»   » ಮನೆ ಗೆದ್ದು ಮಾರು ಗೆದ್ದವರು..

ಮನೆ ಗೆದ್ದು ಮಾರು ಗೆದ್ದವರು..

Posted By: Staff
Subscribe to Filmibeat Kannada

ಇದು ಕಾಸರವಳ್ಳಿ ಕುಟುಂಬ. ಬಿಡುವು ಸಿಕ್ಕರೆ ಕಾಸರವಳ್ಳಿಗಳು ಪ್ರಯಾಣ ಮಾಡುವುದು ತುಂಬಾ ಕಡಿಮೆ. ಒಂದು ಒಳ್ಳೆಯ ಕಲಾತ್ಮಕ ಚಿತ್ರದ ಕ್ಯಾಸೆಟ್‌ ತಂದು ಹಾಕಿಕೊಂಡು, ಎಲ್ಲರೂ ಕೂತು ನೋಡುವುದು ಅವರ ಹ್ಯಾಬಿಟ್‌. ರಾಷ್ಟ್ರಪ್ರಶಸ್ತಿ ವಿಜೇತ ಗಿರೀಶ್‌ ಕಾಸರವಳ್ಳಿ ನೇತೃತ್ವದ ಕಾಸರವಳ್ಳಿ ಫ್ಯಾಮಿಲಿಯಲ್ಲಿ ಇದೇನೂ ಆಶ್ಚರ್ಯವಲ್ಲ ಅಲ್ವೇ ...

'ಅಪ್ಪ ಮಾಡ್ತಾರಲ್ಲ ... ಅಂತಹುದೇ ಸಿನಿಮಾಗಳನ್ನ ನೋಡುವುದೆಂದರೆ ನಮ್ಗೆ ತುಂಬಾ ಇಷ್ಟ " ಅಂತ ಕಾಸರವಳ್ಳಿಯವರ ಮಗಳು ಅನನ್ಯಾ ಹೇಳುತ್ತಾಳೆ. ಆಕೆಗೀಗ 19 ವರ್ಷ ವಯಸ್ಸು. ಹೃತಿಕ್‌ ರೋಷನ್‌, ಅಕ್ಷಯ್‌ ಕುಮಾರ್‌ ಹೀರೋಗಳ ಕನಸು ಕಾಣುವ ವಯಸ್ಸು. ಅನನ್ಯಾಗೂ ನಟನಾ ಕಲೆ ಒಲಿದಿದೆ. ಆಕೆ ಮೂರು ಟೆಲಿ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾಳೆ. ಕಾವೇರಿ ಕಂಗಳಲಿ, ಲಕ್ಷ್ಮಿ ಕಟಾಕ್ಷ, ಮೂಕರಾಗ ಧಾರಾವಾಹಿಗಳಲ್ಲಿ ಆಕೆಯದೇ ಮುಖ್ಯ ಪಾತ್ರ. ಸಿನಿಮಾ ವಿಷಯಕ್ಕೆ ಬಂದರೆ ಆಕೆಗೆ ಮಸಾಲೆ ಚಿತ್ರಗಳಿಗಿಂತ ಆರ್ಟ್‌ ಫಿಲ್ಮ್‌ಗಳತ್ತಲೇ ಒಲವು.

ನಾನು ಉತ್ತಮ ನಟಿಯಾಗಬೇಕು ಅಂತ ಹೇಳಿಕೊಳ್ಳಲು ಅನನ್ಯಾ ನಾಚಿಕೊಳ್ಳುತ್ತಾಳೆ. ಅವರಮ್ಮ ವೈಶಾಲಿ ಕಾಸರವಳ್ಳಿ, 'ಪರವಾಗಿಲ್ಲ, ನಾನು ದೊಡ್ಡ ನಟಿಯಾಗಬೇಕು ಅಂತ ಹೇಳೇ..." ಅಂತ ಮಗಳ ಬೆನ್ನು ಚಪ್ಪರಿಸುತ್ತಾರೆ.

ವೈಶಾಲಿಯವರ ಬಗ್ಗೆ ಯಾರಿಗೆ ಗೊತ್ತಿಲ್ಲ. ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳ ಕ್ರೆಡಿಟ್‌ ಕಟ್ಟಿಕೊಂಡವರು... ಗಿರೀಶ್‌ ಮತ್ತು ವೈಶಾಲಿಯವರ ಸಂಬಂಧ ಮೊಗ್ಗೊಡೆದುದೇ 'ಆಕ್ರಮಣ" ಚಿತ್ರದ ಸೆಟ್ಟಿನಲ್ಲಿ. 'ಅವರ ಬುದ್ಧಿ ಮತ್ತೆ ಕಂಡೇ ನಾನು ಬೆರಗಾಗಿದ್ದು. ಪ್ರೀತಿಸಿಯೇ ಮದುವೆಯಾದೆವು. ಆಕ್ರಮಣ ಚಿತ್ರವೇ ನಾವಿಬ್ಬರೂ ನಟಿಸಿದ ಕೊನೆಯ ಚಿತ್ರವಾಯ್ತು."

ಅಷ್ಟು ಒಳ್ಳೊಳ್ಳೆಯ ಚಿತ್ರಗಳನ್ನು ಗಿರೀಶರು ಮಾಡಿದ್ದಾರಲ್ಲಾ.. ನಿಮ್ಮಂತ ಕಲಾವಿದೆಗೆ ಅವರೇಕೆ ಅವಕಾಶ ಕೊಟ್ಟಿಲ್ಲ.... ಎಂದು ಕೇಳಿದರೆ ವೈಶಾಲಿ ಈಗಲೂ ನಾಚಿಕೊಳ್ಳುತ್ತಾರೆ. ಇಲ್ಲ.. ಮದುವೆಯಾದಾಗ ನಾನು ಚೆಂದ ಇದ್ದೆ... ಅವರು ನನ್ನನ್ನು ಯಾವುದೇ ಸಿನಿಮಾಕ್ಕೆ ಹಾಕಿಕೊಳ್ಳಲಿಲ್ಲ. ಈಗ ಬಿಡಿ.. ನಾನು ತುಂಬಾ ದಪ್ಪಗಾಗಿದ್ದೇನೆ.

ಗಿರೀಶರನ್ನು ಮಾತಿಗೆಳೆಯುವುದು ಸ್ವಲ್ಪ ಕಷ್ಟ. ಎಷ್ಟು ಬೇಕೋ ಅಷ್ಟೇ ಮಾತು. ಮಗ ಅಪೂರ್ವ 'ದ್ವೀಪ" ಚಿತ್ರದಲ್ಲಿ ಅಪ್ಪನಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಅಪೂರ್ವ ಕೂಡ ಸಿನಿಮಾ ಕ್ಷೇತ್ರದಲ್ಲೇ ವ್ಯಸ್ತರು. ಎಡಿಟಿಂಗ್‌ ಅವರ ಇಷ್ಟದ ವಿಷ್ಯ. ಜಾಹೀರಾತು ಚಿತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಬಜಾಜ್‌ ಮತ್ತು ಕ್ರೋಸಿನ್‌ ಜಾಹೀರಾತು ಅಭಿಯಾನಗಳಲ್ಲಿ ಕೆಲಸ ಮಾಡಿದ್ದಾರೆ.

'ಮಕ್ಕಳಿಗೆ ಗುಣಮಟ್ಟದ ಚಿತ್ರಗಳನ್ನ ತೋರಿಸುವಾಗಲೂ ಅದರಲ್ಲಿರುವ ಅತ್ಯುತ್ತಮ ಅಂಶಗಳ ಬಗ್ಗೆ ಅವರಿಗೆ ವಿವರಿಸುತ್ತೇವೆ. ಆದರೆ ಕೊನೆಯಾಗಿ ಸಿನೆಮಾದ ಬಗೆಗಿನ ನಿರ್ಣಯ ಮಾತ್ರ ಅವರಿಗೇ ಬಿಟ್ಟದ್ದು. ಅವರ ಅಭಿರುಚಿಯೂ ಚೆಂದಾಗಿ ಬೆಳೆಯುವುದಕ್ಕೇ ಅವಕಾಶ ಕೊಡಬೇಕಲ್ಲ..." - ವೈಶಾಲಿಯ ಕಾಳಜಿಯ ಮಾತು.

ಅಂದ ಹಾಗೆ ಸದ್ಯಕ್ಕೆ ಗಿರೀಶ್‌ ಕಾಸರವಳ್ಳಿ, ಎಸ್‌.ಎಲ್‌.ಭೈರಪ್ಪನವರ ಕಾದಂಬರಿ ಆಧಾರಿತ 'ಗೃಹಭಂಗ" ಧಾರಾವಾಹಿ ಶೂಟಿಂಗ್‌ನಲ್ಲಿ ವ್ಯಸ್ತ.

English summary
The Kasarvallis... dedicated to quality cinema

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada