ಪುನೀತ್ ರಾಜ್ ಕುಮಾರ್ ಪರಮಾತ್ಮನಿಗೆ ದೀಪಾ ಸನ್ನಿದ್ಧಿ
ಛಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಅವಕಾಶ ಗಿಟ್ಟಿಸಿದ್ದ ದೀಪಾ ಸನ್ನಿದ್ಧಿ ಎಂಬ ಬೆಡಗಿಗೆ ಈಗ ಬಂಪರ್ ಆಫರ್ ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ನಟಿಸುವ ಯೋಗ ಕೂಡಿ ಬಂದಿದೆ. ಎಲ್ಲಾ 'ಪರಮಾತ್ಮ'ನ ಲೀಲೆ ಎನ್ನುತ್ತಾರೆ ದೀಪಾ! ಈಕೆ ಮೂಲತಃ ಚಿಕ್ಕಮಗಳೂರಿನವರು.
ದರ್ಶನ್ ಜತೆ ನಟಿಸುತ್ತಿರುವ 'ಸಾರಥಿ' ಚಿತ್ರ ಅದ್ಯಾಕೋ ಏನೋ ತೆರೆಗೆ ಬರಲು ಪ್ರಸವ ವೇದನೆ ಅನುಭವಿಸುತ್ತಿದೆ. ಅಷ್ಟರಲ್ಲಾಗಲೆ ಈಕೆ ಪುನೀತ್ ಚಿತ್ರದಲ್ಲಿ ಭರ್ಜರಿ ಛಾನ್ಸ್ ಗಿಟ್ಟಿಸಿದ್ದಾಳೆ. ಕನ್ನಡ ಚಿತ್ರರಂಗದ ಸದ್ಯದ ಯಶಸ್ವಿ ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್, ಕಟ್‌ನಲ್ಲಿ ಬರುತ್ತಿರುವ ಚಿತ್ರ 'ಪರಮಾತ್ಮ'ನನ್ನು ದೀಪಾ ಸನ್ನಿದ್ಧಿ ಬಿಗಿದಪ್ಪಿದ್ದಾರೆ.
ಪುನೀತ್ ಜತೆ ನಟಿಸಲು ಅವಕಾಶ ಸಿಕ್ಕಿರುವ ಬಗ್ಗೆ ದೀಪಾ ಫುಲ್ ಖುಷ್ ಆಗಿದ್ದು, ಎಷ್ಟೋ ಮಂದಿ ನಟಿಯರಿಗೆ ಸಿಗದ ಅವಕಾಶ ತನ್ನ ಪಾಲಾಗಿರುವ ಸಂಭ್ರಮದಲ್ಲಿ ಬೀಗುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಬ್ಬರು ಬಿಗ್ ಸ್ಟಾರ್‌ಗಳ ಜತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುತ್ತಾರೆ ದೀಪಾ.
ಅಂದಹಾಗೆ 'ಸಾರಥಿ' ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಹೇಗಾದರೂ ಮಾಡಿ ಫೆಬ್ರವರಿ ಹೊತ್ತಿಗೆ 'ಸಾರಥಿ' ಚಿತ್ರೀಕರಣವನ್ನು ತೆರೆಗೆ ತರಬೇಕು ಎಂಬ ಭಗೀರಥ ಪ್ರಯತ್ನದಲ್ಲಿ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ದಿನಕರ್ ತೂಗುದೀಪ ಲೆಕ್ಕಾಚಾರ ಹಾಕುತ್ತಿದ್ದಾರೆ. ಚಿತ್ರ ಯಾಕೆ ಇಷ್ಟು ತಡವಾಗುತ್ತಿದೆ ಎಂಬ ಬಗ್ಗೆ ಆಕೆಗೂ ಸ್ಪಷ್ಟವಾದ ಕಾರಣ ಗೊತ್ತಿಲ್ಲವಂತೆ. ಚಿತ್ರದಲ್ಲಿ ನಟಿಸುವುದಷ್ಟೇ ನನ್ನ ಕೆಲಸ. ಉಳಿದ ವಿಚಾರಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಧೋರಣೆ ಆಕೆಯದು.
ಸಾರಥಿ ಚಿತ್ರೀಕರಣ ಮುಗಿಯುವವರೆಗೂ ಬೇರೊಂದು ಪ್ರಾಜೆಕ್ಟ್ ಒಪ್ಪಿಕೊಳ್ಳಬಾರದು ಎಂದು ಚಿತ್ರದ ನಿರ್ದೇಶಕ ದಿನಕರ್ ತೂಗುದೀಪ್ ಕಟ್ಟಾಜ್ಞೆ ಮಾಡಿದ್ದರಂತೆ ಹೌದೆ? ಎಂದರೆ. ಆ ರೀತಿಯ ಯಾವುದೇ ಒಡಂಬಡಿಕೆ ಇಲ್ಲ. 'ಪರಮಾತ್ಮ' ಚಿತ್ರದ ಆಫರ್ ಬಂದಾಗ ನಾನು ಅವರೊಂದಿಗೆ ಚರ್ಚಿಸಿಯೇ ಮುಂದಡಿ ಇಟ್ಟಿದ್ದೇನೆ ಎನ್ನುತ್ತಾರೆ.
ಭಟ್ಟರ ಚಿತ್ರದಲ್ಲಿ ನಟಿಸುವ ಛಾನ್ಸ್ ಸಿಕ್ಕಿರುವುದಕ್ಕೆ ದಿನಕರ್ ತೂಗುದೀಪ್ ಅವರಿಗೂ ಸಂತಸವಾಗಿದೆಯಂತೆ. ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಒಪ್ಪಿಕೊಂಡು ಮುನ್ನುಗ್ಗಿ ಎಂದು ಅವರೇ ಬೆನ್ನುತಟ್ಟಿದರು ಕಳುಹಿಸಿದ್ದಾರೆ ಎನ್ನುವ ಆಕೆ, ಸುದೀಪ್ ಚಿತ್ರ ಕೈತಪ್ಪಿದ್ದಕ್ಕೆ ಬೇಸರವೂ ಇದೆಯಂತೆ. ಮುಂದೊಂದು ದಿನ ಸುದೀಪ್ ಚಿತ್ರಕ್ಕೆ ಕರೆಬಂದರೆ ಎರಡೂ ಕೈಗಳಲ್ಲಿ ಸ್ವೀಕರಿಸುತ್ತೇನೆ. 'ಪರಮಾತ್ಮ' ಚಿತ್ರದಲ್ಲಿ ಅವಕಾಶ ಅಷ್ಟು ಸುಲಭವಾಗಿಯೇನು ಸಿಕ್ಕಿಲ್ಲ. ಎರಡು ಆಡಿಷನ್‍ಗಳ ಬಳಿಕ ಈ ಅವಕಾಶ ಸಿಕ್ಕಿತು.
ಯೋಗರಾಜ್ ಭಟ್ ಚಿತ್ರಕ್ಕೆ ಆಡಿಷನ್ ಎಂದಾಗ ನನಗೆ ಕೊಂಚ ಭಯವಾಯಿತು. ಆಡಿಷನ್‌ಗೆ ಬಂದಿದ್ದ ಇನ್ನಿಬ್ಬರು ನಾಯಕಿಯರ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಈ ವಿಚಾರ ನನಗೆ ಸಂಬಂಧ ಪಟ್ಟಿದ್ದು ಅಲ್ಲ ಎನ್ನುವ ದೀಪಾ, ಭಟ್ಟರು ಸೂಚನೆ ಮೇರೆಗೆ ಮುಂದುವರಿಯುತ್ತಿದ್ದೇನೆ ಎನ್ನುವಷ್ಟು ಜಾಣೆ. ಚಿತ್ರರಂಗಕ್ಕೆ ಈಗಷ್ಟೆ ಅಂಬೆಗಾಲಿಡುತ್ತಿರುವ ಈಕೆ ನಾನಿನ್ನೂ ಕಲಿಯುತ್ತಿರುವ ವಿದ್ಯಾರ್ಥಿನಿ ಎನ್ನುತ್ತಾರೆ. [ಪುನೀತ್ ರಾಜ್‌ಕುಮಾರ್]


Click it and Unblock the Notifications











