For Quick Alerts
ALLOW NOTIFICATIONS  
For Daily Alerts

ಆತ್ಮಹತ್ಯೆ ಸುತ್ತಮುತ್ತ(ಭಾಗ-2)

By Staff
|
 • ಆವುಟರಾಯ
 • ನಂತರದ್ದೇ ಆತ್ಮಹತ್ಯಾ ಪ್ರಯತ್ನದ ಎಪಿಸೋಡು! ಒಂಬತ್ತು ನಿದ್ರೆ ಮಾತ್ರೆ ನುಂಗಿಮನೆಯಲ್ಲಿ ಕಾಲು ಚಾಚಿ ಉದ್ದಕ್ಕೆ ಶವಾಸನ ಹಾಕಿ ಮಲಗಿದ್ದಳು ವಿಜಯಲಕ್ಷ್ಮಿ. ತೀರ ಒಂಬತ್ತು ಮಾತ್ರೆಗೆ ಯಾರೂ ಸಾಯುವುದಿಲ್ಲ. ಅಲ್ಲದೆ ಮದರಾಸಿನಲ್ಲಿ ಟೀವಿ ನಟಿಯರು ಈ ಮಧ್ಯೆ ಹೋಲ್‌ಸೇಲ್‌ ರೇಟಿನಲ್ಲಿ ಆತ್ಯಹತ್ಯೆ-ಆತ್ಮಹತ್ಯಾ ಪ್ರಯತ್ನ ಇತ್ಯಾದಿಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಅಲ್ಲಿಯವರ್ಯಾರಿಗೂ ಇದು ದೊಡ್ಡ ಸುದ್ದಿ ಅನ್ನಿಸಲಿಲ್ಲ. ಕರ್ನಾಟಕದಲ್ಲಿ ಮಾತ್ರ, ಅದರಲ್ಲೂ ಸಿನಿಮಾ ಪತ್ರಕರ್ತರ ವಲಯದಲ್ಲಿ ‘ಚಪ್ಲಿ ವಿಜಿ ಹೋದ್ಲಂತೆ, ಹ್ಯಾಂಗ್ಮಾಡ್ಕೊಂಡ್ಲಂತೆ, ಇನ್ನೇನು ಬಾಡಿ ತರೋಕಿದೆಯಂತೆ’ ಎಂಬ ಮಟ್ಟಿಗೆ ಮಾತು ನಡೆದು ಹೋಯಿತು.

  ಆ ಕಡೆ ವಿಜಿಯ ಅಕ್ಕ ಮತ್ತು ತಾಯಿ ತೇನಾಂಬೇಟ್‌ ಪೊಲೀಸ್‌ ಸ್ಟೇಷನ್ನಿಗೆ ಹೋಗಿ ರಮೇಶ್‌ ಇಂದಿರನ ಹೆರೇಸ್ಮೆಂಟಿನಿಂದಲೇ ತಮ್ಮ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಅಂತ ಕಂಪ್ಲೇಂಟು ಜಡಾಯಿಸಿದರು. ಅದನ್ನು ಸಮರ್ಥಿಸಿದ ವಿಜಿ, ಅವನೊಬ್ಬನೇ ಅಲ್ಲ ನನ್ನನ್ನು ಟಾರ್ಚರ್‌ ಮಾಡಿದ್ದು, ರಡಾನ್‌ನಲ್ಲಿರುವ ಶುಭಾ ವೆಂಕಟ್‌ ಕೂಡ ನನ್ನನ್ನು ಹಿಂಸಿಸಿದರು. ನಾನು ಈ ಹಿಂದೆಯೇ ರಡಾನ್‌ ರಾಧಿಕಾಗೆ ದೂರುಕೊಟ್ಟೆ. ಅವರು ‘ನೀನು ಅವನನ್ನೇ ಮದುವೆಯಾಗು’ ಅಂದರು. ‘ಈ ಹೆರೇಸ್ಮೆಂಟಿಗೆ ರಾಧಿಕಾಳ ಸೋದರ ರವಿ ರಾಧ ಕೂಡ ಪಾರ್ಟಿಯೇ’ ಎಂಬರ್ಥದ ಹೇಳಿಕೆ ಕೊಟ್ಟಳು.

  ಬಂಬೇ ಯೂನಿಟ್‌

  ಮಾಡದ ಪಾಪಕ್ಕೆ ಶುಭಾ ವೆಂಕಟ್‌ ದಿನವಿಡೀ ಪೊಲೀಸ್‌ ಸ್ಟೇಷನ್‌ನಲ್ಲಿ ಕೂತಿರಬೇಕಾಯಿತು. ಚೆನ್ನೈ ಪೊಲೀಸರು ಬೆಂಗಳೂರಿಗೆ ಬಂದು ಹುಡುಕೋ ಬದಲು ನಾನೇ ಚೆನ್ನೈಗೆ ಹೋಗುವೆ ಅಂತ ಈ ಹುಡುಗ ರಮೇಶ್‌ ಇಂದಿರ ಹೊರಟುಬಿಟ್ಟಿದ್ದಾನೆ. ಅಲ್ಲಿ ರಡಾನ್‌ನ ‘ಬಂಬೇ’ ಗ್ಯಾಂಗು ಇಡೀ ಯೂನಿಟ್‌ನವರಿಗೆಲ್ಲ ಸೇರಿಸಿ ಒಂದು ಆ್ಯಂಟಿಸಿಪೇಟರಿ ಬೇಲ್‌ ಸಿಗುತ್ತಾ ಅಂತ ಓಡಾಡುತ್ತಿದ್ದಾರೆ(ಈಗ ಬಂದ ಸುದ್ದಿ ಪ್ರಕಾರ- ರಮೇಶ್‌ಗೆ ಜಾಮೀನು ಸಿಕ್ಕಿದೆ).

  ಇದೆಲ್ಲದರ ಮಧ್ಯೆ ರಮೇಶ್‌ ಇಂದಿರ ಮತ್ತು ವಿಜಯಲಕ್ಷ್ಮಿ ಮಧ್ಯೆ ಅಫೇರ್‌ ಥರದ್ದೇನಾದರೂ ಇತ್ತಾ? ಈ ಹುಡುಗ ಸುಮ್ನೆ ಕುಂತಲ್ಲೇ ಮಂಡಿಗೆ ತಿಂದನಾ ಅಂತ ಪರಿಶೀಲಿಸಲು ಹೋದರೆ, ವಿಜಯಲಕ್ಷ್ಮಿ ತನ್ನ ಮೊಬೈಲ್‌ನಿಂದ ಕಳಿಸಿದ ಎಸ್ಸೆಮ್ಮೆಸ್ಸುಗಳು ಅವರ ಮಧ್ಯದ ಸಂಬಂಧಕ್ಕೆ ಸಾಕ್ಷಿ ನುಡಿಯುತ್ತಿವೆ.

  ಆತ್ಮಹತ್ಯೆಗೆ ಯತ್ನಿಸಿ, ಬದುಕುಳಿದು, ದೊಡ್ಡಮಟ್ಟದ ಸುದ್ದಿಯಾಗಿರುವ ಚಪ್ಲಿ ವಿಜಿಗೆ ಬಹುಶಃ ಈ ಹೊತ್ತಿಗೆ ಅರ್ಥವಾಗಿರಬಹುದಾದ ಸಂಗತಿಯೆಂದರೆ, ಹೀಗೆ ತರಲೆ-ವ್ಯಾಜ್ಯ ಮಾಡಿಕೊಳ್ಳುತ್ತಲೇ ಹೋದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರಿಯಲು ಕಷ್ಟವಾದೀತು.

  ***

  ಏನಿದೆ ಅವಳ ಎಸ್ಸೆಮ್ಮೆಸ್ಸುಗಳಲ್ಲಿ?

  ವಿಜಯಲಕ್ಷ್ಮಿಯ 98842 45214 ನಂಬರಿನಿಂದ ರಮೇಶ್‌ ಇಂದಿರನ 99456 99808 ನಂಬರಿಗೆ ಬಂದಿರುವ ಎಸ್ಸೆಮ್ಮೆಸ್ಸುಗಳ ಪ್ರಿಂಟ್‌ ಔಟ್‌ ತೆಗೆಸಿದರೆ ಉದ್ದಕ್ಕೂ ಸಿಗುವುದು Gud morning pa, Let's meet pa, happy Sunday pa, ಥರದ ಕ್ಯಾಷುಯಲ್‌ ಮೆಸೇಜುಗಳೇ.

  ಎರಡು ಮೆಸೇಜುಗಳಲ್ಲಿ ಮಾತ್ರ I am right there in your heart pa. So every time you miss me I am hiding in your heart ಅಂತ ಬರೆಯುತ್ತಾಳೆ. ಕೊನೆ ಕೊನೆಗೆ Gud nite sweet heart, thank u ಅಂತಲೂ I love you too sweet heart ಅಂತಲೂ ಎಸ್ಸೆಮ್ಮೆಸ್‌ ಕಳಿಸುತ್ತಾಳೆ. Happy journey, love you too ಅಂತ ಒಂದು ಮೆಸೇಜಿದೆ.

  ಹತ್ತೊಂಬತ್ತನೆಯ ಮೆಸೇಜು ಮಾತ್ರ PLEASE DONT CALL OR SMS ಅಂತ ಸ್ಪಷ್ಟವಾಗಿದೆ. ಈ ಪ್ರಿಂಟ್‌ ಔಟು ಪೊಲೀಸರಿಗೂ ಸಿಕ್ಕಿದೆ.

  ***

  ಆತ್ಮಾಭಿಮಾನದಿಂದ ದುರಹಂಕಾರದತನಕ ಹೀಗೆ ನಡೆದಳು!

  ಮೂಲತಃ ಮಲ್ಲೇಶ್ವರದ ಅಯ್ಯರ್‌ ಕುಟುಂಬದ ಹುಡುಗಿ ವಿಜಯಲಕ್ಷ್ಮಿಯನ್ನು ನಾಯಕಿಯಾಗಿ ಗುರುತಿಸಿದ್ದು ರವಿಚಂದ್ರನ್‌. ‘ಕಾಲೇಜ್‌’ ಎಂಬ ಚಿತ್ರಕ್ಕೆ ಶಾಶ್ವತ ಬಾಲ ನಟ ಬಾಲಾಜಿ ಹೀರೋ ಆಗಬೇಕು, ಅದಕ್ಕೆ ವಿಜಯಲಕ್ಷ್ಮಿ ನಾಯಕಿಯಾಗಬೇಕು ಅಂತ ನಿರ್ಧರಿಸಿದ್ದರು ರವಿ. ಆದರೆ ಆರು ವರ್ಷವಾದರೂ ಬಾಲಾಜಿ ಬೆಳೆದು ‘ಕಾಲೇಜ್‌’ ಮೆಟ್ಟಿಲು ಹತ್ತಲಿಲ್ಲ. ವಿಜಯಲಕ್ಷ್ಮಿ ಯಾವ ಚಿತ್ರದಲ್ಲೂ ನಟಿಸಲಿಲ್ಲ.

  ಮುಂದೆ ನಾಗಾಭರಣ ಕರೆದು ‘ನಾಗಮಂಡಲ’ದಲ್ಲಿ ಅವಕಾಶ ಕೊಟ್ಟರು. ಪ್ರತಿಭೆಗೆ ಮನ್ನಣೆ ದೊರೆತು ಹೆಸರು ಬಂತು. ಮಲ್ಲೇಶ್ವರದಿಂದ ಮನೆ ಇಂದಿರಾನಗರಕ್ಕೆ ಷಿಫ್ಟಾಯಿತು. ವಿಜಯಲಕ್ಷ್ಮಿಯಲ್ಲಿ ಟ್ಯಾಲೆಂಟು ಗುರುತಿಸಿದ ಪತ್ರಕರ್ತರು ಆಕೆಯನ್ನು ಸ್ವಾಭಿಮಾನಿ ಅಂದರು. ವಿಜಿ ಅದನ್ನು ನಂಬಿಕೊಂಡಳು. ‘ಏನೇ ಅನ್ನಿಸಿದರೂ ಮುಖಕ್ಕೆ ಹೇಳುತ್ತಾಳೆ’ ಅಂತ ಬರೆದರು. ಬರೆದವರ ಮುಖ-ಇತ್ಯಾದಿಗಳಿಗೇ ಅದನ್ನವಳು ಹೇಳತೊಡಗಿದಳು.

  ಆತ್ಮಾಭಿಮಾನವೆಂಬುದು ದುರಹಂಕಾರದ ಮಟ್ಟಕ್ಕೆ ಬೆಳೆದು, ಹೋದಲ್ಲೆಲ್ಲ ಜಗಳ ಮಾಡತೊಡಗಿದಳು. ದೇವಯ್ಯ ಪಾರ್ಕಿನಲ್ಲಿ ‘ರಂಗಣ್ಣ’ ಶೂಟಿಂಗ್‌ ನಡೆಯುತ್ತಿದ್ದಾಗ ಜಗ್ಗೇಶ ಅಡ್ಡಾದಿಡ್ಡಿ ವರ್ತಿಸಿದನೆಂದು ಆರೋಪಿಸಿ ‘ಜಗ್ಗೇಶ್‌ಗೆ ಚಪ್ಲೀಲಿ ಹೊಡೀತೀನಿ’ ಅಂದಳು.

