»   » ಕನ್ಯತ್ವ ; ತಾರೆಯರ ಮೇಲೇಕೆ ಸಂಶಯ ?

ಕನ್ಯತ್ವ ; ತಾರೆಯರ ಮೇಲೇಕೆ ಸಂಶಯ ?

Posted By:
Subscribe to Filmibeat Kannada
  • ಮಹೇಶ್‌ ದೇವಶೆಟ್ಟಿ
‘ಎಲ್ಲಾ ಸಿನಿಮಾ ನಟಿಯರೂ ಕನ್ಯತ್ವ ಕಳೆದುಕೊಂಡಿರುತ್ತಾರೆ ಎಂಬುದು ಶುದ್ಧ ಸುಳ್ಳು’.

ತಾರಾ ಈ ಮಾತನ್ನು ಹೇಳುವಾಗ ಯಾವುದೇ ಉದ್ವೇಗಕ್ಕೆ ಒಳಗಾಗಲಿಲ್ಲ. ಇನ್ನಾರದೋ ಮೇಲಿನ ಆಕ್ರೋಶವೂ ಇಲ್ಲಿ ವ್ಯಕ್ತವಾಗಲಿಲ್ಲ. ಆದರೆ ಸಾಮಾನ್ಯವಾಗಿ ಎಲ್ಲರೂ ಆರೋಪಿಸುವ ಸಂಗತಿಯನ್ನು ನಿರಾಕರಿಸುವ ಖಚಿತತೆ ಇತ್ತು. ನಟಿಯಾಗುವ ಮುನ್ನ ಎಲ್ಲರೂ ಸಾಮಾನ್ಯ ಹುಡುಗಿಯರೇ ಆಗಿರುತ್ತಾರೆ ಎನ್ನುವ ಅಭಿಪ್ರಾಯವಿತ್ತು. ಹೀಗೆಂದು ಹೇಳುವಾಗ ಅವರು ತಮ್ಮನ್ನು ತಾವು ದೇವತೆ ಎಂದೇನು ಹೇಳಿಕೊಳ್ಳಲಿಲ್ಲ. ಅಂತಹ ಪಟ್ಟಿ ಅವರಿಗೆ ಬೇಕಾಗೂ ಇಲ್ಲ. ತಾರೆಯರ ಮದುವೆಗಿರುವ ಅಡೆತಡೆ ಬಗ್ಗೆ ಮಾತಾಡಿಸಿದಾಗ, ವ್ಯಕ್ತಪಡಿಸಿದ ಮೊದಲ ಭಾವವಿದು.

ಯಾಕೆಂದರೆ ತಾರಾ ಒಂದು ಹುಡುಗಿಯಾಗಿಯೇ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದವರು. ಒಂದು ವಯಸ್ಸಿನ ಹುಡುಗಿಗೆ ಇರಬೇಕಾದ ಕನಸು, ಆಸೆಗಳನ್ನು ಹೊತ್ತುಕೊಂಡೆ ಮುಖಕ್ಕೆ ಬಣ್ಣ ಹಚ್ಚಿದವರು. ಆತ್ಮೀಯ ನೋಟ ಬೀರಿದ ಹುಡುಗನನ್ನು ನೋಡಿ ‘ಇವನೇ ನನ್ನ ಗಂಡನಾದರೆ ಚೆನ್ನಾಗಿರುತ್ತದಲ್ವಾ?’ ಎಂದು ಪ್ರಶ್ನಿಸಿಕೊಳ್ಳುತ್ತಲೇ ಕ್ಯಾಮರಾ ಎದುರು ನಿಂತವರು. ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಬಂದ ಮೂರ್ನಾಲ್ಕು ಹುಡುಗರು ಯಾವ್ಯಾವುದೊ ಕಾರಣಕ್ಕೆ ಇಷ್ಟವಾಗದಿದ್ದಾಗ ಬೇಸರ ಪಟ್ಟುಕೊಂಡವರು. ಅದೆಲ್ಲಾ ಹರೆಯ ಚಿಗುರೊಡೆದ ಕಾಲದ ಕತೆ.

ಆವರೀಗ ಮೊದಲಿನಂತಿಲ್ಲ. ಮೊದಲಿನಂತಿರಲು ಸಾಧ್ಯವೂ ಇಲ್ಲ. ಮನಸು ಪಕ್ವವಾಗಿದೆ. ವಿಚಾರ ಹರಿತವಾಗಿದೆ. ಬದುಕಿಗೊಂದು ಸ್ಪಷ್ಟತೆ ಬಂದಿದೆ. ಆದರೆ ಪೂರ್ಣತೆ? ಅದು ನಮಗಷ್ಟೇ ಅಲ್ಲ, ಅವರಿಗೂ ಒಂದು ಪ್ರಶ್ನೆಯಾಗಿಯೇ ಉಳಿದಿದೆ. ಹಾಗಂತ ಮದುವೆಯಾದರಷ್ಟೇ ಪೂರ್ಣತೆ ದೊರೆಯುತ್ತದೆ ಎನ್ನುವ ಮಾತಿನಲ್ಲಿ ಇವರಿಗೆ ವಿಶ್ವಾಸವಿಲ್ಲ. ಜತೆಗೆ ಮದುವೆಯಾಗಬಾರದೆನ್ನುವ ವೈರಾಗ್ಯವೂ ಬಂದಿಲ್ಲ. ಎಲ್ಲವೂ ಮಸುಕು ಮಸುಕಾಗಿದೆ. ತಮ್ಮೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟವರು ಮಕ್ಕಳೊಂದಿಗೆ ವಾಕಿಂಗ್‌ ಹೊರಟಾಗ, ಎದೆಯ ಮೂಲೆಯಲ್ಲೆಲ್ಲೊ ಆಸೆ ಫಸಲು ಹಸಿರಿಗೆ ತಿರುಗುತ್ತದೆ. ಅದೇ ಹೊತ್ತಿಗೆ ವಿಚ್ಛೇದನ ಪಡೆದ ನಟಿಯರ ಮುಖ ನೆನಪಿಗೆ ಬಂದಾಗ ಪ್ರೇಮದ ಸೌಧದಡಿಯಲ್ಲಿ ತೆಳ್ಳನೆಯ ಬಿರುಕು.

ಇದೆಲ್ಲಾ ಗೊಂದಲಗಳ ನಡುವೆ ತಾರಾ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಾರೆ. ‘ನಾನು ಮದುವೆಯಾದರೆ ಯಾವತ್ತೂ ಡೈವರ್ಸ್‌ ಮಾಡುವುದಿಲ್ಲ. ಏನೇ ಆದರೂ ಗಂಡ-ಹೆಂಡತಿ ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸುತ್ತೇನೆ’.

ಒಂದು ಹುಡುಗಿ ಮುಖಕ್ಕೆ ಬಣ್ಣ ಹಚ್ಚಿದರೆ ಸಾಕು. ನಮ ್ಮಜನ ಅವಳ ಕತೆಯನ್ನು ಮುಗಿಸಿ ಬಿಡುತ್ತಾರೆ. ಹತ್ತಾರು ಗಂಡುಗಳ ಜತೆ, ಹತ್ತಾರು ಹುಡುಗರೊಂದಿಗೆ ನಟಿಸುವ ಆಕೆ ‘ಪ್ಯೂರ್‌’ ಆಗಿರಲು ಸಾಧ್ಯವಿಲ್ಲ ಎಂದು ಷರಾ ಬರೆದು ಬಿಡುತ್ತಾರೆ. ಅಂಥವರನ್ನು ಮದುವೆಯಾಗುವುದೆಂದರೆ ಪಾಪವೆಂದು ತೀರ್ಮಾನಿಸಿ ಬಿಡುತ್ತಾರೆ. ಆದರೆ ಎಲ್ಲರಿಗೂ ಇದೇ ಮಾತು ಅನ್ವಯವಾಗುವುದಿಲ್ಲ ಅಲ್ಲವೇ?

ನಾನು ಇದುವರೆಗೆ ನೂರಾ ಐವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಎಷ್ಟೋ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ಇನ್‌ವಾಲ್ವ್‌ ಆಗಿದ್ದೇನೆ. ನಿಜ ಹೇಳಬೇಕೆಂದರೆ ಅಂತಹ ದೃಶ್ಯಗಳಲ್ಲಿ ನಟಿಸುವಾಗ ನನಗೆ ಏನೆಂದರೆ ಏನೂ ಅನ್ನಿಸುವುದೇಯಿಲ್ಲ. ಬರ್ತಾ ಬರ್ತಾ ನಮಗೆ ಸ್ಪರ್ಶಜ್ಞಾನವೇ ಇರುವುದಿಲ್ಲ. ನಮ್ಮ ಜತೆಗೆ ನಟಿಸುವವರೂ ಮದುವೆಯಾಗಿರುತ್ತಾರೆ. ಮಕ್ಕಳಾಗಿರುತ್ತವೆ. ಹೀಗಿರುವಾಗ ಪರಸ್ಪರ ಮೈ ಮುಟ್ಟಿದಾಗ ಯಾವುದೇ ಭಾವನೆ ಸ್ಫುರಿಸುವುದಿಲ್ಲ. ಆದರೆ ಅದನ್ನು ನೋಡುವ ಜನರಿಗೆ ಅದೊಂದು ರೊಮ್ಯಾಂಟಿಕ್‌ ದೃಶ್ಯ. ಅದೇ ರೀತಿ ಗಂಡನಾದವನು ಒಬ್ಬ ಪ್ರೇಕ್ಷಕನೇ. ಅಂತಹ ದೃಶ್ಯಗಳನ್ನು ನೋಡಿದಾಗ ಆತ ಅಂದುಕೊಳ್ಳುತ್ತಾನೆ; ಇಷ್ಟೆಲ್ಲಾ ಮಾಡಿದವಳಿಗೆ ಏನೂ ಅನ್ನಿಸೋದೆಯಿಲ್ವ? ನನ್ನ ಜತೆ ರೊಮಾನ್ಸ್‌ ಮಾಡುವಾಗ ಅದೆಲ್ಲಾ ನೆನಪಾಗುವುದಿಲ್ಲವಾ? ನನ್ನ ಗಂಡನಾಗುವವನು ನಟನಾಗಿದ್ದರೆ ನಾನೂ ಹಾಗೆ ಯೋಚನೆ ಮಾಡುತ್ತಿದ್ದೆನೇನೊ. ಆದರೆ ಅದು ತಪ್ಪು. ಅದಕ್ಕೆ ಪರಸ್ಪರ ಒಪ್ಪುವ ವಿಶಾಲ ಮನಸು ಬೇಕು.

ಇದನ್ನವರು ಸುಮ್ಮನೇ ಹೇಳುತ್ತಿಲ್ಲ. ಇದುವರೆಗಿನ ಬದುಕಿನಲ್ಲಿ ಎಷ್ಟೋ ವಿಷಯ ಕೇಳಿದ್ದಾರೆ. ಅವುಗಳ ಬಗ್ಗೆ ಗೆಳತಿಯರೊಂದಿಗೆ ಚರ್ಚಿಸಿದ್ದಾರೆ. ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಾರೆ. ತಕ್ಕಮಟ್ಟಿಗೆ ಉತ್ತರ ಕಂಡುಕೊಂಡಿದ್ದಾರೆ. ಅದಕ್ಕೆ ಮಾತಿನ ರೂಪ ಕೊಟ್ಟಿದ್ದಾರೆ. ಆದರೆ ಚಿತ್ರರಂಗ ತಮ್ಮನ್ನು ಪ್ರೀತಿಯಿಂದ ನಡೆಸಿಕೊಂಡ ಬಗೆಗೆ ತಾರಾಗೆ ಕೃತಜ್ಞತೆಯಿದೆ. ಇದುವರೆಗೆ ನನ್ನನ್ನು ಎಲ್ಲರೂ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಗೌರವದಿಂದ ಕಂಡಿದ್ದಾರೆ ಎನ್ನುತ್ತಾರೆ ತಾರಾ.

ಅಂದಹಾಗೆ, ನಟಿಯರನ್ನು ಜನ ಕೀಳೋದು ಕಾಣೋದು ಯಾಕೆ ? ಅದು ನಟಿಯರ ತಪ್ಪಾ ? ಅಥವಾ ನೋಡುವ ಮನಸ್ಸುಗಳ ವಿಕಾರವಾ ?

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada