ಫೆ.4ಕ್ಕೆ ಕಳ್ ಮಂಜನಿಗೆ ಬಿಡುಗಡೆ ಭಾಗ್ಯ
ಫೆಬ್ರವರಿ 4ರಂದು 'ಕಳ್ ಮಂಜ'ನಿಗೆ ಬಿಡುಗಡೆ ಭಾಗ್ಯ ಸಿಗಲಿದೆ. 'ಕಳ್ ಮಂಜ' ಯಾವಾಗ ಬರುತ್ತಾನೋ ಎಂದು ಎದುರು ನೋಡುತ್ತಿರುವ ಪ್ರೇಕ್ಷಕರಿಗೆ ಸಹಜವಾಗಿಯೇ ಸಂತಸವಾಗಿದೆ. "ನಂಬಿಕೆಗೆ ಇನ್ನೊಂದು ಹೆಸರು" ಮಂಜ ಬರ್ತಾ ಇದ್ದಾನೆ ಎಂದರೆ ಪ್ರೇಕ್ಷಕರಿಗೆ ಇದಕ್ಕಿಂತ ಆನಂದ ಇನ್ನೇನು ಬೇಕು.
ಸಂಪೂರ್ಣ ಮನರಂಜನಾತ್ಮಕ ಚಿತ್ರ'ಕಳ್ ಮಂಜ'. ಈ ಚಿತ್ರದ ಸೋಲು ಗೆಲುವು ತಮ್ಮ ಮುಂದಿನ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕೋಮಲ್ ಭಾವನಾತ್ಮಕವಾಗಿ ಹೇಳಿದ್ದಾರೆ. ಚಿತ್ರ ಯಶಸ್ವಿಯಾದರೆ ಕೋಮಲ್‌ರಿಂದ ಮತ್ತಷ್ಟು ಕಾಮಿಡಿ ನಿರೀಕ್ಷಿಸಬಹುದು. ಚಿತ್ರದ ಸೋಲು ಗೆಲುವು ಪ್ರೇಕ್ಷಕರ ಕೈಯಲ್ಲಿದೆ!
'ಕಳ್ ಮಂಜ' ಚಿತ್ರ 140 ನಿಮಿಷಗಳ ಕಾಲ ಪ್ರೇಕ್ಷಕರನ್ನು ನಕ್ಕು ನಲಿಸುತ್ತದೆ ಎಂಬ ಭರವಸೆಯನ್ನು ಕೋಮಲ್ ಕೊಟ್ಟಿದ್ದಾರೆ. 'ಕಳ್ ಮಂಜ'ನಿಗೆ ಪ್ರೇಕ್ಷಕ ಮನ ಸೋಲುತ್ತಾನೋ ಅಥವಾ ಕೈಕೊಡುತ್ತಾನೋ ಎಂಬುದು ಗೊತ್ತಾಗಬೇಕಾದರೆ ಹೆಚ್ಚು ಸಮಯ ಕಾಯಬೇಕಾಗಿಲ್ಲ.
ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಿರುವವರು ಪ್ರಭಾಕರ್. ಕೋಮಲ್ ಅವರ ಪತ್ನಿ ಅನಸೂಯ ಕೋಮಲ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಉದಯತಾರಾ, ಐಶ್ವರ್ಯ ನಾಗ್ ಚಿತ್ರದ ಇಬ್ಬರು ನಾಯಕಿಯರು. ವಿಶೇಷ ಪಾತ್ರದಲ್ಲಿ 'ಮಠ' ಗುರುಪ್ರಸಾದ್ ಕೂಡ ಚಿತ್ರದಲ್ಲಿ ಕಾಣಿಸಲಿದ್ದಾರೆ. [ಕೋಮಲ್]


Click it and Unblock the Notifications