  ಅವತ್ತಿನಿಂದ ಇಂಡಸ್ಟ್ರಿ ಅವಳನ್ನು ‘ಚಪ್ಲಿ ವಿಜಿ’ ಅನ್ನತೊಡಗಿತು. ಜಗ್ಗೇಶ್‌ ಸಿನಿಮಾದಲ್ಲಿ ನಾಯಕಿ ಅಲ್ಪ ಸ್ವಲ್ಪವಾದರೂ ಬಟ್ಟೆ ಬಿಚ್ಚುವುದು ಅನಿವಾರ್ಯ. ಇಲ್ಲದಿದ್ದರೆ ಇಡೀ ಸಿನಿಮಾ ಜಗ್ಗೇಶ್‌ನನ್ನೇ ನೋಡೋದಾದರೂ ಹ್ಯಾಗೆ? ಆದರೆ ‘ಬಿಚ್ಚು’ ಅಂದ ಕೂಡಲೆ ವಿಜಿ ಬಿಚ್ಚುತ್ತಿದ್ದುದು ಚಪ್ಪಲಿಯನ್ನೇ. ಹೀಗಾಗಿ ‘ರಂಗಣ್ಣ’ ತೋಪಾಯಿತು. ಜಗ್ಗೇಶ್‌ ಇನ್ನೊಂದು ಸಿನಿಮಾ ಸೋಲುವತನಕ ವಿಜಿಯನ್ನೇ ಶಪಿಸುತ್ತ ಓಡಾಡಿದ.

  ಆನಂತರದ ಸರದಿ ಬಿ.ಸಿ.ಪಾಟೀಲರದು. ಕೌರವನ ಪಾತ್ರ ಮಾಡುತ್ತಾರಾದರೂ, ದುಡ್ಡು ಕೊಡುವ ವಿಷಯಕ್ಕೆ ಬಂದಾಗ ಎಂಥವರಿಗೂ ಕೈಯೆತ್ತುವ ಜಿಪುಣಾಗ್ರೇಸರರಾಗುತ್ತಾರೆ ಕೌರವೇಶ್ವರ ಪಾಟೀಲ್‌. ಅವರನ್ನು ಚೇಂಬರಿನತನಕ ಎಳೆದೊಯ್ದು ಬುದ್ಧಿ(?) ಕಲಿಸಿ ತೊಂಬತ್ತು ಸಾವಿರ ಕಕ್ಕಿಸಿದವಳು ಇದೇ ವಿಜಯಲಕ್ಷ್ಮಿ. ಉಳಿದವರೆಲ್ಲ ‘ಗುಡ್‌ಗರ್ಲ್‌’ ಅಂದರು. ಅದರಿಂದಾಗಿ ಆಕೆಯ ತಲೆ ಮತ್ತೂ ತಿರುಗಿತು. ಅದಕ್ಕಿಂತ ಹೆಚ್ಚಾಗಿ ಆಕೆಯ ತಂದೆಯ ತಲೆ ತಿರುಗಿತು. ಎರ್ರಾಬಿರ್ರಿ ಸಂಭಾವನೆ ಕೇಳತೊಡಗಿದರು. ‘ಕಥೆ ಹೀಗೇ ಇರಬೇಕು’ ಅಂತ ವಿಜಿ ಆಜ್ಞಾಪಿಸತೊಡಗಿದಳು.

  ಸಂದೇಶ್‌ ನಾಗರಾಜ್‌ ವಿಷಯದಲ್ಲೂ ಜಗಳವಾಯಿತು. ಎಲ್ಲೋ ಒಂದು ಕಡೆ ಇಂಡಸ್ಟ್ರಿಯ ಸ್ಟುಪಿಡಿಟಿಯನ್ನು ಭರಿಸಲಾಗದಷ್ಟು ವಿಜಯಲಕ್ಷ್ಮಿ ಸೆನ್ಸಿಟಿವ್‌ ಆದಳು. ಇಂಡಸ್ಟ್ರಿಗೆ, ಆಕೆ ಸೆನ್ಷುಯಸ್‌ ಆಗಿದ್ದರೆ ಸಾಕಿತ್ತು. ಕಡೆಗೆ ಈ ಜಗಳದಿಂದಾಗಿ ಕನ್ನಡದಲ್ಲಿ ವಿಜಯಲಕ್ಷ್ಮಿಗೆ ಅವಕಾಶಗಳಿಲ್ಲದಂತಾಗಿ ತಮಿಳಿಗೆ ಹೋದಳು. ಅಲ್ಲೇನಾಯಿತೋ ಭಗವಂತ ಬಲ್ಲ ; ‘ಬಂಬೇ’ ಥರದ ಗೇಮ್‌ ಶೋಗಳಿಗೆ ಕೆಲಸ ಮಾಡತೊಡಗಿದಳು.

  ಈಗ ನೋಡಿದರೆ ಮಾತ್ರೆ ನುಂಗಿದ್ದಾಳೆ.

  ಯಾಕ್ಹಿಂಗಾಡ್ತಾಳೋ?

  (ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

  Post your views

  ಆತ್ಮಹತ್ಯೆ ಸುತ್ತಮುತ್ತ(ಭಾಗ-1)

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more