾಂಡು ಮಗ 'ಪುಂಡ"


Click it and Unblock the Notifications