»   » ‘ನನ್ನ ಹೆಂಡತಿ ತಾಯಿಯೂ ಹೌದು...’

‘ನನ್ನ ಹೆಂಡತಿ ತಾಯಿಯೂ ಹೌದು...’

Posted By:
Subscribe to Filmibeat Kannada

* ದಟ್ಸ್‌ ಕನ್ನಡ ಬ್ಯೂರೊ

ಅದು ರಾಜ್‌ಕುಮಾರ್‌ ಸನ್ಮಾನ ಕಾರ್ಯಕ್ರಮ. ಈಟೀವಿ-ವಾಟಿಕ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಸನ್ಮಾನ ಸ್ವೀಕರಿಸಿದ ರಾಜ್‌, ತಮ್ಮ ವನವಾಸದ ಅನುಭವ, ಚಿತ್ರರಂಗದ ಅನುಭವಗಳ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಕುಳಿತಿದ್ದ ನಾಡೋಜ ಪಾಟೀಲ ಪುಟ್ಟಪ್ಪನವರು, ‘ ನಿಮ್‌ ಹೆಣ್ತೀ ಪಾರ್ವತಮ್ಮನವರ ಬಗ್ಗೆ ಹೇಳ್ರೀ...’ ಅಂತ ಅಣ್ಣಾವ್ರನ್ನು ರೇಗಿಸಿದರು.

‘ಆಕೆ ಬಗ್ಗೆ ಏನು ಹೇಳಲಿ ? ಪಾರ್ವತಿ ನನ್ನ ಹೆಂಡತಿಯೂ ಹೌದು. ತಾಯಿಯೂ ಹೌದು...’ ಎಂದು ಎರಡು ಕ್ಷಣ ಮೌನವಾದರು. ಗಂಡನ ಪಕ್ಕ ಕುಳಿತಿದ್ದ ಪಾರ್ವತಮ್ಮನವರೂ ಕೆನ್ನೆಗೆ ಕೈ ಕೊಟ್ಟು ಗಂಡನ ಭಾಷಣವನ್ನು ಮೌನವಾಗಿ ಕೇಳುತ್ತಿದ್ದರು.

ಅ.29ರ ಬುಧವಾರ ವರನಟ ರಾಜ್‌ಕುಮಾರ್‌ ಅವರಿಗೆ ಮುಖ್ಯಮಂತ್ರಿ ಎಸ್ಸೆಂ. ಕೃಷ್ಣ ವಾಟಿಕಾ ವರ್ಷದ ಕನ್ನಡಿಗ- 2003 ಪ್ರಶಸ್ತಿ ನೀಡಿ ಗೌರವಿಸಿದರು. ಈ ಟಿ. ವಿ. ಕನ್ನಡ ವಾಹಿನಿ ಆಯೋಜಿಸಿದ್ದ ಈ ಪ್ರಶಸ್ತಿಗೆ ವಾಹಿನಿಯ ವೀಕ್ಷಕರು ರಾಜ್‌ಕುಮಾರ್‌ ಅವರನ್ನು ಆರಿಸಿದ್ದರು. ಪ್ರಶಸ್ತಿ ನೀಡಿದ ಮುಖ್ಯಮಂತ್ರಿ, ಈ ಟೀವಿಯ ಜನಮುಖೀ ಪ್ರಯತ್ನವನ್ನು ಹಾಗೂ ರಾಜ್‌ ಕುಮಾರ್‌ ಅವರ ಸಾಧನೆಯನ್ನು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿದ ರಾಜ್‌ ಭಾವುಕರಾಗಿದ್ದರು. ವೀರಪ್ಪನ್‌ ಸೆರೆಯಿಂದ ತಮ್ಮನ್ನು ಬಿಡಿಸಲು ಪ್ರಯತ್ನಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಹೇಳಿ, ಗೋಕಾಕ ಚಳವಳಿ ಹಾಗೂ ಕನ್ನಡ ಚಿತ್ರರಂಗದ ಸಾಧನೆಯ ಬಗ್ಗೆ ಮಾತು ಶುರು ಮಾಡಿದರು.

‘ಯಾವ ಸಾಧನೆಯನ್ನೂ ನಾನು ಮಾಡಿದೆ ಎನ್ನಲಾರೆ. ಎಲ್ಲವನ್ನೂ ನನ್ನಿಂದ ಚಿತ್ರರಂಗದ ಮಹನೀಯರು ಮಾಡಿಸಿದರು. ಭಕ್ತಿ ಪ್ರಧಾನ ಪಾತ್ರದಿಂದ ಹಿಡಿದು ಜೇಮ್ಸ್‌ ಬಾಂಡ್‌ ಪಾತ್ರದವರೆಗೆ. ನನ್ನದೇ ಆದ ದಾರಿ ಅಂತೇನೂ ಇರಲಿಲ್ಲ. ಅನೇಕ ಮಹನೀಯರು ತೋರಿದ ದಾರಿಯೇ ನನ್ನದಾಯಿತು. ಯಾಕಂದ್ರೆ ನಾನು ಓದಿದವನಲ್ಲ, ವೇದ ಮಂತ್ರ ತಿಳಿದವನಲ್ಲ, ಬರೆದವನೂ ಅಲ್ಲ’ ಎಂದು ವಿನಯದ ಮಾತಾಡಿದರು.

ಅಂದ ಹಾಗೆ ರಾಜ್‌ ನಟಿಸಿದ ಹಲವು ಚಿತ್ರಗಳನ್ನು ಅವರು ಸ್ವತಃ ನೋಡಿಯೇ ಇಲ್ಲವಂತೆ. ಈಗ ಆ ಚಿತ್ರಗಳನ್ನು ನೋಡಿದರೂ, ತಾವು ಪಾತ್ರವನ್ನು ಸರಿಯಾಗಿ ನಿರ್ವಹಿಸಿಲ್ಲ ಎನಿಸಿ ನೋಡುವುದನ್ನೇ ನಿಲ್ಲಿಸಿ ಬಿಡುತ್ತಾರಂತೆ. ಮಂತ್ರಾಲಯ ಮಹಾತ್ಮೆ ನನಗೆ ತೃಪ್ತಿಕೊಟ್ಟ ಚಿತ್ರ. ಈ ಚಿತ್ರವನ್ನು ನೋಡಿ ಎಂದು ನಾನು ಅನೇಕರಿಗೆ ಹೇಳಿದ್ದೇನೆ ಎಂದು ರಾಜ್‌ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಟೀವಿ ಸಮೂಹದ ಅಧ್ಯಕ್ಷ ರಾಮೋಜಿ ರಾವ್‌ ಮಾತನಾಡಿ, ಈ ಟೀವಿಗೆ ಮೂರು ವರ್ಷ ತುಂಬುತ್ತಿದೆ. ನಮ್ಮನೆಯ ಹೂವನ್ನು ನಿಮ್ಮನೆಗೆ ಅರ್ಪಿಸಿದ್ದೇವೆ. ಸ್ವೀಕರಿಸಿ, ಬೆಳೆಸಿದ್ದೀರಿ. ಅದಕ್ಕಾಗಿ ತಾವು ಋಣಿಯಾಗಿದ್ದೇವೆ ಎಂದು ಖುಷಿಪಟ್ಟರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada