»   » ಹಾಡಿನ ಚಿತ್ರೀಕರಣದಲ್ಲಿ 'ಧಿಮಾಕು' ಮತ್ತು 'ಸಂಗಾತಿ'

ಹಾಡಿನ ಚಿತ್ರೀಕರಣದಲ್ಲಿ 'ಧಿಮಾಕು' ಮತ್ತು 'ಸಂಗಾತಿ'

Subscribe to Filmibeat Kannada

ಅಂಬಿಕಾ ಕಂಬೈನ್ಸ್ ಲಾಂಛನದಲ್ಲಿ ನಟ ಶ್ರೀನಿವಾಸಮೂರ್ತಿ ಅವರು ಅರ್ಪಿಸಿ ಶ್ರೀಮತಿ ಪುಷ್ಪಾಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಧಿಮಾಕು ಚಿತ್ರಕ್ಕೆ ಹಾಡುಗಳು ಚಿತ್ರೀಕೃತವಾಗುತ್ತಿರುವ ಸಮಯ. ಶ್ರೀನಿವಾಸಮೂರ್ತಿ ಹಾಗೂ ನಾಯಕ ನವೀನ್‌ಕೃಷ್ಣ ಸೇರಿದಂತೆ ಅನೇಕ ಗೀತರಚನೆಕಾರರು ಚಿತ್ರಕ್ಕೆ ಉತ್ತಮ ಗೀತೆಗಳನ್ನು ರಚಿಸಿದ್ದಾರೆ.

ಕೋಲಾರದ ಬಳಿಯ ಕೆರೆಹಳ್ಳಿಯಲ್ಲಿ ನವೀನ್‌ಕೃಷ್ಣ ಹಾಗೂ 15ಕ್ಕೂ ಹೆಚ್ಚು ನೃತ್ಯಗಾರರ ಅಭಿನಯದಲ್ಲಿ ಕವಿರಾಜ್ ಬರೆದಿರುವ
'ಸೂರ್ಯನೆ ಮೂಡೋದಿಲ್ಲ -- ಚಂದ್ರ ಬೆಳಗೋದಿಲ್ಲ....ನೀನಿಲ್ಲ ಅಂದಾಕ್ಷಣ' ಎಂಬ ಗೀತೆಯನ್ನು ಧನ್‌ಕುಮಾರ್ ಅವರ ನೃತ್ಯ ಸಂಯೋಜನೆಯಲ್ಲಿ ನಿರ್ದೇಶಕ ಮಗೇಶ್‌ಕುಮಾರ್ ಚಿತ್ರೀಕರಿಸಿಕೊಂಡರು.

ನಿಗದಿತ ಯೋಜನೆಯಂತೆ ಧಿಮಾಕು ಚಿತ್ರಕ್ಕೆ ಚಿತ್ರೀಕರಣ ಸಾಗುತ್ತಿದೆ ಎನ್ನುವ ನಿರ್ಮಾಪಕರು ಸದ್ಯದಲ್ಲೇ ಸಂಕಲನ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದಾರೆ. ನಾಯಕ ನವೀನ್‌ಕೃಷ್ಣ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣುತ್ತಿರುವ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಾಯಕನಾಗಷ್ಟೇ ಅಲ್ಲದೆ ನವೀನ್‌ಕೃಷ್ಣ ನಿರ್ದೇಶಕ ಮಗೇಶ್‌ಕುಮಾರ್ ಅವರೊಟ್ಟಿಗೆ ಕಥೆ, ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ವಿನೋದ್‌ಭಾರತಿ ಛಾಯಾಗ್ರಹಣ, ಬಸವರಾಜ್ ಸಂಕಲನ, ರಘು ಜೆ ರಾಮ್ ಸಹನಿರ್ದೇಶನ, ಶಂಕರ್‌ಬಿಲ್ಲೇಮನೆ ಸಂಭಾಷಣೆ, ಹೊಸ್ಮನೆಮೂರ್ತಿ ಕಲಾ ನಿರ್ದೇಶನ, ಧನ್‌ಕುಮಾರ್, ಗೋಕುಲ್ ನೃತ್ಯ ನಿರ್ದೇಶನ, ಟಿ ಎನ್ ಎಲ್ ಶಾಸ್ತ್ರಿ, ಸುರೇಶ್, ವಿ.ವಿ.ಸುಬ್ಬರಾವ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ನವೀನ್‌ಕೃಷ್ಣ, ಪಾವನಿ, ಮಯೂರಿ, ರಂಗಾಯಣರಘು, ಸುಧಾಬೆಳವಾಡಿ, ಸುಂದರರಾಜ್, ಶರಣ್, ರಮೇಶ್‌ಭಟ್, ರೂಪಾಪ್ರಭಾಕರ್, ಗಿರೀಶ್, ಕೈಲಾಶ್ ಮುಂತಾದವರಿದ್ದಾರೆ.


