»   » ಕುಲು ಮನಾಲಿಯಲ್ಲಿ 'ಗಂಗಾ ಕಾವೇರಿ' ಹಾಡು

ಕುಲು ಮನಾಲಿಯಲ್ಲಿ 'ಗಂಗಾ ಕಾವೇರಿ' ಹಾಡು

Subscribe to Filmibeat Kannada

'ಗಂಗಾ ಕಾವೇರಿ' ಚಿತ್ರದ ಹಾಡುಗಳ ಚಿತ್ರೀಕರಣ ಹಿಮಾಲಯದ ಸುಂದರ ಪರಿಸರದಲ್ಲಿ ಭರದಿಂದ ಸಾಗಿದೆ. ಹಿಮಾಲಯ ಅಂದ ತಕ್ಷಣ ನಮಗೆ ನೆನಪಾಗುವುದು ಅದೊಂದು ಕರ್ಮಭೂಮಿ, ದೇವಭೂಮಿ, ಪುಣ್ಯಭೂಮಿ, ತಪೋಭೂಮಿ, ಧ್ಯಾನಭೂಮಿ, ಜ್ಞಾನಭೂಮಿ, ಧಾರ್ಮಿಕ-ಸಾಂಸ್ಕೃತಿಕ-ದೈವಿಕ ಅಂಶಗಳ ಶೃಂಗಭೂಮಿ ಎಂದು! ನಾಲ್ಕು ವೇದಗಳು, ಹದಿನೆಂಟು ಪುರಾಣಗಳು, ಮಹಾಭಾರತ, ಬ್ರಹ್ಮಸೂತ್ರಗಳಂಥ ಅಧ್ಯಾತ್ಮದ ಉಗಮಸ್ಥಾನ. ಅಲ್ಲಿನ ಚಿತ್ರೀಕರಣ ಎಂತಹವರಿಗೂ ಮೈನವಿರೇಳಿಸುತ್ತದೆ.

ಚಿತ್ರದ ಮೂಹೂರ್ತ ಸನ್ನಿವೇಶವನ್ನು ಗಂಗೆಯ ಉಗಮ ಸ್ಥಾನ ಗಂಗೋತ್ರಿಯಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರದ ನಾಯಕ ಅಕ್ಷಯ್ ಅಭಯ್ ಹಾಗೂ ನಾಯಕಿ ಮಾಹಿವಿಜ್ ಅಭಿನಯದ ಹಲವು ದೃಶ್ಯಗಳನ್ನು ಕುಲು ಮನಾಲಿಯ ಸುಂದರ ಪರಿಸರದ ಹಿನ್ನಲೆಯಲ್ಲಿ ಛಾಯಾಗ್ರಾಹಕರಾದ ಎಚ್.ಸಿ. ವೇಣು ತಮ್ಮ ಕ್ಯಾಮೆರಾದಲ್ಲಿ ಬಂಧಿಸಿದರು.

ಕುಲು ಮನಾಲಿಯ ಕಣ್‌‍ತಣಿಸುವ, ಮನ ಮಿಡಿಯುವ ಸುಂದರ ಪರಿಸರದಲ್ಲಿನ ಚಿತ್ರೀಕರಣದ ಹಾಡಿನ ದೃಶ್ಯಗಳನ್ನು ಎಚ್.ಸಿ.ವೇಣು ತಮ್ಮ ಕ್ಯಾಮೆರಾದಲ್ಲಿ ವಿಷ್ಣುಕಾಂತ್‌ರ ನಿರ್ದೇಶನದಲ್ಲಿ ಸೆರೆಹಿಡಿದರು. ಚಿತ್ರೀಕರಣಕ್ಕಾಗಿ ವಿಶೇಷ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ಕಾವೇರಿ ಚಿತ್ರಕ್ಕೆಕಥೆ-ಚಿತ್ರಕಥೆ-ನಿರ್ದೇಶನ ವಿಷ್ಣುಕಾಂತ್ ಬಿ.ಜೆ. ಅವರದು.

ಚಿತ್ರದ ತಾರಾಗಣದಲ್ಲಿ ಅನಂತ್‌ನಾಗ್, ರಮೇಶ್‌ಭಟ್, ಚಿತ್ರಾ ಶಣೈ, ತಾರಾ, ರೂಪತಾರ ಸಿನಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಬಿ.ಗಣಪತಿ ಇದ್ದಾರೆ. ಸಿನಿಮಾ ಅಂಕಣಕಾರ ಗಣೇಶ್ ಕಾಸರಗೋಡು ಪ್ರಥಮ ಬಾರಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಕೆ.ಕಲ್ಯಾಣ ಸಂಗೀತ ನಿರ್ದೇಶಿಸುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಗಂಗಾ ಕಾವೇರಿ ಕುತೂಹಲ ಮೂಡಿಸಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada