»   » ‘ಠಾಗೂರ್‌’ ಮೊದಲದಿನದ ಗಳಿಕೆ 8 ಕೋಟಿ

‘ಠಾಗೂರ್‌’ ಮೊದಲದಿನದ ಗಳಿಕೆ 8 ಕೋಟಿ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಸ್ಯಾಂಡಲ್‌ವುಡ್‌ನಲ್ಲಿ ಐವತ್ತು ದಿನ ಓಡಿ, ತೆವಳುವ ಚಿತ್ರಗಳ ತಳ್ಳಲು ರಾಡಿ ಎರಚಾಡುತ್ತಿರುವ ಈ ಹೊತ್ತಿನಲ್ಲಿ ಪಕ್ಕದೂರಿನ ಚಿರಂಜೀವಿ ಚಿತ್ರ ತೆಕ್ಕೆಯಲ್ಲಿ ದುಡ್ಡು ಬಾಚುತ್ತಿರುವ ಸುದ್ದಿ ಬಂದಿದೆ.

ಚಿರಂಜೀವಿ ನಿರ್ಮಿಸಿ, ನಟಿಸಿರುವ ‘ಠಾಗೂರ್‌’ ಚಿತ್ರದ ಮೊದಲ ದಿನದ ಗಳಿಕೆ ಬರೋಬ್ಬರಿ 8 ಕೋಟಿ ರುಪಾಯಿ. ಇದು ದಕ್ಷಿಣ ಭಾರತ ಚಿತ್ರಗಳಲ್ಲೇ ಈವರೆಗಿನ ದಾಖಲೆ ಗಳಿಕೆ. ದಕ್ಷಿಣ ಭಾರತದ 430 ಚಿತ್ರಮಂದಿರಗಳಲ್ಲಿ 300 ಪ್ರಿಂಟ್‌ಗಳು ಪ್ರದರ್ಶಿತಗೊಳ್ಳುತ್ತಿರುವುದು ಚಿರಂಜೀವಿ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತಿದೆ.

ಈ ಚಿತ್ರದಲ್ಲಿ ಅಂಥಾದ್ದೇನಿದೆ?
ಜನರೆಲ್ಲರೂ ಜರೆದರೂ, ಅದರೊಳಗೇ ಒಂದಾಗುತ್ತಿರುವ ಲಂಚಾವತಾರ. ಚಿತ್ರದಲ್ಲಿ ಚಿರಂಜೀವಿ ಒಬ್ಬ ಲೆಕ್ಚರರ್‌. ಲಂಚಗುಳಿಗಳ ಮಟ್ಟ ಹಾಕುವ ಸಂಕಲ್ಪ ಮಾಡುತ್ತಾನೆ. ಅದಕ್ಕೆ ತನ್ನದೇ ಆದ ರಫ್‌ ಅಂಟ್‌ ಟಫ್‌ ನಡೆ ತೋರುತ್ತಾನೆ. ಈ ನಡೆ ದೊಡ್ಡ ಹೋರಾಟವಾಗುತ್ತದೆ. ವಿದ್ಯಾರ್ಥಿಗಳೆಲ್ಲಾ ಭ್ರಷ್ಟಾಚಾರ ಮಟ್ಟಾ ಹಾಕಲು ಟೊಂಕ ಕಟ್ಟುವಂತಾಗುತ್ತೆ. ಈ ಹೋರಾಟದಲ್ಲೇ ಸಾಥಿಯಾಗುವ ನಾಯಕಿ (ನಗ್ಮಾ) ಜೊತೆ ಡ್ಯುಯೆಟ್ಟು. ನಿಜ ಜೀವನದಲ್ಲಿ ನಗ್ಮಾ ತಂಗಿಯಾಗಿರುವ ಜ್ಯೋತಿಕಾ, ಚಿತ್ರದಲ್ಲಿ ಚಿರಂಜೀವಿ ತಂಗಿ.

ಚಿತ್ರದಲ್ಲಿ ಚಿರಂಜೀವಿ ಜನರ ಪಲ್ಸ್‌ಗೆ ತಕ್ಕಂಥ ಸರಕನ್ನು ತುಂಬಿದ್ದಾರೆ. ಸಾಲದ್ದಕ್ಕೆ ಸಾಕಷ್ಟು ಪ್ರಚಾರ, ಅಭಿಮಾನಿಗಳ ಅಬ್ಬರದಿಂದ ಚಿತ್ರಕ್ಕೆ ಭಾರೀ ಓಪನಿಂಗ್‌ ಸಿಕ್ಕಿತು. ಬಿಡುಗಡೆಯ ದಿನವೇ ಇಬ್ಬರು ಸತ್ತರು. ಆರು ಕುರಿಗಳನ್ನು ಚಿರಂಜೀವಿ ಕಟೌಟ್‌ಗೆ ಬಲಿ ಕೊಡಲಾಯಿತು. ಪೊಲೀಸರು 22 ಚಿತ್ರಮಂದಿರಗಳ ಹತ್ತಿರ ಗಾಳಿಯಲ್ಲಿ ಗುಂಡುಹಾರಿಸಿ ಚಿರಂಜೀವಿ ಅಭಿಮಾನಿಗಳ ಆವುಟ ನಿಲ್ಲಿಸಬೇಕಾಯಿತು. ಅಷ್ಟೇ ಅಲ್ಲದೆ ತಮ್ಮ ಚಿತ್ರ ನೋಡಲು ಬಂದು, ನೂಕುನುಗ್ಗಲಲ್ಲಿ ಸತ್ತ ಇಬ್ಬರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿ ಪರಿಹಾರವನ್ನೂ ಚಿರಂಜೀವಿ ಕೊಟ್ಟಿದ್ದು ಭಾರೀ ಸುದ್ದಿಯಾಯಿತು. ಇವತ್ತಿಗೂ ಚಿತ್ರ ಪ್ರದರ್ಶನಕ್ಕೆ ಗಂಟೆ ಮುನ್ನವೇ ಹೌಸ್‌ಫುಲ್‌ !

ಚಿರಂಜೀವಿ ಚಿತ್ರರಂಗಕ್ಕೆ ಬಂದು 25 ವರ್ಷಗಳು ಪೂರೈಸಿರುವುದು ಈ ಸಂಭ್ರಮದ ಬೆಂಕಿಗೆ ಸುರಿದ ತುಪ್ಪ. ಇಷ್ಟೆಲ್ಲ ಸದ್ದು ಮಾಡುತ್ತಿರುವ ಮೆಗಾಸ್ಟಾರ್‌ ರಾಜಕೀಯಕ್ಕೆ ವೇದಿಕೆ ಹಾಕಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಚಿರಂಜೀವಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿರುವ ಗುಲ್ಲು ಒಂದೆಡೆಯಾದರೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯಸಭೆಯಲ್ಲಿ ಚಿರಂಜೀವಿಗೆ ಸ್ಥಾನ ಕೊಡುವ ಯೋಚನೆ ಮಾಡುತ್ತಿದ್ದಾರೆ ಎಂಬ ಗುಸುಗುಸು ಇನ್ನೊಂದು ಕಡೆ. ಒಟ್ಟಿನಲ್ಲಿ ನಿರ್ಮಾಪಕರಾಗಿ ಚಿರಂಜೀವಿ ಅನೇಕರು ಮೆಚ್ಚುವಂಥ ಕೆಲಸ ಮಾಡಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada