»   » ಲಂಕೇಶ್‌ ಪುತ್ರ ಇಂದ್ರಜಿತ್‌ನ ‘ಲಂಕೇಶ್‌ ಪತ್ರಿಕೆ’

ಲಂಕೇಶ್‌ ಪುತ್ರ ಇಂದ್ರಜಿತ್‌ನ ‘ಲಂಕೇಶ್‌ ಪತ್ರಿಕೆ’

Posted By: Super
Subscribe to Filmibeat Kannada

ಲಂಕೇಶ್‌ ಪುತ್ರ ಇಂದ್ರಜಿತ್‌ ಎರಡೆರಡು ಸಿಹಿ ತಿನ್ನುತ್ತಿದ್ದಾರೆ : ಒಂದು 'ತುಂಟಾಟ"ದ ಸಂಭ್ರಮಕ್ಕೆ, ಮತ್ತೊಂದು ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾದ ಸಿದ್ಧತೆಯ ಖುಷಿಗೆ.

'ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ" ಎಂಬ ಬಿ.ರಾಮಮೂರ್ತಿ ನಿರ್ದೇಶನದ ಹೊಸ ಚಿತ್ರದ ನಾಯಕ ಇಂದ್ರಜಿತ್‌ ಎಂಬ ಸುದ್ದಿ ಸ್ಯಾಂಡಲ್‌ವುಡ್‌ ವಲಯಗಳಲ್ಲಿ ಪ್ರತಿಧ್ವನಿಸುತ್ತಿದ್ದರೂ, ಇಂದ್ರಜಿತ್‌ ಈ ಬಗ್ಗೆ ಮುಗುಮ್ಮಾಗಿದ್ದಾರೆ. ಅವರ ಸದ್ಯದ ಕೆಲಸ ಏನಿದ್ದರೂ 'ಲಂಕೇಶ್‌ ಪತ್ರಿಕೆ"ಯ ಉದ್ಧಾರದಲ್ಲಿ. ಅಂದಹಾಗೆ, ಅವರ ನಿರ್ದೇಶನದ ಹೊಸ ಚಿತ್ರದ ಹೆಸರೂ ಇದೇ!

'ತುಂಟಾಟ" ಯಾರಿಗೆ ಬ್ರೇಕ್‌ ಕೊಡದಿದ್ದರೂ, ಇಂದ್ರಜಿತ್‌ ಪಾಲಿಗಂತೂ ವರದಾನವಾಗಿದೆ. ನಿರ್ಮಾಪಕರು ಥೈಲಿ ಹಿಡಿದು ಇಂದ್ರಜಿತ್‌ ಮುಂದೆ ಬಂದು ನಿಲ್ಲುತ್ತಿರುವುದೂ ಸುಳ್ಳಲ್ಲ. ತುಂಟಾಟದ ಕೆಲಸ ಮುಗಿದ ನಂತರ ಸೀರಿಯಸ್ಸಾಗಿ ಕತೆ ಬರೆಯಲು ಕೂತ ಇಂದ್ರಜಿತ್‌ಗೆ ಹೊಳೆದ ಸಬ್ಜೆಕ್ಟು ಪತ್ರಿಕೋದ್ಯಮ ಹಾಗೂ ಪ್ರಚಲಿತ ವಿದ್ಯಮಾನಗಳು. ಅಪ್ಪ ಲಂಕೇಶ್‌ ಪಟ್ಟ ಪಡಿಪಾಟಲನ್ನು ಬಾಲ್ಯದಿಂದಲೇ ಇಂದ್ರಜಿತ್‌ ಕಂಡುಂಡಿದ್ದಾರೆ. ಖುದ್ದು ಪತ್ರಿಕೋದ್ಯಮದಲ್ಲಿ ಪಳಗಿರುವ ಕೈಗಳೂ ಇವರದ್ದು.

ಸದ್ಯಕ್ಕೆ ಇಂಗ್ಲೆಂಂಡಿನಲ್ಲಿರುವ ಜ್ಞಾನಪೀಠಿಗ ಗಿರೀಶ್‌ ಕರ್ನಾಡ್‌ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತಕ್ಕೆ ಮರಳಲಿದ್ದು, ಅವರು ಬಣ್ಣ ಹಚ್ಚಿ 'ಲಂಕೇಶ್‌" ಆಗಿ ಅಭಿನಯಿಸಲಿದ್ದಾರೆ. ಚಿತ್ರದ ನಾಯಕ ಶಿವರಾಜ್‌ಕುಮಾರ್‌. ದುಡ್ಡು ಹಾಕಲು ನಾ ಮುಂದು ತಾಮುಂದು ಎಂದು ಬಂದವರ ಪೈಕಿ ಭಾಗ್ಯ ಒಲಿದಿರುವುದು ಕನಕಪುರ ಶ್ರೀನಿವಾಸ್‌ ಅವರಿಗೆ. 'ಲಂಕೇಶ್‌ ಪತ್ರಿಕೆ" ಸಿನಿಮಾ ಗೆಲ್ಲುವುದೋ ಅಥವಾ ಪತ್ರಿಕೆಯ ಸರ್ಕ್ಯುಲೇಷನ್ನಿನಂತೆ ಕುಸಿಯುವುದೋ ಎಂಬುದರ ಮೇಲೆ ಇಂದ್ರಜಿತ್‌ ಸಿನಿಮಾ ಭವಿತವ್ಯ ನಿಂತಿದೆ.

English summary
Girish Karnad to play Lankesh in the coming film Lankesh Patrike by P.L.Indrajit

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada