ಶಂಕರ ಹೋಗಿ ಹದಿನೈದು ವರ್ಷ!
- ದಟ್ಸ್‌ಕನ್ನಡ ಸಿನಿ ಡೆಸ್ಕ್
ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲ’ದಲ್ಲಿ ಚಿತ್ರದ ಮೂಲಕ ಚಲನಚಿತ್ರದ ರಂಗಪ್ರವೇಶ. ಆದರೆ ಅಭಿನಯವೇನೂ ಆತನಿಗೆ ಹೊಸತಾಗಿರಲಿಲ್ಲ. ಮುಂಬಯಿಯಲ್ಲಿರುವಾಗಲೇ ರಂಗಭೂಮಿ ಆತನನ್ನು ಕೈಬೀಸಿ ಕರೆದಿತ್ತು. ಆಗ ಅಣ್ಣ ಅನಂತ್‌ನಾಗ್ ಬ್ಯಾಂಕ್ ಅಧಿಕಾರಿಯಾಗಿದ್ದ. ಆತನೂ ಸಹ ಹವ್ಯಾಸಿ ರಂಗ ಕಲಾವಿದ ಆಗಿದ್ದವ. ಕಾರವಾರ ಜಿಲ್ಲೆ, ಕುಮಟಾ ತಾಲ್ಲೂಕಿನ ನಾಗರಕಟ್ಟೆಯ ಶಂಕರ, ಅವಕಾಶ ಅರಸಿಕೊಂಡು ಮುಂಬಯಿ ನಗರಿಯತ್ತ ಪಯಣ ಬೆಳೆಸಿದ.
ನಾಗರಕಟ್ಟೆ ಯ ನಾಗ : ಅಲ್ಲಿ ಶಂಕರ, ತನ್ನ ಹೆಸರಿನ ಮುಂದೆ ನಾಗರಕಟ್ಟೆ ಎಂದು ಸೇರಿಸಿಕೊಂಡಿದ್ದ. ಅಲ್ಲಿಯ ಜನರಿಗೆ ಶಂಕರ ನಾಗರಕಟ್ಟೆ ಅನ್ನಲು ತಡಕಾಡುತ್ತಿದ್ದರು. ನಾಗರಕಟ್ಟೆ ಅವರ ಬಾಯಲ್ಲಿ ನಗರಕತ್ತೆ ಆಗಿದ್ದಂತೆ! ಈ ಅವಾಂತರಗಳಿಂದ, ಆನಂತರ ತನ್ನ ಹೆಸರಮುಂದೆ ಕೇವಲ ನಾಗ್ ಎಂದಷ್ಟೇ ಸೇರಿಸಿಕೊಂಡು, ಶಂಕರ್‌ನಾಗ್ ಆದ. ಕಲಾಪ್ರೇಮ ವಾಪಸು ತಾಯ್ನಾಡಿಗೆ ಬರುವಂತೆ ಶಂಕರ್‌ನಾಗ್‌ಗೆ ಮಾಡಿತು. ಅಷ್ಟೇ ಅಲ್ಲದೇ ಚಿತ್ರರಸಿಕರ ನೆಚ್ಚಿನ ತಾರೆಯರನ್ನಾಗಿ ಮಾಡಿತು.
ಮೊದಲ ಚಿತ್ರದಲ್ಲೇ ಗಮನಾರ್ಹ ಅಭಿನಯ ತೋರಿದ ಶಂಕರ್, ಮುಂದೆ ಚಿತ್ರರಂಗದ ಮಹಾತಾರೆಯಾಗಿ ಬೆಳೆದು ನಿಂತದ್ದು ಸೋಜಿಗವೇನಲ್ಲ. ಕೇವಲ ಚಿತ್ರನಟನಾಗಿ ಮಾತ್ರ ಶಂಕರ್ ಉಳಿಯಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಕನಸುಗಾರನಾಗಿ, ಸಮಾಜಮುಖಿಯಾಗಿ, ನನಸುಗಾರನಾಗಿ ಬೆಳೆದ. ಚಿತ್ರರಂಗದ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ, ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅಪೂರ್ವ ಕ್ರಿಯಾಶೀಲ. ಕಲೆಯ ಉತ್ಕರ್ಷದ ಬಗ್ಗೆ ಚಿಂತಿಸುತ್ತಲೇ, ಕಲಾವಿದರ ಬದುಕು-ಬವಣೆಗಳಿಗೆ ಸ್ಪಂದಿಸಿದವ.
ರೀ, ಕನಸುಗಾರ ಅಂದ್ರೆ ಇವುನು! : ದುಡ್ಡಿನ ಹಪಾಹಪಿ ಅವನ ಬಳಿ ಎಂದೂ ಸುಳಿಯಲಿಲ್ಲ. ಬಂದದ್ದೆಲ್ಲವನ್ನೂ ಸದ್ವಿನಿಯೋಗಕ್ಕೆ ದೊರೆತ ಸದವಕಾಶ ಎಂದು ಬಗೆದವ. ‘ಆ್ಯಕ್ಸಿಡೆಂಟ್’, ‘ಮಿಂಚಿನ ಓಟ’, ‘ಒಂದು ಮುತ್ತಿನ ಕತೆ’ ಚಿತ್ರಗಳಿಂದ ಮಿಂಚಿನ ಸಂಚಾರ ಸೃಷ್ಟಿಸಿದವ. ಡಾ.ರಾಜ್‌ಕುಮಾರ್ ಜೊತೆಯಲ್ಲಿ ಇಷ್ಟಪಟ್ಟು ‘ಅಪೂರ್ವ ಸಂಗಮ’ದಲ್ಲಿ ಕಾಣಿಸಿಕೊಂಡವ. ‘ಆಟೋರಾಜ’ ಚಿತ್ರದಲ್ಲಿ ನಾಯಕನ ವಿಶಿಷ್ಟ ಗುಣ ಮೆರೆದು, ಎಂದೆಂದಿಗೂ ಆಟೋ ಡ್ರೆೃವರುಗಳ ಆರಾಧ್ಯದೈವವಾದವ. ಕಷ್ಟದಲ್ಲಿರುವವರಿಗೆ ಸದಾ ನೆರವು ನೀಡಿದ ಕರುಣಾಮಯಿ. ಎಲ್ಲರೊಡನೆಯೂ ಆಪ್ತವಾಗುತ್ತಿದ್ದ ಸಹೃದಯಿ, ಸ್ನೇಹಶೀಲ. ಯಾರೊಡನೆಯೂ ವೈರ ಸಾಧಿಸದವ.
ಆತ ತೀರಿಹೋಗಿ ಇಂದಿಗೆ 15 ವರ್ಷಗಳೇ ಸಂದಿವೆ. ಆತನಿಲ್ಲದ ಶೂನ್ಯ ಅವನನ್ನು ಮೆಚ್ಚುವವ ಎಲ್ಲರಲ್ಲೂ ಅಡಗಿಬಿಟ್ಟಿದೆ. ಆತನ ಸ್ಫೂರ್ತಿ ತುಂಬಿದ ಬದುಕು ಮಾತ್ರ ಎಲ್ಲರಿಗೂ ಬೆಳಕಾಗಿ ದಾರಿ ತೋರುತ್ತಿದೆ. ಆತನ ಹೆಸರಿನಲ್ಲಿ ರಂಗಶಂಕರ ನಿರ್ಮಾಣವಾಗಿದೆ. ಅಲ್ಲಿ ಸದಾ ರಂಗಸುಗ್ಗಿ-ರಂಗಸಂಭ್ರಮ.
ಬಾರೋ ಶಂಕರ! : 36 ಸಾಯುವ ವಯಸ್ಸೇನಲ್ಲ, ಆದರೂ ನೀನು ನಮ್ಮನ್ನೆಲ್ಲ ತೊರೆದು, ಅಷ್ಟು ಬೇಗ ಹೋದೆಯಲ್ಲ ಯಾಕೆ? ಬರಲು ಸಾಧ್ಯವಿದ್ದರೆ ಮತ್ತೆ ಅವತರಿಸಿ ಬಾ... ನಿನಗಾಗಿ ನಾವೆಲ್ಲ ಕಾಯುತ್ತಲೇ ಇದ್ದೇವೆ... ಹಾಂ! ಕಾಯುತ್ತಿರುವವರಲ್ಲಿ ನಿನ್ನ ಮಗಳು ಕಾವ್ಯ, ಪತ್ನಿ ಅರುಂಧತಿನಾಗ್, ನಿನ್ನಣ್ಣ ಅನಂತ್‌ನಾಗ್, ಅತ್ತಿಗೆ ಗಾಯತ್ರಿ, ನಿನ್ನಣ್ಣನ ಮಗಳು ಎಲ್ಲರೂ ಇದ್ದಾರೆ...! ಬರ್ತೀಯಾ!?
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications