ಥೈರಾಯಿಡ್ ಸಮಸ್ಯೆ ಗೆದ್ದು ಬಂದ ಶರ್ಮಿಳಾ ಮಾಂಡ್ರೆ
'ಸ್ವಯಂವರ' ಹಾಗೂ 'ಕರಿಚಿರತೆ' ಚಿತ್ರಗಳ ಬಳಿಕ ಬೆಂಗಳೂರು ಬೆಡಗಿ ಶರ್ಮಿಳಾ ಮಾಂಡ್ರೆ ಅಕ್ಷರಶಃ ನಾಪತ್ತೆಯಾಗಿದ್ದರು. ಅವರ ನಾಪತ್ತೆಗೆ ಕಾರಣ ಏನು ಎಂದು ಹುಡುಕ ಹೊರಟರೆ ಸಿಗುವ ಉತ್ತರ ಸಖೇದಾಶ್ಚರ್ಯಕ್ಕೆ ಕಾರಣವಾಗುತ್ತದೆ!
ಇಸವಿ 2010ರಲ್ಲಿ ಬಿಡುಗಡೆಯಾಗಿದ್ದು ಮೇಲಿನ ಎರಡೇ ಎರಡು ಚಿತ್ರಗಳು.ಕನ್ನಡದಲ್ಲಿ ಶರ್ಮಿಳಾಗೆ ಅವಕಾಶಗಳು ತಳಕಚ್ಚಿದ್ದರೂ ಲೋಕಲ್ ಜಾಹೀರಾತುಗಳಲ್ಲಿ ಮಾತ್ರ ಮಿಂಚಿದ್ದುಂಟು. ಗ್ಲಾಮರ್ ಗರ್ಲ್ ಆಗಿ 'ಸಜನಿ'ಯಲ್ಲಿ, ಹಳ್ಳಿ ಹುಡುಗಿಯಾಗಿ 'ಕೃಷ್ಣ' ಚಿತ್ರದಲ್ಲಿ ಶರ್ಮಿಲಾ ಮಿಂಚಿದ್ದು ಇನ್ನೂ ಚಿತ್ರರಸಿಕರು ಮರೆತಿಲ್ಲ.
ಏತನ್ಮಧ್ಯೆ ಶರ್ಮಿಳಾ ಅವರಿಗೆ ಥೈರಾಯಿಡ್ ಸಮಸ್ಯೆ ಎದುರಾಯಿತು. ಮೊದಲೇ ಅವಕಾಶಗಳಿಲ್ಲದೆ ಸೊರಗಿದ್ದ ಈಕೆ ಥೈರಾಯಿಡ್ ಸಮಸ್ಯೆಯಿಂದ ಮತ್ತಷ್ಟು ಬಳಲುವಂತಾಯಿತು. ಕಳೆದ ಒಂದು ತಿಂಗಳಿಂದ ಬಳಲುತ್ತಿದ್ದ ಶರ್ಮಿಳಾ ಈಗಷ್ಟೇ ಚೇತರಿಸಿಕೊಂಡಿದ್ದಾರೆ.
ತಮ್ಮ ಮುಂದಿನ ಚಿತ್ರದಲ್ಲಿ ಸೂಪರ್ ಸೆಕ್ಸಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು. ಅದು ಯಾವ ಚಿತ್ರ ಅದರ ಕುಲಗೋತ್ರಗಳೇನು ಎಂಬುದು ಇನ್ನಷ್ಟೇ ಹೊರಬೀಳಬೇಕಾಗಿದೆ. ಇತ್ತೀಚೆಗೆ ಶರ್ಮಿಳಾ ಸಹಿಹಾಕಿದ್ದ ತಮಿಳು ಚಿತ್ರದ ಶೂಟಿಂಗ್ ಆರಂಭವಾಗಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