'ಸಂಗಾತಿಗಾಗಿ ಪದ ಬಿಡಿಸಿದ ಹಂಸಲೇಖ
ಹೊಸ ನಾಯಕ, ನಾಯಕಿಯರ ಚಿತ್ರಕ್ಕೆ ಮಾಧುರ್ಯ ತುಂಬಿದ ಗೀತೆಗಳನ್ನು ಬರೆದು ,ರಾಗ ಸಂಯೋಜನೆ ಮಾಡುವ ಕಾಯಕದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತೊಡಗಿದ್ದಾರೆ.

ಇತ್ತೀಚೆಗೆ ಮೈಸೂರ್‌ಲ್ಯಾಂಪ್ಸ್ ಆವರಣದಲ್ಲಿ ಕಲಾ ನಿರ್ದೇಶಕ ಮೋಹನ್ ಪಂಡಿತ್ ನಿರ್ಮಿಸಿದ್ದ ಸುಂದರ ಸೆಟ್‌ನಲ್ಲಿ ಹಂಸಲೇಖ ಅವರು ರಚಿಸಿರುವ
'ಪದ ಬಿಡಿಸುವ ಕವಿಯಲ್ಲ - ಮೊಗ ಬಿಡಿಸುವ ಕರವಲ್ಲ....ಎದೆಯ ಆಸೆ ತೂಗಿದೆ ಬಾರಾ . . .' ಎಂಬ ಹಾಡಿಗೆ ಹರೀಶ್‌ಪಾಯ್ ಅವರ ನೃತ್ಯ ಸಂಯೊಜನೆಯಲ್ಲಿ ಚೇತನ್, ಐಶ್ವರ್ಯ ಅಜಿತ್ ಹಾಗೂ ಸಹ ನೃತ್ಯಗಾರರು ಹೆಜ್ಜೆ ಹಾಕಿದರು.

ಲೇಟ್ ಆದರೂ ಲೇಟಸ್ಟಾಗಿರಬೇಕು ಎಂಬುವುದು ಅಧುನಿಕ ಯುಗದ ನೀತಿ. ಈ ನೀತಿಯನ್ನು ಪಾಲಿಸುತ್ತಿರುವ ಸಂಗಾತಿ ಚಿತ್ರದ ನಿರ್ಮಾಪಕರಾದ ಪುಷ್ಪಾ ಭೈರೇಗೌಡರು ಚಿತ್ರೀಕರಣ ತಡವಾದರೂ ಚಿತ್ರ ಚೆನ್ನಾಗಿ ಮೂಡಿ ಬರಬೇಕು ಎನ್ನುತ್ತಾರೆ. ಭವ್ಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುರುವ ಸಂಗಾತಿ ಚಿತ್ರದ ನಿರ್ದೇಶಕರು ಶ್ರೀನಿವಾಸರಾಜು. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ.

ಉಳಿದಂತೆ ಕೆ.ದತ್ತು ಅವರ ಛಾಯಾಗ್ರಹಣ, ಮೋಹನ್ ಪಂಡಿತ್ ಕಲೆ, ರಾಮ್‌ಶೆಟ್ಟಿ ಸಾಹಸ, ಬಿ.ಎಲ್.ವೇಣು ಸಂಭಾಷಣೆ, ಸುರೇಶ್ ಅರಸ್ ಸಂಕಲನ, ಮೋಹನ್ ಮಾಳಗಿ ಸಹ ನಿರ್ದೇಶನ, ರಾಜು ಸುಂದರಂ ಮತ್ತು ತಾರಾ ಅವರ ನೃತ್ಯ ನಿರ್ದೇಶನ, ಟೆನ್‌ಷನ್ ನಾಗರಾಜ್ ಹಾಗೂ ಹೊಸಹಳ್ಳಿ ಸುಧೀಂದ್ರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಗಣದಲ್ಲಿ ಚೇತನ್, ಐಶ್ವರ್ಯ ಅಜಿತ್, ಪ್ರತೀಕ್ಷಾ ಶೆಟ್ಟಿ, ಗಿರೀಶ್ ಕಾರ್ನಾಡ್, ಸುಧಾ ಬೆಳವಾಡಿ, ವಿನಯಾ ಪ್ರಕಾಶ್, ಕಿಶೋರ್, ಹರಿ, ನವೀನ್, ಮಹೇಶ್, ಅಮೃತ ಇದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada